ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ: ಡಾ। ಸುಧಾಕರ್‌ ಭರವಸೆ

KannadaprabhaNewsNetwork | Updated : Apr 11 2024, 11:49 AM IST

ಸಾರಾಂಶ

ಮೋದಿ ಸರ್ಕಾರದಿಂದ ಬಯಲುಸೀಮೆಗೆ ಅಪಾರ ಕೊಡುಗೆ ನೀಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್‌ ತಿಳಿಸಿದ್ದಾರೆ.

 ಚಿಕ್ಕಬಳ್ಳಾಪುರ :  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಗ್ಯಾರಂಟಿಗಳ ಕುರಿತು ಹಾಗೂ ಹಿಂದಿನ ಡಬಲ್‌ ಎಂಜಿನ್‌ ಸರ್ಕಾರದ ಕುರಿತು ಕಾರ್ಯಕರ್ತರಿಂದ ಪ್ರಚಾರ ನಡೆಯುತ್ತಿದ್ದು, ಹಿಂದಿನ ಅಭಿವೃದ್ಧಿಯ ವೇಗವನ್ನೇ ಮತ್ತೆ ತರುವುದಾಗಿ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಭರವಸೆ ನೀಡಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಪ್ರತಿ ಕ್ಷೇತ್ರಗಳಲ್ಲಿ ಡಾ। ಕೆ.ಸುಧಾಕರ್‌ ಪರವಾಗಿ ಮತ ಯಾಚಿಸುತ್ತಿದ್ದು, ಈ ವೇಳೆ ಕೇಂದ್ರ ಸರ್ಕಾರ ನೀಡಿದ ಯೋಜನೆಗಳು ಹಾಗೂ ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ.

ಯೋಜನೆಗಳು:

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಯಶಸ್ವಿಯಾಗಿ ಜನರಿಗೆ ತಲುಪಿದೆ. ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 1.35 ಲಕ್ಷ ರೈತರಿಗೆ ನೆರವು ದೊರೆತಿದೆ. ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ, ಬೆಂಗಳೂರು ಗ್ರಾಮಾಂತರದಲ್ಲಿ 7.89 ಲಕ್ಷ ಜನರಿಗೆ ಮತ್ತು ಚಿಕ್ಕಬಳ್ಳಾಪುರದಲ್ಲಿ 10.25 ಲಕ್ಷ ಜನರಿಗೆ ಆಹಾರ ಧಾನ್ಯ ದೊರೆತಿದೆ. ಉಜ್ವಲ ಅಡುಗೆ ಅನಿಲ ಯೋಜನೆಯಡಿ, ಬೆಂಗಳೂರು ಗ್ರಾಮಾಂತರದಲ್ಲಿ 13,461 ಮಹಿಳೆಯರಿಗೆ ಮತ್ತು ಚಿಕ್ಕಬಳ್ಳಾಪುರದಲ್ಲಿ 19,831 ಮಹಿಳೆಯರಿಗೆ ಗ್ಯಾಸ್‌ ಸಂಪರ್ಕ ದೊರೆತಿದೆ. ಮುದ್ರಾ ಯೋಜನೆಯಡಿ ಬೆಂಗಳೂರು ಗ್ರಾಮಾಂತರದಲ್ಲಿ 6.11 ಲಕ್ಷ ಜನರಿಗೆ ₹3006 ಕೋಟಿ ಸಾಲ ಮತ್ತು ಚಿಕ್ಕಬಳ್ಳಾಪುರದಲ್ಲಿ 4.72 ಲಕ್ಷ ಜನರಿಗೆ ₹2305 ಕೋಟಿ ಸಾಲ ದೊರೆತಿದೆ. ಜಲಜೀವನ್‌ ಮಿಷನ್‌ ಯೋಜನೆಯಡಿ ಬೆಂಗಳೂರು ಗ್ರಾಮಾಂತರದಲ್ಲಿ 1.50 ಲಕ್ಷ ಮನೆ ಮತ್ತು ಚಿಕ್ಕಬಳ್ಳಾಪುರದಲ್ಲಿ 1.54 ಲಕ್ಷ ಮನೆಗಳಿಗೆ ನಲ್ಲಿ ನೀರು ಲಭ್ಯವಾಗಿದೆ.

ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರ (ಎನ್‌ಎಚ್‌-648) ಮೂಲಕ ಹೊಸಕೋಟೆಗೆ ₹2755.88 ಕೋಟಿ ವೆಚ್ಚದಲ್ಲಿ ರಿಂಗ್ ರಸ್ತೆ ನಿರ್ಮಾಣವಾಗುತ್ತಿದೆ. ನೈಋತ್ಯ ರೈಲ್ವೆ ವಿಭಾಗದಿಂದ 2021-22 ರಲ್ಲಿ ವಿದ್ಯುದೀಕರಣ ಕೈಗೊಳ್ಳಲಾಗಿದೆ. 459 ಕಿ.ಮೀ. ಗುರಿಗೆ ಬದಲು, 511.7 ಕಿ.ಮೀ. ವಿದ್ಯುದೀಕರಣ ಪೂರ್ಣಗೊಂಡಿದೆ. ಇದರಲ್ಲಿ ಯಲಹಂಕ-ಚಿಕ್ಕಬಳ್ಳಾಪುರದ ನಡುವೆ 45 ಕಿಮೀ. ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ನೈಋತ್ಯ ರೈಲ್ವೆಯು ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಮೆಮು ರೈಲು ನೀಡಲು ನಿರ್ಧರಿಸಿದೆ‌. ಇದರಿಂದ ನಂದಿ ಬೆಟ್ಟಕ್ಕೆ ಕೂಡ ಪ್ರವಾಸಿಗರು ರೈಲಿನಲ್ಲಿ ಹೋಗಬಹುದು.

ಈ ಕುರಿತು ಮಾತನಾಡಿದ ಅಭ್ಯರ್ಥಿ ಡಾ। ಕೆ.ಸುಧಾಕರ್‌, 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಯಲುಸೀಮೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು, ಅದರ ಪರಿಣಾಮ ಜನಜೀವನದಲ್ಲಿ ಕಂಡುಬಂದಿದೆ. ಆದರೆ 10 ತಿಂಗಳಿಂದ ಕಾಂಗ್ರೆಸ್‌ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಮಾತ್ರ ಜನರಿಗೆ ಸಂಪೂರ್ಣವಾಗಿ ದೊರೆಯುತ್ತಿದ್ದು, ಈ ಕುರಿತು ಜನರಿಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.ನಿರ್ಮಲಾನಂದನಾಥಶ್ರೀ ಆಶೀರ್ವಾದ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಅವರು ಪ್ರತಿಪಕ್ಷ ನಾಯಕ ಆರ್‌.ಅಶೋಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಡಾ। ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಶ್ರೀಗಳಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ ಅವರು, ಚುನಾವಣೆಯಲ್ಲಿ ಗೆಲ್ಲಲು ಹಾರೈಕೆ ಪಡೆದುಕೊಂಡರು.

ಶೋಭಾ ಕರಂದ್ಲಾಜೆ, ಡಾ। ಸಿ.ಎನ್‌.ಮಂಜುನಾಥ್‌, ಪಿ.ಸಿ.ಮೋಹನ್‌, ವಿ.ಸೋಮಣ್ಣ, ಶಾಸಕರು, ಮುಖಂಡರು ಉಪಸ್ಥಿತರಿದ್ದರು.

Share this article