ಶಿಕಾರಿಪುರ ಟಿಎಪಿಸಿಎಂಎಸ್‌ ಅಧ್ಯಕ್ಷರಾಗಿ ಸುಧೀರ್‌ ಮಾರವಳ್ಳಿ

KannadaprabhaNewsNetwork | Published : Jan 28, 2024 1:21 AM

ಸಾರಾಂಶ

ಶಿಕಾರಿಪುರ ತಾಲೂಕು ವ್ಯವಸಾಯೋತ್ವನ್ನ ಮಾರಾಟ ಸಹಕಾರ ಸಂಘ ನೂತನ ಅಧ್ಯಕ್ಷರಾಗಿ ಸುಧೀರ್ ಮಾರವಳ್ಳಿ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಾಲೂಕು ವ್ಯವಸಾಯೋತ್ವನ್ನ ಮಾರಾಟ ಸಹಕಾರ ಸಂಘ ನೂತನ ಅಧ್ಯಕ್ಷರಾಗಿ ಸುಧೀರ್ ಮಾರವಳ್ಳಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಸಂಪೂರ್ಣ ಬಿಜೆಪಿ ಬೆಂಬಲಿತ ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಯ ಆಂತರಿಕ ಒಪ್ಪಂದ ಅನ್ವಯ ಸುಧೀರ್ ಮಾರವಳ್ಳಿ ಪ್ರಸಕ್ತ ಅವಧಿಯಲ್ಲಿ 4ನೇ ಅಧ್ಯಕ್ಷರಾಗಿ ಆಯ್ಕೆಯಾದರು.

ಅನಂತರ ಮಾತನಾಡಿದ ಅವರು, ಸಂಘದ ಆಡಳಿತ ಮಂಡಳಿಗೆ ಸರ್ವರ ಒಮ್ಮತದ ಮೇರೆಗೆ ಆಯ್ಕೆಯಾಗಿದ್ದು, ಇದಕ್ಕೆ ಸಹಕರಿಸಿದ ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಜತೆಗೆ ಆಡಳಿತ ಮಂಡಳಿ ಸದಸ್ಯರಿಗೆ ಧನ್ಯವಾದ. ನಂಬಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುವುದಾಗಿ ತಿಳಿಸಿದರು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಸಂಘದ ನಿರ್ದೇಶಕ ಎಂ.ಬಿ.ಚನ್ನವೀರಪ್ಪ ಮಾತನಾಡಿ, 15-20 ವರ್ಷದ ಹಿಂದೆ ₹ 46 ಲಕ್ಷ ನಷ್ಟದಿಂದ ಸಿಬ್ಬಂದಿಗೆ ವೇತನ ನೀಡಲಾಗದೇ ಸಂಘ ಮುಚ್ಚುವ ಹಂತ ತಲುಪಿತ್ತು. ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಯಾದ ಅವಧಿಯಲ್ಲಿ ರೈತರ ಮನೆಬಾಗಿಲಿಗೆ ಗೊಬ್ಬರ ಮಾರಾಟ ಮೂಲಕ ಅತಿ ಹೆಚ್ಚು ವಹಿವಾಟು, ನಡೆಸಿ ಜಿಲ್ಲೆಯಲ್ಲಿಯೇ ಇಂದು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಪುರಸಭೆ ಕಂದಾಯ, ಡಿಸಿಸಿ ಬ್ಯಾಂಕ್ ಸಾಲ ಸಹಿತ ನಷ್ಟ ಹೋಗಲಾಡಿಸಿ, 4-5 ವರ್ಷದಿಂದ ಷೇರುದಾರರಿಗೆ ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಹೊಸ ಪೆಟ್ರೋಲ್ ಬಂಕ್ ನಿರ್ಮಾಣವಾಗಿದ್ದು, ನೂತನ ಗೋದಾಮಿಗೆ ₹45 ಲಕ್ಷ ಕೇಂದ್ರದಿಂದ ಮಂಜೂರಾಗಿ ಕಟ್ಟಡ ನಿರ್ಮಾಣ ಆರಂಭವಾಗಲಿದೆ. ಕಚೇರಿ ಮುಂಭಾಗದ ವಿಶಾಲ ಜಾಗದಲ್ಲಿ ಕಾಂಪ್ಲೆಕ್ಸ್ ನಿರ್ಮಾಣ ಎಲ್ಲರ ಅಪೇಕ್ಷೆಯಾಗಿದೆ. ಕೇವಲ ಗೊಬ್ಬರ ಮಾರಾಟ ಮಾತ್ರ ಆದ್ಯತೆಯಾಗದೇ ಸಾಗರ, ತೀರ್ಥಹಳ್ಳಿ ರೀತಿ ಅಡಕೆ ಮಾರಾಟ, ವಹಿವಾಟು, ಸಾಲ ವಿತರಣೆಗೆ ಹೆಚ್ಚು ಗಮನ ಹರಿಸಬೇಕು. ರಾಜ್ಯದಲ್ಲಿಯೇ ಹೊಸಕೋಟೆ ಸಂಘ ಮಾದರಿಯಾಗಿದ್ದು, ವೀಕ್ಷಣೆ ಮೂಲಕ ಅಲ್ಲಿನ ಹೊಸತನ ಅಳವಡಿಸಿ ಕೊಳ್ಳುವಂತೆ ಸಲಹೆ ನೀಡಿದರು.

ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಉಪಾಧ್ಯಕ್ಷ ಅನೂಪ, ಅಗಡಿ ಅಶೋಕ್, ಡಾ. ಬಿ.ಡಿ. ಭೂಕಾಂತ್, ಸುರೇಶಗೌಡ, ಶಶಿಧರ, ರಾಘವೇಂದ್ರ, ಚನ್ನಪ್ಪ, ಸುನೀತ, ಪ್ರೇಮಾ, ಜಯಾ ನಾಯ್ಕ, ಗಂಗಾಧರ, ಬಸವಣ್ಯಪ್ಪ, ಮುಖಂಡ ವಸಂತಗೌಡ, ರಾಜಶೇಖರ ಗೌಡ ನಳ್ಳಿನಕೊಪ್ಪ, ಬಸವರಾಜಪ್ಪಗೌಡ ಗಬ್ಬೂರು, ರುದ್ರಮುನಿ, ಉಮಾಶಂಕರ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಪ್ರಗತಿಗೆ ಆದ್ಯತೆ: ಸುಧೀರ್

ಸಂಘ ಬೆಲೆ ಬಾಳುವ ಆಸ್ತಿಯನ್ನು ಹೊಂದಿದ್ದು, ಆಸ್ತಿ ಬಗೆಗಿನ ಇ-ಸ್ವತ್ತು ಮತ್ತಿತರ ಎಲ್ಲ ದಾಖಲೆಯನ್ನು ಕ್ರಮಬದ್ಧ ಆಗಿಸುವ ಬಗ್ಗೆ ಹಲವು ಹಿರಿಯರು, ಷೇರುದಾರರ ಅಪೇಕ್ಷೆಗೆ ಪೂರಕವಾಗಿ ಹೆಚ್ಚಿನ ನಿಗಾ ವಹಿಸಲಾಗುವುದು. ಸಂಘಕ್ಕೆ 75 ವರ್ಷ ಪೂರ್ಣ ಗೊಂಡಿದ್ದು, ಅದ್ಧೂರಿ ವಜ್ರಮಹೋತ್ಸವ ಆಚರಣೆಗೆ ಎಲ್ಲರ ಸಹಕಾರ ಕೋರಿ, ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳ ಬೃಹತ್ ರೈತ ಮಾಲ್, ಕಾಂಪ್ಲೆಕ್ಸ್ ನಿರ್ಮಾಣ ಪ್ರಮುಖ ಆದ್ಯತೆಯಾಗಿದೆ ಎಂದು ಸುಧೀರ್ ಮಾರವಳ್ಳಿ ತಿಳಿಸಿದರು.

Share this article