ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಯಾವ ಕಾರಣಕ್ಕೂ ರೋಗಿಗಳಿಗೆ ಹೊರಗಿನಿಂದ ಔಷಧ ತರಲು ಹೇಳುವಂತಿಲ್ಲ. ಒಂದು ವೇಳೆ ಹೇಳಿದರೆ ದೂರು ಕೊಡಿ, ಲೋಕಾಯುಕ್ತದಿಂದಲೇ ಸ್ವಯಂಪ್ರೇರಿತ ದೂರು ದಾಖಲಿಸುತ್ತೇವೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದ್ದಾರೆ.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಮತ್ತು ಕುಂದುಕೊರತೆ ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳಿಗೆ ಕಡಿಮೆಯಿಲ್ಲದಂತೆ ಸರ್ಕಾರಿ ಆಸ್ಪತ್ರೆಗಳು ಉತ್ತಮ ವ್ಯವಸ್ಥೆಗಳನ್ನು ಹೊಂದಿವೆ. ಔಷಧ ಕೊರತೆಯಾಗದಂತೆ ಸರ್ಕಾರದಿಂದ ಸಾಕಷ್ಟು ಅನುದಾನವೂ ಇದೆ. ಅಲ್ಲಿಗೆ ಬರುವವರು ಬಡವರು ಎಂಬುದನ್ನು ಮರೆಯಬೇಡಿ. ಔಷಧ ಇಲ್ಲದಿದ್ದರೆ ವೈದ್ಯರೇ ಅದನ್ನು ತಂದುಕೊಡಬೇಕು ಎಂದು ತಾಕೀತು ಮಾಡಿದರು.ಅಧಿಕಾರಿಗಳಿಗೆ ಚಾಟಿ:
ಖಾಸಗಿ ಆಸ್ಪತ್ರೆಗಳು, ಶಾಲೆಗಳ ಉದ್ಧಾರಕ್ಕಾಗಿ ಸರ್ಕಾರಿ ಆಸ್ಪತ್ರೆಗಳು- ಶಾಲೆಗಳನ್ನು ಹಾಳು ಮಾಡುವ ವ್ಯವಸ್ಥೆಯಿದೆ. ಸರ್ಕಾರಿ ಅಧಿಕಾರಿಗಳಾಗಿ ಉತ್ತಮ ವೇತನ ಪಡೆಯುತ್ತಿದ್ದೀರಿ. ಮತ್ತೇಕೆ ಭ್ರಷ್ಟಾಚಾರ ಮಾಡುತ್ತೀರಿ? ಭ್ರಷ್ಟಾಚಾರ ಕ್ಯಾನ್ಸರ್‌ಗಿಂತಲೂ ಅಪಾಯಕಾರಿ. ಭ್ರಷ್ಟಾಚಾರ ಮಾಡಿದವರ ಪರಿಸ್ಥಿತಿ ನೋಡಿದ್ದೇವೆ, ಕೋಟ್ಯಂತರ ಕಾಸಿದ್ದರೂ ನೆಮ್ಮದಿ ಇರಲ್ಲ. ನಿವೃತ್ತಿಯ ಬಳಿಕ ಭ್ರಮನಿರಸರಾಗುತ್ತಾರೆ. ಹೀಗೇ ಭ್ರಷ್ಟಾಚಾರ ಮುಂದುವರಿದರೆ ಜನರು ತಿರುಗಿಬೀಳುವ ದಿನ ದೂರವಿಲ್ಲ ಎಂದು ನ್ಯಾಯಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.ಧನದಾಹ ಬೇಡ:
ಎಲ್ಲ ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ದುರದೃಷ್ಟವಶಾತ್ ಅನೇಕ ಕಡೆಗಳಲ್ಲಿ ದುರಾಡಳಿತ ನಡೆಯುತ್ತಿದೆ. ಉತ್ತಮ ಅಧಿಕಾರಿ ಒಳ್ಳೆಯ ಕೆಲಸ ಮಾಡುತ್ತಿದ್ದರೆ ಅದನ್ನೂ ತಡೆಯುವ ಜನರಿದ್ದಾರೆ ಎಂದ ಅವರು, ಅಧಿಕಾರಿಗಳು ಆತ್ಮಸಾಕ್ಷಿಯಿಂದ ಕೆಲಸ ಮಾಡಿ. ಹಣದ ದಾಹ ಬೇಡ. ಇದ್ದುದರಲ್ಲೇ ತೃಪ್ತರಾಗಿ ಜನರ ಕೆಲಸ ಮಾಡಿ. ಈ ಮೂಲಕ ದೇಶದ ಆಂತರಿಕ ಸೈನಿಕರಂತೆ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.ಸುಳ್ಳು ಕೇಸ್ ಕೊಟ್ಟರೆ ಜೈಲು:
