ಇಂದೋರ ಮಾದರಿಯಲ್ಲಿ ಹು-ಧಾದಲ್ಲಿ ಕಸ ನಿರ್ವಹಣೆಗೆ ಸಲಹೆ

KannadaprabhaNewsNetwork | Published : Mar 29, 2025 12:31 AM

ಸಾರಾಂಶ

ಸುಮಾರು 40 ಲಕ್ಷ ಜನಸಂಖ್ಯೆ ಇರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಾಧ್ಯವಾಗಿರುವ ಕಸ ನಿರ್ವಹಣೆಯು 14 ಲಕ್ಷ ಜನಸಂಖ್ಯೆ ಇರುವ ಹು-ಧಾ ಅವಳಿ ನಗರದಲ್ಲಿ ಏತಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಪ್ರಶ್ನಿಸಿದ್ದಾರೆ.

ಧಾರವಾಡ: ಸುಮಾರು 40 ಲಕ್ಷ ಜನಸಂಖ್ಯೆ ಇರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಾಧ್ಯವಾಗಿರುವ ಕಸ ನಿರ್ವಹಣೆಯು 14 ಲಕ್ಷ ಜನಸಂಖ್ಯೆ ಇರುವ ಹು-ಧಾ ಅವಳಿ ನಗರದಲ್ಲಿ ಏತಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಪ್ರಶ್ನಿಸಿದರು.

ಇಲ್ಲಿಯ ಅಮೃತ ಮಹೋತ್ಸವ ಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಪ್ರಶ್ನೆ ಎತ್ತಿದ ಕೊರವಿ, ಇತರೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ತಾವು ಇಂದೋರ್‌ಗೆ ಹೋಗಿ ಅಲ್ಲಿಯ ಕಸ ನಿರ್ವಹಣೆ ಕುರಿತು ಅಧ್ಯಯನ ಮಾಡಿದ್ದೇವೆ. ಇಲ್ಲಿಯ ರೀತಿಯಲ್ಲಿಯೇ ಅಲ್ಲಿಯ ಮಹಾನಗರ ಪಾಲಿಕೆಯು ಮನೆ-ಮನೆಗೆ ಹೋಗಿ ಕಸ ಸಂಗ್ರಹಿಸಿ ಅದನ್ನು ವಿಲೇವಾರಿ ಮಾಡುತ್ತಿದೆ.

ಆದರೆ, ಸಂಪೂರ್ಣವಾಗಿ ಸಾರ್ವಜನಿಕರ ಸಹಕಾರದಿಂದ ಯಶಸ್ವಿಯಾಗಿದೆ. ಹೀಗಾಗಿ, ಅಲ್ಲಿಯ ರಸ್ತೆ ಸೇರಿದಂತೆ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ಒಂದಿಷ್ಟು ಕಸ-ಕಡ್ಡಿ ಕಾಣದೇ ವಿಮಾನ ನಿಲ್ದಾಣಗಳಂತೆ ಕಾಣುತ್ತವೆ ಎಂದರು.

