ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆವಿಕೆ ಪ್ರಾರಂಭ

KannadaprabhaNewsNetwork | Published : Aug 7, 2024 1:00 AM

ಸಾರಾಂಶ

ಕಾರ್ಖಾನೆ ವ್ಯಾಪ್ತಿ 13 ತಿಂಗಳು ತುಂಬಿದ ಸುಮಾರು 5 ರಿಂದ 6 ಲಕ್ಷ ಟನ್ ಕಟಾವಿಗೆ ಬಂದ ಕಬ್ಬಿನ ಫಸಲಿದೆ. ಕಳೆದ ವರ್ಷ ಕಾರ್ಖಾನೆ 9.25 ಲಕ್ಷ ಟನ್ ಕಬ್ಬು ನುರಿವಿಕೆ ಕಂಡಿದ್ದು, ಈ ಬಾರಿ ನೀರಿನ ಕೊರತೆಯಿಂದ ಐದಾರು ಲಕ್ಷ ಟನ್ ಕಬ್ಬನ್ನು 4 ತಿಂಗಳಲ್ಲಿ ಅರೆದು ಮುಗಿಸಲಾಗುತ್ತದೆ.

ಅಣ್ಣೂರು ಸತೀಶ್

ಕನ್ನಡಪ್ರಭ ವಾರ್ತೆ ಭಾರತೀನಗರ

ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆ ಪ್ರಾರಂಭಗೊಂಡಿದೆ. ಕಾರ್ಖಾನೆಗೆ ನೀರಿನ ಸಮಸ್ಯೆ ಜೊತೆಗೆ ಈ ವರ್ಷ ಕಬ್ಬಿನ ಕೊರತೆ ಉಂಟಾಗಿದೆ.

ಕಾರ್ಖಾನೆ ಸಮೀಪದ ಮೆಳ್ಳಹಳ್ಳಿ ಬಳಿ ಹೆಬ್ಬಾಳದಲ್ಲಿ ದೊರೆಯುವ ನೀರನ್ನು ಬಳಸಿಕೊಂಡು ಕಬ್ಬು ನುರಿಸಲಾಗುತ್ತಿತ್ತು. ಆದರೆ, ಬರಗಾಲದಿಂದಾಗಿ ನೀರಿನ ಲಭ್ಯತೆ ಕಡಿಮೆಯಾಗಿ ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ಕಳೆದ ವರ್ಷ ಬರದಿಂದ ಕೆಆರ್‌ಎಸ್ ವ್ಯಾಪ್ತಿಯ ವಿಸಿ ನಾಲೆಗೆ ನೀರು ಬಿಟ್ಟಿಲ್ಲ. ಇದರಿಂದ ಮದ್ದೂರು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಂತರ್ಜಲ ಕುಸಿತದಿಂದ ಕೊಳವೆಬಾವಿ ಆಶ್ರಿತ ಜಮೀನುಗಳಲ್ಲಿ ಕಬ್ಬಿನ ಬೆಳೆಯಲ್ಲಿ ಕೊರತೆಯಾಗಿದೆ.

ಕಾರ್ಖಾನೆ ವ್ಯಾಪ್ತಿ 13 ತಿಂಗಳು ತುಂಬಿದ ಸುಮಾರು 5 ರಿಂದ 6 ಲಕ್ಷ ಟನ್ ಕಟಾವಿಗೆ ಬಂದ ಕಬ್ಬಿನ ಫಸಲಿದೆ. ಕಳೆದ ವರ್ಷ ಕಾರ್ಖಾನೆ 9.25 ಲಕ್ಷ ಟನ್ ಕಬ್ಬು ನುರಿವಿಕೆ ಕಂಡಿದ್ದು, ಈ ಬಾರಿ ನೀರಿನ ಕೊರತೆಯಿಂದ ಐದಾರು ಲಕ್ಷ ಟನ್ ಕಬ್ಬನ್ನು 4 ತಿಂಗಳಲ್ಲಿ ಅರೆದು ಮುಗಿಸಲಾಗುತ್ತದೆ.

