ಕನ್ನಡಪ್ರಭ ವಾರ್ತೆ, ತರೀಕೆರೆ
ಶೌಚ ಗುಂಡಿಗಳ ಶುಚಿ ಕಾರ್ಯಕ್ಕೆ ಶಾಲಾ ಮಕ್ಕಳನ್ನು ಮಲದ ಗುಂಡಿಗೆ ಇಳಿಸುವ ಅಮಾನವೀಯ ಪ್ರಕರಣ ರಾಜ್ಯಾದ್ಯಂತ ಮಾರ್ಧನಿಸುತ್ತಿರುವ ನಡುವೆಯೇ ಪಟ್ಟಣದ ಪುರಸಭೆ ಕಳೆದ ಎರಡು ತಿಂಗಳ ಹಿಂದೆಯೇ ನಡೆದ ಪುರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅನುದಾನ ಕೊರತೆ ಇರುವ ಕಾರಣಕ್ಕೆ ಸರ್ಕಾರಿ ಶಾಲೆ ಮತ್ತು ವಸತಿ ಶಾಲೆಗಳಿಗೆ ಶೌಚ ಗುಂಡಿ ಸ್ವಚ್ಛತಾ ಕಾರ್ಯಕ್ಕೆ ಪುರಸಭೆ ಉಚಿತ ಸಕ್ಕಿಂಗ್ ಯಂತ್ರದ ಸೇವೆ ಒದಗಿಸಿ ಇಡೀ ರಾಜ್ಯಕ್ಕೆ ಮೇಲ್ಪಂಕ್ತಿಯಾಗಿದೆ.ಇತ್ತೀಚೆಗೆ ಸರ್ಕಾರಿ ಶಾಲೆಗಳಿಗೆ ಅನುದಾನದ ಕೊರತೆ ಇದ್ದು ಇದರಿಂದ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ಕುಂಟಿತಗೊಳ್ಳುತ್ತಿದ್ದುದನ್ನು ಪುರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯ ಟಿ.ದಾದಾಪೀರ್ ಪ್ರಮುಖವಾಗಿ ಪ್ರಸ್ತಾಪಿಸಿ, ಕರ್ನಾಟಕ ರಾಜ್ಯ ಸುವರ್ಣ ಸಂಭ್ರಮ ಹಾಗೂ ಸಾಕ್ಷರತಾ ಸುವರ್ಣ ಸಂಭ್ರಮ ವರ್ಷ ಅಚರಿಸುತ್ತಿರುವ ಹಿನ್ನಲೆಯಲ್ಲಿ ಪಟ್ಟಣದ ಯಾವುದಾದರೂ ಸರ್ಕಾರಿ ಶಾಲೆಯನ್ನು ಪುರಸಭೆ ದತ್ತು ಸ್ವೀಕರಿಸಿ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸಿ ಶಾಲೆಯ ಸಂಪೂರ್ಣ ಅಭಿವೃದ್ಧಿಗೆಸಹಕರಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯ ಮುಖೇನ, ಕನ್ನಡ ಭಾಷಾ ಬಳಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಿದ್ದರು.
ಪುರಸಭೆ ಸದಸ್ಯ ಟಿ.ದಾದಾಪೀರ್ ನೀಡಿದ ಸಲಹೆ ಅಂಗೀಕರಿಸಿ ಈಗಾಗಲೇ ಸರ್ಕಾರಿ ಶಾಲೆಯ ಶೌಚ ಗುಂಡಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು ತರೀಕೆರೆ ಪುರಸಭೆ ರಾಜ್ಯಕ್ಕೆ ಮೇಲ್ಪಂಕ್ತಿಯಾಗಿದೆ. ಸ್ಥಳೀಯ ಸಂಸ್ಥೆಗಳು ಮಾನವೀಯ ನೆಲೆಯಲ್ಲಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಅಡಳಿತಗಳು ಜನಮುಖಿಯಾಗದ ಹೊರತು ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥ ಬರಲು ಸಾಧ್ಯವಿಲ್ಲ, ಜನರ ತೆರಿಗೆಯಲ್ಲಿ ಸ್ಥಳೀಯ ಸಂಸ್ಥೆಗಳು ಜನರ ಸ್ಥಳೀಯ ಸಂಸ್ಥೆಗಳಾಗಬೇಕು ಎಂದು ಪುರಸಭೆ ಸದಸ್ಯ ಟಿ.ದಾದಾಪೀರ್ ತಿಳಿಸಿದ್ದಾರೆ.ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಸರ್ಕಾರಿ ಶಾಲೆಗಳಿಗೆ ಪುರಸಭೆಯಿಂದ ಉಚಿತವಾಗಿ ಸಕ್ಕಿಂಗ್ ಯಂತ್ರ ಒದಗಿಸಲು ಪುರಸಭೆ ನಿರ್ಧರಿಸಿದ್ದು, ಸರ್ಕಾರಿ ಶಾಲೆಗಳು ಈ ಸೌಲಭ್ಯ ಉಪಯೋಗಿಸಿ ಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ತಿಳಿಸಿದ್ದಾರೆ.ತರೀಕೆರೆ ಪಟ್ಟಣದಲ್ಲಿ ಒಟ್ಟು 23 ಸರ್ಕಾರಿ ಶಾಲೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧೀನ ದಲ್ಲಿರುವ ನಾಲ್ಕು ವಸತಿ ಶಾಲೆಗಳು, 3 ಬಿಸಿಎಂ ವಸತಿ ಶಾಲೆಗಳಿವೆ ಎಂದು ಸಂಬಂದಿಸಿದ ಅಧಿಕಾರಿಗಳು ತಿಳಿಸಿದ್ದಾರೆ.4ಕೆಟಿಆರ್.ಕೆ.3ಃ ಟಿ.ದಾದಾಪೀರ್ ಪುರಸಭಾ ಸದಸ್ಯರು.
4ಕೆಟಿಆರ್.ಕೆ.4ಃ ಹೆಚ್.ಪ್ರಶಾಂತ್ ಪುರಸಭೆ ಮುಖ್ಯಾಧಿಕಾರಿ.