ಅಲ್ಲಿಯ ಪ್ರತಿಯೊಂದು ಮನೆಯ ಕಸ ಪೂರ್ತಿಯಾಗಿ ಬೇರ್ಪಟ್ಟು ಸಂಗ್ರಹವಾಗುತ್ತದೆ. ಸಂಗ್ರಹವಾದ ಕಸವನ್ನು ಅಲ್ಲಿಯ ಪಾಲಿಕೆಯು ಹಸಿ, ಒಣ, ಪ್ಲಾಸ್ಟಿಕ್‌, ಆಸ್ಪತ್ರೆ ತ್ಯಾಜ್ಯ, ಎಲೆಕ್ಟ್ರಾನಿಕ್‌ ಹೀಗೆ ಆರು ರೀತಿಯಲ್ಲಿ ಬೇರ್ಪಡಿಸಿ ಆದಾಯ ಗಳಿಸುತ್ತದೆ. ಕಸದ ವಾಹನದಲ್ಲಿ ಪೌರ ಕಾರ್ಮಿಕರು ಮಾತ್ರವಲ್ಲದೇ ಸ್ಥಳೀಯ ಸಂಘ-ಸಂಸ್ಥೆಗಳ ಒಬ್ಬ ಸದಸ್ಯರಿದ್ದು, ಜನರಿಗೆ ಮಾರ್ಗದರ್ಶನ, ಜಾಗೃತಿ ಮೂಡಿಸುತ್ತಾನೆ. ಕಸ ನಿರ್ವಹಣೆಯಲ್ಲಿ ಸಾರ್ಜವನಿಕರು ತಪ್ಪು ಎಸಗಿದರೆ ದಂಡ ಹಾಗೂ ಕಾನೂನಿನ ಭಯ ಇದೆ. ಅಲ್ಲಿ ಜನರು ಪೊಲೀಸರಿಗಿಂತಲೂ ಮಹಾನಗರ ಪಾಲಿಕೆಗೆ ಭಯ ಪಡುತ್ತಾರೆ. ಆದರೆ, ಅವಳಿ ನಗರದಲ್ಲಿ ಪಾಲಿಕೆ ಬಗ್ಗೆ ಭಯವೂ ಇಲ್ಲ, ಗೌರವವೂ ಇಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಧಾರವಾಡದ ಹೊಸಯಲ್ಲಾಪೂರ, ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಹಲವು ವರ್ಷಗಳ ಕಸದ ರಾಶಿ ಅವಳಿ ನಗರದ ಸೌಂದರ್ಯ ಹಾಗೂ ಆರೋಗ್ಯಕ್ಕೆ ಹಾನಿಕರ. ಬೇಸಿಗೆಯಲ್ಲಿ ಕಸಕ್ಕೆ ಬೆಂಕಿ ಬಿದ್ದು ವಾತಾವರಣ ಸಹ ಕೆಡುತ್ತಿದೆ. ಕಸವನ್ನು ಒಗ್ಗೂಡಿಸಿ ಒಯ್ಯುವ 12 ವಾಹನಗಳಲ್ಲಿ ಒಂಭತ್ತು ಕೆಟ್ಟು ನಿಂತಿವೆ. ಒಯ್ದ ಕಸವನ್ನು ಇಂದೋರ್‌ನಲ್ಲಿ ಅಂದೇ ಗೊಬ್ಬರವಾಗಿ ಪರಿವರ್ತಿಸುತ್ತಾರೆ. ಆದರೆ, ಇಲ್ಲಿ ವರ್ಷಗಟ್ಟಲೇ ಬಿದ್ದು ಗುಡ್ಡವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿ, ಈಗಲಾದರೂ ತಮ್ಮ ಸಲಹೆಗಳನ್ನು ಪಾಲಿಕೆ ಪರಿಗಣಿಸಿ ಕಸ ನಿರ್ವಹಣೆಯಲ್ಲಿ ಹೊಸ ಚಿಂತನೆಗಳನ್ನು ಜಾರಿ ಮಾಡಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ರಾಜಶೇಖರ ಕಮತಿ, ಹೊಸಯಲ್ಲಾಪೂರ ಬಳಿಯ ಕಸದ ಗುಡ್ಡಕ್ಕೆ ಆಗಾಗ ಬೆಂಕಿ ಬೀಳುತ್ತಿದ್ದು ಸ್ಥಳೀಯರು ರೋಸಿ ಹೋಗಿದ್ದಾರೆ. ಪಕ್ಕದಲ್ಲಿಯೇ ಇರುವ ರುದ್ರಭೂಮಿಗೆ ಹೋಗುವ ಜನರಿಗೂ ತುಂಬ ತೊಂದರೆಯಾಗುತ್ತಿದೆ. ಆಪ್ತರನ್ನು ಕಳೆದುಕೊಂಡು ಅವರ ಅಂತಿಮ ಯಾತ್ರೆ ಮಾಡುವಾಗಲೂ ಕಸದ ವಾಸನೆ, ಗಲೀಜಿನಿಂದಾಗಿ ಜನರು ಬೇಸತ್ತಿದ್ದಾರೆ. ಇದರಿಂದಾಗಿ ಜನರಿಂದ ಪಾಲಿಕೆ ಬಗ್ಗೆ ಕೆಟ್ಟ ಅಭಿಪ್ರಾಯಗಳು ಮೂಡುತ್ತಿವೆ ಎಂದು ಸಭೆ ಗಮನ ಸೆಳೆದರು.

