ಬೇಸಿಗೆ ಶಿಬಿರ ಮಕ್ಕಳ ಪಾಲಿಗೆ ಓಯಾಸಿಸ್ ಇದ್ದಂತೆ: ನ್ಯಾಯಾಧೀಶ ಭರತಚಂದ್ರ

KannadaprabhaNewsNetwork |  
Published : Apr 05, 2024, 01:03 AM IST
ಸಿದ್ದಾಪುರದಲ್ಲಿ ನಡೆದ ಚಿಣ್ಣರ ಕಲರವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾದು ಸುಬ್ಬಾ ಕೋರಾರ್ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಬೇಸಿಗೆ ಶಿಬಿರಗಳು ಮಕ್ಕಳ ಮನಸ್ಸನ್ನು ಅರಳಿಸುತ್ತವೆ. ಮಕ್ಕಳ ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಗೆ ಕಾರಣವಾಗುತ್ತವೆ.

ಸಿದ್ದಾಪುರ: ಬೇಸಿಗೆ ಶಿಬಿರ ಮಕ್ಕಳ ಪಾಲಿಗೆ ಓಯಾಸಿಸ್ ಇದ್ದಂತೆ. ವರ್ಷದ ಹಲವು ತಿಂಗಳು ಪಠ್ಯದ ಒತ್ತಡದಲ್ಲಿರುವ ಮಕ್ಕಳಿಗೆ ಮರುಭೂಮಿಯಲ್ಲಿ ಓಯಾಸಿಸ್ ರೀತಿಯಲ್ಲಿ ಇಂಥ ಶಿಬಿರಗಳು ಮುದ ನೀಡುತ್ತವೆ ಎಂದು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಭರತಚಂದ್ರ ಕೆ.ಎಸ್. ತಿಳಿಸಿದರು.

ಸ್ಥಳೀಯ ಸರ್ಕಾರಿ ನಿವೃತ್ತ ನೌಕರರ ಸಂಘ, ಲಯನ್ಸ್‌ ಕ್ಲಬ್ ಸಹಯೋಗದಲ್ಲಿ ೭ ದಿನಗಳ ಕಾಲ ಆಯೋಜಿಸಿದ್ದ ಚಿಣ್ಣರ ಕಲರವ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿ, ಇಂಥ ಶಿಬಿರಗಳು ಮಕ್ಕಳ ಮನಸ್ಸನ್ನು ಅರಳಿಸುತ್ತವೆ. ಮಕ್ಕಳ ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಗೆ ಕಾರಣವಾಗುತ್ತವೆ ಎಂದರು.

ಲಯನ್ಸ್‌ ಕ್ಲಬ್ ಅಧ್ಯಕ್ಷ ಆರ್.ಎಂ. ಪಾಟೀಲ ಮಾತನಾಡಿ, ಇಂಥ ಶಿಬಿರಗಳು ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿ. ಸ್ವತಂತ್ರವಾಗಿ ಪಾಲ್ಗೊಂಡು ಹಲವು ವಿಷಯಗಳ ಬಗ್ಗೆ ಅರಿತುಕೊಳ್ಳುವುದರಿಂದ ಮುಂದಿನ ವಿದ್ಯಾಭ್ಯಾಸ ಮತ್ತು ಸಾಮಾಜಿಕವಾದ ಜ್ಞಾನ ದೊರೆಯುತ್ತದೆ ಎಂದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ, ಹಿಂದಿನ ತಲೆಮಾರಿನವರಿಗೆ ಇಂಥ ಶಿಬಿರಗಳ ಸೌಲಭ್ಯ ಇರಲಿಲ್ಲ. ಸುತ್ತಲಿನ ಪರಿಸರ, ಕಾಡು, ಹೊಳೆ ಮುಂತಾದವು ಹೊಸ ಕಲಿಕೆಯ ವಿಧಾನಗಳಾಗಿದ್ದವು. ಬದಲಾದ ಬದುಕಿನ ಕ್ರಮದಲ್ಲಿ ಇಂದಿನ ಮಕ್ಕಳಿಗೆ ಇಂಥ ಶಿಬಿರಗಳು ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ೫ ವರ್ಷದಿಂದ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸುತ್ತಿದ್ದು, ಈ ವರ್ಷ ೮೨ ಮಕ್ಕಳು ಪಾಲ್ಗೊಂಡಿದ್ದಾರೆ. ಚಿತ್ರಕಲೆ, ನಾಟಕ, ಹಾಡು ಮುಂತಾದವುಗಳ ಕಲಿಕೆಯ ಜತೆಗೆ ಪರಿಸರದ ಕುರಿತಾಗಿಯೂ ಅವರಿಗೆ ತಜ್ಞರಿಂದ ಕಲಿಕೆ ಒದಗಿಸಲಾಗಿದೆ. ಹಲವು ಸಂಘ, ಸಂಸ್ಥೆಗಳು, ವ್ಯಕ್ತಿಗಳು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣದ ನೆಹರೂ ಮೈದಾನದ ಪಕ್ಕದಲ್ಲಿನ ಮಕ್ಕಳ ಪಾರ್ಕ್‌ನಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸುವ ಪಪಂ ಸಿಬ್ಬಂದಿ ಮಾದು ಸುಬ್ಬಾ ಕೋರಾರ್ ಅವರನ್ನು ಸನ್ಮಾನಿಸಲಾಯಿತು.

ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ, ಲಯನ್ಸ್‌ ಕ್ಲಬ್ ಕಾರ್ಯದರ್ಶಿ ಕುಮಾರ ಗೌಡರ್, ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪಿ.ಬಿ. ಹೊಸೂರ, ಡಾ. ಶರತ್‌ಚಂದ್ರ ಕೆ.ಎಸ್. ಮಾತನಾಡಿದರು. ಸ.ನಿ. ನೌಕರರ ಸಂಘದ ಉಪಾಧ್ಯಕ್ಷ ಎನ್.ವಿ. ಹೆಗಡೆ ಲಯನ್ಸ್‌ ಡಿಸ್ಟ್ರಿಕ್ಟ್‌ ಚೇರ್ ಪರ್ಸನ್ ಸತೀಶ ಗೌಡರ್ ಉಪಸ್ಥಿತರಿದ್ದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು. ಸ.ನಿ.ನೌ. ಸಂಘದ ಕಾರ್ಯದರ್ಶಿ ವಿ.ಎಸ್. ಶೇಟ ವಂದಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