ಪಟ್ಟಣದ ನೀರು ಶುದ್ಧೀಕರಣ ಘಟಕಕ್ಕೆ ಸಾಮಾಜಿಕ ಕಾರ್ಯಕರ್ತರ ಭೇಟಿ
ಕನ್ನಡಪ್ರಭ ವಾರ್ತೆ, ಕೊಪ್ಪಪಟ್ಟಣದ ಪ್ರಮುಖ ನಾಲ್ಕು ಒವರ್ ಹೆಡ್ ಟ್ಯಾಂಕ್‌ಗಳಿಂದ ಪಟ್ಟಣಕ್ಕೆ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಲ್ಲ ಎಂದು ಜಿಲ್ಲಾ ಪ್ರಯೋಗಾಲಯದ ವರದಿ ದೃಢಪಡಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಬಗ್ಗೆ ಒಂದಿಷ್ಟು ಕಳಕಳಿ ಇಲ್ಲದ ಪಟ್ಟಣ ಆಡಳಿತದ ಬಗ್ಗೆ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಅಮ್ಮ ಫೌಂಡೇಷನ್ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಅಸಮಧಾನ ವ್ಯಕ್ತಪಡಿಸಿದರು.ಶನಿವಾರ ಪಟ್ಟಣದ ನೀರು ಶುದ್ಧೀಕರಣ ಘಟಕಕ್ಕೆ ಸಾಮಾಜಿಕ ಕಾರ್ಯಕರ್ತರು ಮತ್ತು ಮಾಧ್ಯಮ ಮಿತ್ರರ ಜೊತೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು ರಾಜಕೀಯ ಹೊರತುಪಡಿಸಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಮೂಲ ಭೂತ ಸೌಕರ್ಯ ನೀಡಲು ಕ್ರಮ ಕೈಗೊಳ್ಳುವುದು ಪಟ್ಟಣ ಪಂಚಾಯ್ತಿ, ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹೊಣೆಗಾರಿಕೆಯೂ ಆಗಿರುತ್ತದೆ. ಸ್ಥಳೀಯ ಪಟ್ಟಣ ಪಂಚಾಯತಿ ಅಧ್ಯಕ್ಷರು, ಆಡಳಿತ ಮಂಡಳಿ ಏನು ಮಾಡ್ತಾ ಇದೆ? ಪಟ್ಟಣದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಕೊಡಲಿಕ್ಕೆ ಆಗದಿದ್ದವರು ಅಧಿಕಾರ ಮಾಡಲು ಯೋಗ್ಯರೇ? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ ಎಂದರು.ನೀರು ಶುದ್ಧೀಕರಣ ಘಟಕದಿಂದ ಪಕ್ಕದಲ್ಲೇ ಇರುವ ಓವರ್‌ಹೆಡ್ ಟ್ಯಾಂಕ್‌ನಲ್ಲಿ ನೀರು ಶೇಖರಣೆಯಾಗಿ ಅಲ್ಲಿಂದ ಇತರೆ ಕಡೆ ಗಳಿಗೆ ಸರಬರಾಜಾಗುತ್ತದೆ. ನೀರು ಶೇಖರಣೆಯಾಗುವ ಓವರ್‌ಹೆಡ್ ಟ್ಯಾಂಕ್‌ಗೆ ಇಳಿಯಲು ಅಳವಡಿಸಿದ ಕಬ್ಬಿಣದ ಏಣಿ ಸಂಪೂರ್ಣ ತುಕ್ಕು ಹಿಡಿದಿದ್ದು ಅದರ ಫಂಗಸ್‌ಗಳು ನೀರಿನೊಂದಿಗೆ ಬೆರೆತು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವ ಸಂಭವ ವಿದ್ದರೂ ಆ ಏಣಿ ಬದಲಾಯಿಸುವ ಗೋಜಿಗೆ ಪಟ್ಟಣ ಪಂಚಾಯಿತಿ ಹೋಗಿಲ್ಲ. ನೀರು ಶುದ್ಧೀಕರಣಕ್ಕಾಗಿ ಬಳಸುವ ಆಲಂ ಸರಿಯಾಗಿ ಹಾಕದ ಕಾರಣ ನೀರು ಶುದ್ಧಿಯಾಗುತ್ತಿಲ್ಲ. ಕೋಟ್ಯಾಂತರ ರೂ. ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಾಣ ಗೊಂಡಿದ್ದರೂ ತಂತ್ರಜ್ಞಾನ ಮತ್ತು ತಾಂತ್ರಿಕತೆಯಿಂದ ದೂರ ಉಳಿದಿದ್ದು ಅಸಮರ್ಪಕ ನಿರ್ವಹಣೆ ಈ ಗೊಂದಲಗಳಿಗೆ ಕಾರಣವಾಗುತ್ತಿದೆ. ಪಟ್ಟಣ ಪಂಚಾಯಿತಿಗೆ ಇದನ್ನು ಸರಿಪಡಿಸಿಸುವ ಇಚ್ಛಾಶಕ್ತಿ ಇರಬೇಕು ಎಂದು ಹೇಳಿದರು.ಮೌನವೇ ಸಮ್ಮತಿಯಾಗಬಾರದು. ಮೂಲಭೂತ ಸೌಕರ್ಯ ಪಡೆಯಲು ಜನಸಾಮಾನ್ಯರು ಕೆಲವೊಮ್ಮೆ ಮೌನ ಮುರಿಯ ಬೇಕು. ಪಪಂ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವತ್ತ ಗಮನ ಹರಿಸಬೇಕು. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು. ಸಾಮಾಜಿಕ ಕಾರ್ಯಕರ್ತರಾದ ಅಶೋಕ್ ಸಿಗದಾಳು, ಅರವಿಂದ ಸಿಗದಾಳು ಮುಂತಾದವರು ಜೊತೆಗಿದ್ದರು.
--ಬಾಕ್ಸ್--ನಾಳೆ ಕಾಂಗ್ರೆಸ್‌ನಿಂದ ಪಪಂ ಎದುರು ಧರಣಿಕೊಪ್ಪ: ಕೊಳಚೆ ನಿರ್ಮೂಲನೆ ಮತ್ತು ಶುದ್ಧ ನೀರು ಪೂರೈಕೆಯಲ್ಲಿ ಕೊಪ್ಪ ಪ.ಪಂ.ಯ ಅಸಮರ್ಪಕ ನಿರ್ವಹಣೆಯ ವಿರುದ್ಧ ಕೊಪ್ಪ ಬ್ಲಾಕ್ ಕಾಂಗ್ರೆಸ್ ಮತ್ತು ಪಟ್ಟಣ ಕಾಂಗ್ರೆಸ್ ಸಮಿತಿಯಿಂದ ಮೇ.೧೯ರ ಸೋಮವಾರ ಬೆಳಿಗ್ಗೆ ೧೦ ಕ್ಕೆ ಪ.ಪಂ. ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಪಟ್ಟಣ ಕಾಂಗ್ರೆಸ್ ಸಮಿತಿ ತಿಳಿಸಿದೆ.