ಸಿ.ಎ. ಇಟ್ನಾಳಮಠ
ಕನ್ನಡಪ್ರಭ ವಾರ್ತೆ ಅಥಣಿಅಥಣಿ ತಾಲೂಕಿನ ಹಲ್ಯಾಳ-ತುಂಗಳ ಏತ ನೀರಾವರಿ ಯೋಜನೆ ಕಾಲುವೆಗಳಲ್ಲಿ ಮಧ್ಯರಾತ್ರಿ ಸಕ್ಕರೆ ಕಾರ್ಖಾನೆಯವರು ತ್ಯಾಜ್ಯ ಹಾಕುತ್ತಿದ್ದು, ಇದರಿಂದ ಕಾಲುವೆ ನೀರು ಕಲುಷಿತಗೊಂಡು ಅಂತರ್ಜಲ ಸೇರಿ ಕುಡಿಯುವ ನೀರು, ರೈತರ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಗ್ರಾಮಸ್ಥರು ತಾಲೂಕು ಆಡಳಿತದಿಂದ ಜಿಲ್ಲಾಡಳಿತದವರೆಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸತ್ತಮುತ್ತಲಿನ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಹಿಪ್ಪರಗಿ ಹಿನ್ನೀರಿನಿಂದ ಹಲ್ಯಾಳ-ತುಂಗಳ ಮತ್ತು ಕರಿಮಸೂತಿ ಏತ ನೀರಾವರಿ ಯೋಜನೆಗಳಿವೆ. ಇವುಗಳ ಕಾಲುವೆಗಳಿಂದ ಅಥಣಿ ತಾಲೂಕಿನಿಂದ ದಾಟಿ ಬಾಗಲಕೋಟೆ ಜಿಲ್ಲೆಯ ಅನೇಕ ಭಾಗಗಳವರೆಗೆ ನೀರು ಹರಿಯುತ್ತದೆ. ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ಕಾಲುವೆಗಳಿಗೆ ನೀರು ಬಿಡಲಾಗುತ್ತಿದೆ. ಕಾಲುವೆಗಳ ನೀರಿನಲ್ಲಿ ಸಕ್ಕರೆ ಕಾರ್ಖಾನೆಯವರು ರಾತ್ರಿ ವೇಳೆ ಕೆಮಿಕಲ್ಸ್ ಮಿಶ್ರಿತ ನೀರನ್ನು (ಇದಕ್ಕೆ ಮಳಲಿ ಅಥವಾ ಮೊಲ್ಯಾಸಿಸ್) ವಾಹನಗಳಲ್ಲಿ ತಂದು ಸುರಿದು ಹೋಗುತ್ತಿದ್ದಾರೆ. ಆದರೆ, ಯಾವ ಕಾರ್ಖಾನೆಯವರು ತಂದು ಹಾಕುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ ಎನ್ನಲಾಗಿದೆ.ವೈಜ್ಞಾನಿಕವಾಗಿ ವಿಲೇವಾರಿ ಅಗತ್ಯ:
ಕಾರ್ಖಾನೆಗಳು ಕಡ್ಡಾಯವಾಗಿ ಪರಿಸರ ಸಂರಕ್ಷಣೆ ಕಾನೂನು ಪಾಲಿಸಬೇಕಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಜತೆಗೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಇದರ ಮೇಲೆ ಪರಿಸರ ಇಲಾಖೆ ಕಣ್ಣಿಡುತ್ತದೆ. ಕಾನೂನು ಉಲ್ಲಂಘಿಸಿದರೆ ಅಂತಹ ಕಾರ್ಖಾನೆ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರ ಪರಿಸರ ಇಲಾಖೆಗಿದೆ. ಮೊದಲಿನಿಂದಲೂ ಕಾರ್ಖಾನೆಯವರು ರೈತರ ಜಮೀನು, ಗೋಮಾಳ, ಸರ್ಕಾರಿ ಖಾಲಿ ಸ್ಥಳಗಳಲ್ಲಿ, ಗುಡ್ಡದ ತೆಗ್ಗು ಪ್ರದೇಶದಲ್ಲಿ ಹಾಕುತ್ತಿದ್ದಾರೆ. ಕೆಲವು ರೈತರು ಕಾರ್ಖಾನೆಗಳ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈಗ ಕಾರ್ಖಾನೆಗಳು ಕಾಲುವೆಗಳಿಗೆ ಇದನ್ನು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.ಪರಿಸರಕ್ಕೆ ಮಾರಕ:
ಕಾಲುವೆ ನೀರಿಗೆ ಕಾರ್ಖಾನೆಯ ತ್ಯಾಜ್ಯ ಬಿಡುತ್ತಿರುವುದರಿಂದ ಪರಿಸರದ ಮೇಲೆ ಕಟ್ಟ ಪರಿಣಾಮ ಬೀರುತ್ತಿದೆ. ಕಾಲುವೆ ನೀರನ್ನು ಬೆಳೆಗಳಿಗೆ ಹಾಯಿಸುವುದರಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಅಲ್ಲದೆ, ಕೆರೆ, ಇನ್ನಿತರ ಜನಮೂಲಕ್ಕೆ ಈ ನೀರು ಸೇರುತ್ತಿದೆ. ಹೀಗಾಗಿ ಅಂತರ್ಜಲಮಟ್ಟಕ್ಕೂ ಈ ವಿಷಕಾರಿ ಹೋಗುತ್ತಿದೆ. ಕಾಲುವೆ ವ್ಯಾಪ್ತಿಯಲ್ಲಿನ ಜಲಮೂಲಗಳು ಕಲುಷಿತಗೊಂಡು ಜನ ಹಾಗೂ ಜಾನುವಾರು ಆರೋಗ್ಯ ಮೇಲೂ ದುಷ್ಪರಿಣಾಮ ಬೀರಬಹುದಾದ ಸಾಧ್ಯತೆ ಇದೆ. ಈ ವಿಷಯ ತಾಲೂಕಾಡಳಿತ ಹಾಗೂ ಪರಿಸರ ಇಲಾಖೆ ಗಮನಕ್ಕೆ ಬಂದರೂ ಜಾಣ ಮೌನ ವಹಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ತಕ್ಷಣ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆ ಜಂಟಿಯಾಗಿ ತನಿಖೆ ಕೈಗೊಳ್ಳಬೇಕು. ಈ ನೀರಿನಿಂದ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಂತರ್ಜಲದಲ್ಲಿ ವಿಷಪೂರಿತ ನೀರು ಬರುತ್ತಿದೆ. ಜನ, ಜಾನುವಾರಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಕುರಿತು ಪರಿಸರ ಇಲಾಖೆ, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.
-ಮುತ್ತಪ್ಪ ನಾಯಕ , ಮಾಳಪ್ಪ ಸುಟ್ಟಟ್ಟಿ ನಾವು ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಭೇಟಿ ನೀಡಿ ಪರಿಶೀಳನೆ ಮಾಡಿದ್ದೇವೆ. ಕಾಲುವೆಗೆ ಯಾರೋ ಮೊಲ್ಯಾಸಿಸ್ ಹಾಕಿರುವುದು ಕಂಡುಬಂದಿದೆ. ಮುಂದೆ ಹೀಗೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ.- ಪ್ರವೀಣ ಹುಣಸಿಕಟ್ಟಿ, ಮುಖ್ಯ ಎಂಜಿನಿಯರ್ ನೀರಾವರಿ ಇಲಾಖೆ