ಪ್ರಸಕ್ತ ಅಂಗಾಮಿನಲ್ಲಿ ಕಬ್ಬು ಅರೆಯುವ ಕಾರ್ಯವನ್ನು ರಾಜ್ಯ ಸರ್ಕಾರದ ಸಕ್ಕರೆ ನಿರ್ದೇಶನಾಲಯದ ಆದೇಶದಂದೆ ಜುಲೈ 31ರಂದು ಕಾರ್ಖಾನೆ ಪ್ರಾರಂಭಿಸಲಾಗಿದೆ. ಈ ಬಾರಿ ರೈತರಿಗೆ ಕೇಂದ್ರ ಸರ್ಕಾರ ನಿಗಧಿ ಪಡಿಸಿದ ಎಫ್‌ಆರ್‌ಪಿ ದರ 3151 ರು.ಗಳನ್ನು ಟನ್ ಕಬ್ಬಿಗೆ ನೀಡಲಾಗುತ್ತಿದೆ. ಪ್ರಸಕ್ತ ವರ್ಷವು 40 ದಿನಗಳ ಒಳಗೆ ಕಬ್ಬು ಸರಬರಾಜು ಮಾಡುವರೈತರಿಗೆ ಬಟಾವಣೆ ಮಾಡಲು ಮುಂದಾಗಿದೆ.

ಈ ಹಿಂದೆ ಕಾರ್ಖಾನೆಯಲ್ಲಿ 3500 ಟನ್‌ನಿಂದ ೪ ಸಾವಿರ ಟನ್ ಅರೆಯುವ ಸಾಮರ್ಥ್ಯದ ಯಂತ್ರ ಇತ್ತು. ಕಳೆದ ವರ್ಷದಿಂದ5.5 ಸಾವಿರದಿಂದ 6 ಸಾವಿರ ಟನ್ ಕಬ್ಬು ಅರೆಯುವ ಸಾಮಾರ್ಥ್ಯದ ಯಂತ್ರಗಳ ಅಳವಡಿಸಲಾಗಿದೆ. ಆದರೆ, ಆಡಳಿತ ಮಂಡಳಿಗೆ ಕಾರ್ಖಾನೆಗೆ ನೀರಿನ ಕೊರತೆ ಎದುರಾಗಿರುವುದು ತಲೆನೋವು ತಂದೊಡ್ಡಿದೆ.

ಕಬ್ಬಿನ ಬೆಳೆಗೆ ವೈಜ್ಞಾನಿಕ ಬೆಲೆಯನ್ನು ಕಾರ್ಖಾನೆಗಳು ನಿರ್ಧರಿಸುವುದಿಲ್ಲ. ಸರ್ಕಾರವೇ ಪ್ರತಿ ಟನ್ ಕಬ್ಬಿಗೆ 3151 ರು. ನಿಗದಿ ಪಡಿಸಿದ್ದು ಅದರಂತೆ ನೀಡಲಾಗುತ್ತಿದೆ. ಈ ಹಿಂದಿನ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ಎಲ್ಲಾ ರೈತರೂ ಕಬ್ಬಿನ ಹಣ ಬಟಾವಣೆ ಮಾಡಲಾಗಿದೆ.

-ಎಂ.ಶ್ರೀನಿವಾಸನ್, ವ್ಯವಸ್ಥಾಪಕ ನಿರ್ದೇಶಕರು

ರೈತರಿಗೆ ಮತ್ತು ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಇದುವರೆವಿಗೂ ಆಡಳಿತ ಮಂಡಳಿ ನೋಡಿಕೊಳ್ಳುತ್ತಾ ಬರುತ್ತಿದೆ. ಪ್ರಸ್ತುತ ಕಬ್ಬು ಸರಬರಾಜಿನಲ್ಲಿ ಕೊರತೆ ಇದೆ. ರೈತರು ಕಾರ್ಖಾನೆಗೆ ಕಬ್ಬು ಕೊರತೆಯಾಗದಂತೆ ನೋಡಿಕೊಳ್ಳಬೇಕು.

- ಆರ್.ಮಣಿ, ಕಾರ್ಖಾನೆ ಉಪಾಧ್ಯಕ್ಷರು

Share this article