ನಾಲ್ಕೂವರೆ ಕೋಟಿ ವೆಚ್ಚದಲ್ಲಿ ಹೊಸಯಲ್ಲಾಪೂರ ರುದ್ರಭೂಮಿ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ. ಕಸಕ್ಕೆ ಬೆಂಕಿ ಹತ್ತಿದಾಗ ಆರಿಸಲು ₹38 ಲಕ್ಷ ವೆಚ್ಚೆ ತೆಗೆದಿರಲಾಗಿದೆ. ಜೊತೆಗೆ ವಿದ್ಯುತ್‌ ದೀಪಕ್ಕಾಗಿ ರು. 40 ಲಕ್ಷ ಅನುದಾನ ಇದ್ದು, ಶೀಘ್ರ ಕಾರ್ಯಾರಂಭ ಮಾಡುವುದಾಗಿ ಪಾಲಿಕೆ ಅಧಿಕಾರಿಗಳು ಉತ್ತರ ನೀಡಿದರು. ಈ ಯೋಜನೆ ಜಾರಿಗೆ ತಿಂಗಳುಗಳು ಬೇಕು. ತ್ವರಿತವಾಗಿ ಜನರಿಗೆ ಅನುಕೂಲ ಕಾರ್ಯ ಮಾಡಲು ವಿಪಕ್ಷ ನಾಯಕ ಆಗ್ರಹಿಸಿದರು.

ಪಾಲಿಕೆ ಸದಸ್ಯ ಮಂಜುನಾಥ ಬಟ್ಟೆಣ್ಣವರ, ಪಾಲಿಕೆ ಪೌರ ಕಾರ್ಮಿಕರ ಕೊರತೆ ಬಗ್ಗೆ ಪ್ರಶ್ನಿಸಿದರು. ವಾರ್ಡ್ ಜನಸಂಖ್ಯೆಗೆ ತಕ್ಕಂತೆ ಪೌರ ಕಾರ್ಮಿಕರನ್ನು ನೀಡುವುದಾಗಿ ಮೇಯರ್‌ ಹಾಗೂ ಆಯುಕ್ತರು ಭರವಸೆ ನೀಡಿದರು. ಮನೆಗಳಿಗೆ ನಳಗಳ ಸಂಪರ್ಕ ನೀಡಲು ಮೀನಮೇಷ ಎನಿಸಲಾಗುತ್ತಿದ್ದು, ಆರು ತಿಂಗಳುಗಟ್ಟಲೇ ಪರವಾನಗಿಗೆ ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂಬ ಆರೋಪ ಸಹ ಸದಸ್ಯರು ಮಂಡಿಸಿದರು. ಕುಡಿಯುವ ನೀರು, ರಸ್ತೆ, ಸ್ವಚ್ಛತೆ ಸೇರಿ ಮೂಲಭೂತ ಸೌಕರ್ಯ ನೀಡಲಾಗದೇ ಇದ್ದಲ್ಲಿ ನಾವ್ಯಾಕೆ ಸದಸ್ಯರಾಗಬೇಕು ಎಂಬ ಸಿಟ್ಟನ್ನು ಕೆಲವು ಸದಸ್ಯರು ಅಧಿಕಾರಿಗಳ ವಿರುದ್ಧ ಎತ್ತಿದರು.

ನಿರ್ವಹಣಾ ವೆಚ್ಚ

ವರ್ಷದಿಂದ ವರ್ಷಕ್ಕೆ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ. ನಿರ್ವಹಣೆ ಇಲ್ಲದೇ ಯೋಜನೆಗಳು ಯಶಸ್ವಿಯಾಗುತ್ತಿಲ್ಲ. ಸ್ಮಾರ್ಟ್‌ ಸಿಟಿಯಲ್ಲಿ ಸಾವಿರಾರು ಕೋಟಿ ವೆಚ್ಚದ ಕಾಮಗಾರಿ ಮಾಡಿದ್ದು, ಅವುಗಳು ನಿರ್ವಹಣೆ ಇಲ್ಲದೇ ಸೊರಗುವಂತಾಗಿದೆ. ಆದ್ದರಿಂದ ಹೊಸ ಯೋಜನೆಗಳ ನಿರ್ವಹಣೆಗೆ ಹಣ ತೆಗೆದಿರಿಸಿಯೇ ಜಾರಿ ಮಾಡಬೇಕು ಎಂದು ಸದಸ್ಯರು ಸಭೆಯಲ್ಲಿ ಸಲಹೆ ನೀಡಿದರು.

Share this article