ಎಐಟಿ ಕಾಲೇಜಿನಲ್ಲಿ ಚುಂಚನೋತ್ಸವಕ್ಕೆ ತೆರೆ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ,
ಶ್ರಮ, ಶ್ರದ್ಧೆ ಇತರರಿಗಿಂತ ವಿಶೇಷವಾಗಿ ತಾರ್ಕಿಕ ಚಿಂತನೆ ಯಶಸ್ಸಿಗೆ ಸಹಕರಿಸುತ್ತವೆ. ಪ್ರತಿ ಕೆಲಸದ ಮೇಲೆ ನಂಬಿಕೆ ಆತ್ಮವಿಶ್ವಾಸ ಹೊಂದಬೇಕು ಎಂದು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಹೇಳಿದರು.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಚುಂಚನ- 2024ರ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕಠಿಣ ಶ್ರಮ, ಶ್ರದ್ಧೆ ಮತ್ತು ಆತ್ಮವಿಶ್ವಾಸ ಯಶಸ್ಸಿನ ಮೆಟ್ಟಿಲು ಗಳಾಗಿವೆ. ನಿಮ್ಮ ಸಾಧನೆಯೆಡೆಗೆ ಗುರಿ ಮಾಡಿ ನಿಂತರೆ ಸಾಗುವ ದಾರಿಯಲ್ಲಿ ಬರುವ ಯಾವುದೇ ಅಡೆ ತಡೆಗಳಿಗೆ ಗಮನ ಹರಿಸದೆ ಸ್ಥಿರತೆಯಿಂದ ಇರಬೇಕು. ಸಾಮಾಜಿಕ ಜಾಲತಾಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಒಳ್ಳೆಯ ಪುಸ್ತಕ ಗಳನ್ನು ಓದಿ ಮಾನಸಿಕ ಹಾಗೂ ಬುದ್ಧಿ ಚುರುಕುಗೊಳಿಸಬೇಕು ಎಂದರು.ತಮ್ಮಲಿರುವ ಪ್ರತಿಭೆ ಹಾಗೂ ಸಾಮರ್ಥ್ಯ ತೋರ್ಪಡಿಸಲು ಇದು ಉತ್ತಮ ವೇದಿಕೆ. ಸ್ಪರ್ಧಾ ಮನೋಭಾವದಿಂದ ಭಾಗಿ ಯಾಗುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗಿ ನಾಯಕತ್ವದ ಗುಣ ಬೆಳೆಯಲಿದೆ ಎಂದರು.
ಆದಿಚುಂಚನಗಿರಿ ಮಹಾವಿದ್ಯಾಲಯದ ರಿಜಿಸ್ಟ್ರಾರ್ ಡಾ. ಸಿ.ಕೆ.ಸುಬ್ಬರಾಯ ಮಾತನಾಡಿ, ಜಯವು ಕೇವಲ ಪ್ರಶಸ್ತಿ, ಪದಕಗಳಿಗೆ ಸೀಮಿತವಾಗಬಾರದು, ಮುಂದೆ ಸಾಗಲು ದಾರಿಯಾಗಬೇಕು. ವಿದ್ಯಾರ್ಥಿ ದಿನಗಳಲ್ಲಿ ತಮಗಿರುವ ಸ್ವಾತಂತ್ರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹೊಸತನ್ನು ಕಲಿತು ಸಾಧನೆಯೆಡೆಗೆ ಸಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್ ಮಾತನಾಡಿ, ಶ್ರದ್ಧೆ ಭಕ್ತಿ ಯಿಂದ ಮಾಡಿದ ಪ್ರತಿಯೊಂದು ಕಾರ್ಯ ಪೂರ್ಣಗೊಂಡು ಯಶಸ್ಸು ಕಾಣಲು ಸಾಧ್ಯ ಎಂದರು.ಕಾಲೇಜಿನಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಐಟಿ ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗದ ಮುಖ್ಯಸ್ಥ ಜಿ.ಎಂ.ಸತ್ಯನಾರಾಯಣ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಸಂಗಾರೆಡ್ಡಿ ಉಪಸ್ಥಿತರಿದ್ದರು. 29 ಕೆಸಿಕೆಎಂ 2ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ನಡೆದ ಚುಂಚನೋತ್ಸವದಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಡಾ. ಸಿ.ಕೆ. ಸುಬ್ಬರಾಯ, ಡಾ. ಸಿ.ಟಿ. ಜಯದೇವ್ ಇದ್ದರು.