ಸಮಾಜದ ಸೇವೆಯಲ್ಲಿಯೇ ಸಾರ್ಥಕ್ಯವಿದೆ ಎಂಬ ಅರಿವು ಮೂಡಿದರೆ ಯಶಸ್ಸು ಸಾಧ್ಯ-ನಾಗರಾಜ ಶೆಟ್ಟಿ

KannadaprabhaNewsNetwork | Published : Mar 15, 2024 1:19 AM

ಸಾರಾಂಶ

ಸಮಾಜದ ಸೇವೆಯಲ್ಲಿಯೇ ಸಾರ್ಥಕ್ಯವಿದೆ ಎಂಬ ಅರಿವು ಮೂಡಿದರೆ ಮಾತ್ರ ಸಾಮಾಜಿಕ ಸಂಘಟನೆಗಳಲ್ಲಿ ಯಶಸ್ಸು ಕಾಣಲು ಸಾಧ್ಯವಿದ್ದು, ಸಮಯ ಸದುಪಯೋಗಕ್ಕೆ ಮುಂದಾಗಿ, ಸತ್ಕಾರ್ಯಕ್ಕಾಗಿ ಸಾಧಿಸಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಹೇಳಿದರು.

ಹಾನಗಲ್ಲ: ಸಮಾಜದ ಸೇವೆಯಲ್ಲಿಯೇ ಸಾರ್ಥಕ್ಯವಿದೆ ಎಂಬ ಅರಿವು ಮೂಡಿದರೆ ಮಾತ್ರ ಸಾಮಾಜಿಕ ಸಂಘಟನೆಗಳಲ್ಲಿ ಯಶಸ್ಸು ಕಾಣಲು ಸಾಧ್ಯವಿದ್ದು, ಸಮಯ ಸದುಪಯೋಗಕ್ಕೆ ಮುಂದಾಗಿ, ಸತ್ಕಾರ್ಯಕ್ಕಾಗಿ ಸಾಧಿಸಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಹೇಳಿದರು.

ಹಾನಗಲ್ಲಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹಾನಗಲ್ಲ ತಾಲೂಕು ಮಟ್ಟದ ಸೇವಾ ಪ್ರತಿನಿಧಿಗಳ ಒಂದು ದಿನದ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಡಾ. ವೀರೇಂದ್ರ ಹೆಗ್ಗಡೆ ಅವರ ಆಶಯ ಈಡೇರಲು ಎಲ್ಲ ಸಂಘದ ಪ್ರತಿನಿಧಿಗಳು ಕ್ರಿಯಾಶೀಲರಾಗಿ ಸೇವೆ ಸಲ್ಲಿಸಬೇಕು. ನಮ್ಮ ಕೆಲಸದ ಬಗ್ಗೆ ಶ್ರದ್ಧೆ ಇರಬೇಕು. ಕೊಟ್ಟ ಕಾರ್ಯವನ್ನು ಅಚ್ಚುಕಟ್ಟಾಗಿ ನಿರೂಪಿಸಬೇಕು. ನಮಗೆ ಸಮಾಜ ಸೇವೆಯಿಂದ ಒಳ್ಳೆಯದನ್ನು ಮಾಡುವುದೇ ದೊಡ್ಡ ಪ್ರಶಸ್ತಿ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕೃಷಿಕ ಸೇವೆಯಲ್ಲಿ ನಮ್ಮ ಸಂಘಟನೆ ಹೆಚ್ಚು ಕಾಳಜಿಯಿಂದ ಕೆಲಸ ಮಾಡುತ್ತಿದೆ ಎಂದರು.ತಾಲೂಕು ಸಂಯೋಜಕ ರಾಘವೇಂದ್ರ ಪಟಗಾರ ಮಾತನಾಡಿ, ತಾಲೂಕಿನಲ್ಲಿ ೩೨೦೦ ಮಹಿಳಾ ಹಾಗೂ ಪುರುಷರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳಿವೆ. ಆರೋಗ್ಯ, ಕೃಷಿ, ದುರ್ಬಲರ ಸೇವೆ, ಶಿಷ್ಯವೇತನ ಸಂಘಟನೆ ಸೇರಿದಂತೆ ಹತ್ತು ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಇದಕ್ಕೆಲ್ಲ ಆಧಾರಸ್ತಂಭ ಎಂದರೆ ಸಂಘಟನೆಯ ಪ್ರಮುಖರು. ಆರ್ಥಿಕವಾಗಿ ಮಹಿಳೆಯರನ್ನು ಸಬಲಗೊಳಿಸುವ ಹಾಗೂ ಸಮರ್ಥ ನಾಯಕತ್ವವನ್ನು ನೀಡುವ ಉದ್ದೇಶ ನಮ್ಮದಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಲು ಬೇಕಾಗುವ ಎಲ್ಲ ರೀತಿಯ ಅನುಕೂಲವನ್ನು ಕಲ್ಪಿಸಲಾಗುತ್ತಿದೆ. ಡಾ. ವೀರೇಂದ್ರ ಹೆಗ್ಗಡೆ ಅವರ ಕನಸು ಗ್ರಾಮೀಣ ಅಭಿವೃದ್ಧಿ ಆಗಿದೆ. ದುರ್ಬಲರನ್ನು ಸಬಲಗೊಳಿಸುವ ಗುರಿ ಅವರದಾಗಿದೆ. ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಘಟನೆ ಹೊಂದಿ ಸೇವೆ ಸಲ್ಲಿಸುತ್ತಿರುವ ನಮ್ಮ ಮಹಿಳಾ ಸ್ವಸಹಾಯ ಸಂಘಗಳು ಇಡೀ ವ್ಯವಸ್ಥೆಯ ಗಟ್ಟಿಶಕ್ತಿಗಳು ಎಂದರು.ಸಂಘದ ಮೇಲ್ವಿಚಾರಕರಾದ ಮಹಂತೇಶ ಹರಕುಣಿ, ಅಣ್ಣಪ್ಪ ಹೊಸಮನಿ, ರಾಕೇಶ ಸಾಣೇರ, ನಾಗರಾಜ ಪಾರಮ್ಮನವರ, ತಿಪ್ಪೇಸ್ವಾಮಿ ಚಿಕ್ಕಕಬ್ಬಿಗೇರಿ, ಶ್ರೀನಿವಾಸ ಮೊಗೇರ, ಗೌರಮ್ಮ ಗಂಜೀಗಟ್ಟಿ, ರೇಷ್ಮಾ ಮೊಗೇರ, ಗಣೇಶ ಕಡಗೊಂಡ, ನೇತ್ರಾವತಿ ಮಂಡಿಗನಾಳ, ಯಶೋದಾ ತೋಟದ, ಚಂದ್ರಮ್ಮ ಸತಿಗಿಹಳ್ಳಿ ಪಾಲ್ಗೊಂಡಿದ್ದರು.

Share this article