ಜನರು ದೂರದ ಬೆಂಗಳೂರಿಗೆ ಬಂದು ದೂರು ನೀಡುವ ಬದಲಿಗೆ ಲೋಕಾಯುಕ್ತವೇ ಜನರ ಬಳಿ ಬರಲು ತೀರ್ಮಾನಿಸಿದ್ದು, ಅದರಂತೆ ಜಿಲ್ಲೆಗಳಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸುತ್ತಿದ್ದೇವೆ. ಆದರೆ ಇತ್ತೀಚೆಗೆ ಲೋಕಾಯುಕ್ತಕ್ಕೆ ಸುಳ್ಳು ದೂರು ನೀಡುವ ಪ್ರಕರಣಗಳು ಹೆಚ್ಚುತ್ತಿವೆ. ಸುಳ್ಳು ಕೇಸ್ ಹಾಕಿದರೆ ಗಂಭೀರವಾಗಿ ಪರಿಗಣಿಸಲಾಗುವುದು. ಇಂಥ ಪ್ರಕರಣಗಳಲ್ಲಿ ಜೈಲಿಗೆ ಹಾಕಲೂ ಅವಕಾಶವಿದೆ ಎಂದ ಅವರು, ಅದೇ ರೀತಿ ಅಧಿಕಾರಿಗಳು ನಿಗದಿತ ಕಾಲಮಿತಿಯಲ್ಲಿ ಲೋಕಾಯುಕ್ತಕ್ಕೆ ವರದಿ ನೀಡದಿದ್ದರೆ ಹಾಗೂ ಸೂಚನೆ ಪಾಲನೆ ಮಾಡದಿದ್ದರೂ ಜೈಲಿಗೆ ಕಳುಹಿಸಬೇಕಾದೀತು ಎಂದು ಎಚ್ಚರಿಸಿದರು.ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಎಂಪಿ., ಲೋಕಾಯುಕ್ತ ಉಪನಿಬಂಧಕರಾದ ಕೆ.ಎಂ. ರಾಜಶೇಖರ್ (ವಿಚಾರಣೆ- 15), ಕೆ.ಎಂ. ಬಸವರಾಜಪ್ಪ (ವಿಚಾರಣೆ- 2), ಅರವಿಂದ ಎನ್.ವಿ. (ವಿಚಾರಣೆ- 1), ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್., ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ, ಜಿಪಂ ಸಿಇಒ ಡಾ.ಆನಂದ್, ಡಿಸಿಎಫ್ ಅಂತೋನಿ ಮರಿಯಪ್ಪ ಇದ್ದರು.
.................190 ಅಹವಾಲು ಸ್ವೀಕಾರ
ಸಭಾ ಕಾರ್ಯಕ್ರಮದ ಬಳಿಕ ಸಂಜೆವರೆಗೆ 190 ಸಾರ್ವಜನಿಕ ದೂರುಗಳ ವಿಚಾರಣೆ, ಕುಂದು ಕೊರತೆಗಳನ್ನು ಉಪ ಲೋಕಾಯುಕ್ತರು ಸ್ವೀಕರಿಸಿದರು. ಪ್ರತಿಯೊಬ್ಬರ ದೂರುಗಳನ್ನು ಆಲಿಸಿ, ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಸಮಯ ಮಿತಿ ನಿಗದಿಪಡಿಸಿ ಚಾಟಿ ಬೀಸಿದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ಹೇಳಿದರು. ತಮ್ಮ ವಿಶಿಷ್ಟ ಲಘು ಹಾಸ್ಯ ಮಿಶ್ರಿತ ಮಾತಿನ ಧಾಟಿಯಿಂದ ಪ್ರಕರಣಗಳನ್ನು ಒಂದೊಂದಾಗಿ ವಿಲೇವಾರಿ ಮಾಡುತ್ತಿದ್ದ ನ್ಯಾಯಮೂರ್ತಿಗಳು, ಅಗತ್ಯ ಬಿದ್ದಾಗ ಕಡ್ಡಿ ಮುರಿದಂತೆ ನಿರ್ಧಾರ ಪ್ರಕಟಿಸುತ್ತಿದ್ದರು.ಬಜ್ಪೆ ಪಟ್ಟಣ ಪಂಚಾಯ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಗುತ್ತಿಗೆಯ ಬಾಕಿ ಹಣ 2.60 ಲಕ್ಷ ರು. ಪಾವತಿ ಮಾಡಿಲ್ಲ ಎಂಬ ದೂರಿಗೆ ಸ್ಪಂದಿಸಿದ ಉಪಲೋಕಾಯುಕ್ತರು, ಒಂದು ತಿಂಗಳೊಳಗೆ ಬಾಕಿ ಹಣ ಪಾವತಿಸುವಂತೆ ಪಟ್ಟಣ ಪಂಚಾಯ್ತಿ ಇಒಗೆ ನಿರ್ದೇಶನ ನೀಡಿದರು. ಅದೇ ರೀತಿ ಹಳೆಯಂಗಡಿ ವ್ಯಾಪ್ತಿಯಲ್ಲಿ ಡೋರ್ ನಂಬರ್ ನೀಡಲು ಸತಾಯಿಸುತ್ತಿದ್ದ ಪ್ರಕರಣದಲ್ಲಿ ತಿಂಗಳೊಳಗೆ ಡೋರ್ ನಂಬರ್ ನೀಡದಿದ್ದರೆ 6 ತಿಂಗಳು ಜೈಲಿಗೆ ಕಳುಹಿಸುವುದಾಗಿ ಹಳೆಯಂಗಡಿ ಪಿಡಿಒಗೆ ಎಚ್ಚರಿಕೆ ನೀಡಿದರು. .................
