ಗೋಕರ್ಣ: ಸೂರ್ಯ ಹೇಗೆ ಜಗತ್ತಿಗೆ ಆತ್ಮವೋ ಹಾಗೆ ಜ್ಯೋತಿಷ್ಯಕ್ಕೂ ಆತ್ಮ. ಜ್ಯೋತಿಷ್ಯದಲ್ಲಿ ಸೂರ್ಯಗ್ರಹ ಕೇಂದ್ರಬಿಂದು. ಆದ್ದರಿಂದಲೇ ಕವಡೆ ಶಾಸ್ತ್ರದಲ್ಲಿ ವಿಶೇಷವಾಗಿ ಸೂರ್ಯ ಸಂಬಂಧ ಲಕ್ಷಣಗಳನ್ನು ಕಾಣಬಹುದು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು, 54ನೇ ದಿನವಾದ ಗುರುವಾರ ಮುಳ್ಳೇರಿಯಾ ಮಂಡಲದ ಸುಳ್ಯ, ಈಶ್ವರಮಂಗಲ, ನೀರ್ಚಾಲು, ಕುಂಬಳೆ, ಪಳ್ಳತ್ತಡ್ಕ ಮತ್ತು ಪೆರಡಾಲ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಕಾಲ ಸರಣಿಯ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದರು.ಜ್ಯೋತಿಷ್ಯಕ್ಕೆ ಅತ್ಯಗತ್ಯವಾಗಿ ಬೇಕಾದ್ದು ದೈವಾನುಕೂಲ. ಆದ್ದರಿಂದಲೇ ಜ್ಯೋತಿಷಿಗಳನ್ನು ದೈವಜ್ಞ ಎಂದು ಕರೆಯಲಾಗುತ್ತದೆ. ಕವಡೆಶಾಸ್ತ್ರದಲ್ಲೂ ಗುರುಕವಡೆಗೆ ವಿಶೇಷ ಸ್ಥಾನವಿದೆ. ಇದಕ್ಕೆ ನಮಸ್ಕರಿಸಿಯೇ ಜ್ಯೋತಿಷ್ಯ ವಿಶ್ಲೇಷಣೆಯನ್ನು ದೈವಜ್ಞ ನಡೆಸುತ್ತಾರೆ ಎಂದರು.ಜ್ಯೋತಿಷದ ಮೂಲಕ ಎಲ್ಲರಿಗೂ ಒಂದೇ ಫಲ ಚಿಂತನೆ ನಡೆಸುವಂತಿಲ್ಲ. ಆಯಾ ಪರಿಸ್ಥಿತಿಗೆ ಅನುಗುಣವಾಗಿ ಅದು ಅನ್ವಯವಾಗುತ್ತದೆ. ಒಂದೇ ಕಾಲದಲ್ಲಿ ಹುಟ್ಟಿದ ಚಕ್ರವರ್ತಿಯ ಮಗನಿಗೂ, ಕೊಟ್ಟಿಗೆಯಲ್ಲಿ ಹುಟ್ಟುವ ಕರುವಿಗೂ ಫಲ ಒಂದೇ ಇರುವುದಿಲ್ಲ. ಹೋಲಿಕೆಗಳು ಇರಬಹುದೇ ವಿನಾ ಉಳಿದ ಅಂಶಗಳು ಪರಿಸರಕ್ಕೆ ಅನುಗುಣವಾಗಿ ಬದಲಾಗುತ್ತವೆ ಎಂದರು.ಜ್ಯೋತಿಷ್ಯಶಾಸ್ತ್ರದಲ್ಲಿ ದೈವಜ್ಞ ಲಗ್ನಸಾಧನೆ ಮಾಡುವುದು ಕವಡೆ ಶಾಸ್ತ್ರದ ಮೂಲಕ ಮಾತ್ರ. ಉಳಿದೆಲ್ಲ ವಿಧಾನದಲ್ಲಿ ಪೃಚ್ಛಕನ ಪ್ರಶ್ನೆಯ ಮೂಲಕವೇ ಲಗ್ನಸಾಧನೆ ಮಾಡಲಾಗುತ್ತದೆ. ಜಾತಕ ಎನ್ನುವುದು ಬ್ರಹ್ಮಾಂಡದಂತೆ. ದೈವಜ್ಞನಿಗೆ ಗೋಚರವಾದ ಅಂಶಗಳಿಗೆ ಅನುಗುಣವಾಗಿರುತ್ತದೆ. ಒಂದೇ ವಾಕ್ಯ ಬೇರೆ ಬೇರೆಯವರ ಮೇಲೆ ಬೇರೆ ಬೇರೆ ಫಲ ನೀಡಬಹುದು. ದೈವಜ್ಞನ ಚಿಂತನೆಗೂ ಇದು ಅನ್ವಯಿಸುತ್ತದೆ ಎಂದರು.ಅವ್ಯಕ್ತವಾಗಿ ಮಾತೆ ಮತ್ತು ನಾಗ ಸಾನ್ನಿಧ್ಯದ ಗುರುಕಟ್ಟೆಯೊಂದರ ಅನಾವರಣ ಗುರುವಾರ ನೆರವೇರಿದೆ. ಮುಂದಿನ ದಿನಗಳಲ್ಲಿ ಶಿಲಾಮಯ ಗುರುಪಾದುಕೆಗಳ ಪ್ರತಿಷ್ಠಾಪನೆಯಾಗಲಿದೆ ಎಂದರು.ಗುರುಕಟ್ಟೆಯ ಅನಾವರಣವನ್ನು ಶ್ರೀಗಳ ಮಾತೃಶ್ರೀಯವರಾದ ವಿಜಯಲಕ್ಷ್ಮಿ ನೆರವೇರಿಸಿದರು. ವಿದ್ವಾನ್ ಉಮಾಕಾಂತ್ ಭಟ್ ಕೆರೆಕೈ ಮತ್ತು ಪತ್ರಕರ್ತ ನಾಗರಾಜ ಮತ್ತಿಗಾರ್ ಅವರು ಶ್ರೀಗಳಿಂದ ಆಶೀರ್ವಾದ ಮಂತ್ರಾಕ್ಷತೆ ಪಡೆದರು.
ವಿವಿವಿ ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಎಂ., ಮುಳ್ಳೇರಿಯಾ ಮಂಡಲಾಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಶ್ರೀಶ ಶಾಸ್ತ್ರಿ, ದೈವಜ್ಞರಾದ ಕೇಶವ ಭಟ್ ಮಿತ್ತೂರು, ಆರ್ಕೋಡ್ಲು ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.