ಸಭಾಂಗಣದೊಳಗೆ ಮಳೆ ನೀರು!ಉಪಲೋಕಾಯುಕ್ತರ ಅಹವಾಲು ಸ್ವೀಕಾರ ಸಭೆ ಸಂಜೆವರೆಗೂ ನಡೆದಿದ್ದು, ಸಂಜೆ ವೇಳೆ ಸುರಿದ ಧಾರಾಕಾರ ಮಳೆಯ ನೀರು ಸಭಾಂಗಣದೊಳಗೂ ನುಗ್ಗಿ ತೊಂದರೆಯಾಯಿತು. ಗಾಳಿ ಮಳೆಯಿಂದ ಕೂಡಿದ ನೀರು ಬಾಗಿಲ ಸಂದಿಯಿಂದ ಒಳನುಗ್ಗಿದ್ದು, ಬಳಿಕ ಸಿಬ್ಬಂದಿ ನೀರು ಹೊರಹಾಕಿದರು...........................ಉಪಲೋಕಾಯುಕ್ತ ನ್ಯಾ|ಮೂ.ವೀರಪ್ಪ ಅವರು ಸೋಮವಾರ ಮಂಗಳೂರಿನಲ್ಲಿ ನಡೆಸಿದ ದ.ಕ ಜಿಲ್ಲಾ ಮಟ್ಟದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಒಟ್ಟು 190 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಯಿತು.ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. ಆಗಮಿಸುವ ನಾಗರಿಕರ ದೂರು ಅರ್ಜಿಸ್ವೀಕರಿಸಲು ಸಭಾಂಗಣದ ಹೊರಗಡೆಯೇ ಪಂಡಾಲ್ ಹಾಕಿ, ಅಧಿಕಾರಿಗಳು ಹೆಲ್ಪ್‌ಡೆಸ್‌್ಕ ವ್ಯವಸ್ಥೆ ಮಾಡಿದ್ದರು. ಅವರ ಸರದಿ ಬಂದಾಗ ಸಭಾಂಗಣದ ಒಳಗೆ ಬಂದು ಉಪಲೋಕಾಯುಕ್ತರ ಮುಂದೆಯೇ ಕುಳಿತು ತಮ್ಮ ಅಹವಾಲು ಹೇಳಲು, ಅವರ ಆಕ್ಷೇಪ ಇರುವ ಅಧಿಕಾರಿಯನ್ನೂ ಅಲ್ಲೇ ಕರೆಸಿ ಸಮಸ್ಯೆ ಇತ್ಯರ್ಥ ಮಾಡಲಾಗುತ್ತಿತ್ತು.ಮಧ್ಯಾಹ್ನ ವರೆಗೆ ಉಪಲೋಕಾಯುಕ್ತರೊಬ್ಬರ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಮಧ್ಯಾಹ್ನ ನಂತರ ಉಪಲೋಕಾಯುಕ್ತರು, ಅವರ ಕಚೇರಿಯ ಇಬ್ಬರು ಉಪನಿಬಂಧಕರ ಸೇರಿದಂತೆ ಮೂರು ಪೀಠಗಳಾಗಿ ವಿಂಗಡಿಸಿ ಅರ್ಜಿ ವಿಚಾರಣೆ ಕೈಗೊಳ್ಳಲಾದ ಕಾರಣ ಪ್ರಕ್ರಿಯೆಗೆ ವೇಗ ಸಿಕ್ಕಿತು.