ಬಿಸಿಲು, ಪಾದರಸ ಹೈಜಂಪ್‌; ಬಿಸಿಲೂರಲ್ಲಿ ನೀರಿಗಾಗಿ ಹಾಹಾಕಾರ

KannadaprabhaNewsNetwork | Published : May 9, 2025 12:31 AM
Follow Us

ಸಾರಾಂಶ

ಕಲಬುರಗಿ ಜಿಲ್ಲೆಯಲ್ಲಿ ಈ ಬೇಸಿಗೆಯ ಅವಧಿ ಕುಡಿಯುವ ನೀರಿನ ಸಮಸ್ಯೆ ಮುಗಿಲು ಮುಟ್ಟಿದೆ. ಕೊಡ ನೀರಿಗೂ ಜನ ಕಷ್ಟ ಪಡುತ್ತ ಅಂಡಲೆಯೋದು ಶುರುವಾಗಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಜಿಲ್ಲೆಯಲ್ಲಿ ಈ ಬೇಸಿಗೆಯ ಅವಧಿ ಕುಡಿಯುವ ನೀರಿನ ಸಮಸ್ಯೆ ಮುಗಿಲು ಮುಟ್ಟಿದೆ. ಕೊಡ ನೀರಿಗೂ ಜನ ಕಷ್ಟ ಪಡುತ್ತ ಅಂಡಲೆಯೋದು ಶುರುವಾಗಿದೆ.

ನೆತ್ತಿ ಸುಡುವ ಬಿಸಿಲು ಒಂದೆಡೆಯಾದರೆ ಹನಿ ನೀರಿಗೂ ಪರದಾಟ ಇನ್ನೊಂದೆಡೆ, ಹೀಗಾಗಿ ಜಿಲ್ಲೆಯ 50 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿಗಾಗಿ ಜನ- ಜಾನುವಾರು ಪರೇಶಾನಿಯಲ್ಲಿವೆ.

ಜಿಲ್ಲೆಯ ಭೀಮಾ ತೀರ ಅಫಜಲ್ಪುರ, ಜೇವರ್ಗಿ , ಅಮರ್ಜಾ ತೀರ ಆಳಂದ, ಗಂಡೋರಿ ನದಿಯ ಕಮಲಾಪುರ, ಕಲಬುರಗಿ ತಾಲೂಕುಗಳಲ್ಲಿ ಸಮಸ್ಯೆ ಭುಗಿಲೆದ್ದಿದೆ. ಇಲ್ಲೆಲ್ಲಾ ತಾಲೂಕು ಆಡಳಿತದವರು, ಸ್ಥಳೀಯ ಪಂಚಾಯ್ತಿಯವರು ಖಾಸಗಿ ಬಾವಿಗಳನ್ನು ಬಾಡಿಗೆ ಪಡೆದು, ವಶಕ್ಕೆ ಪಡೆದೋ ನೀರನ್ನು ಪೂರೈಸಲು ನಿತ್ಯವೂ ಹರಸಾಹಸ ಪಡುತ್ತಿದ್ದಾರೆ.

ಇದಲ್ಲದೆ 50 ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಇಲ್ಲೆಲ್ಲಾ ಕೊರೆಯಲಾಗಿದ್ದರೂ ನೀರಿನ ಕೊರತೆ, ಜಲಮೂಲ ಬತ್ತಿ ಹೋಗುವ ಭೀತಿ, ಕರೆಂಟ್‌ ಕೈ ಕೊಡುವುದರಿಂದ ಈ ಬಾವಿಗಳಿಂದಲೂ ಸಮರ್ಪಕ ನೀರು ಪೂರೈಕೆ ಕನಸಾಗಿದೆ. ಹೀಗಾಗಿ ನೆತ್ತಿ ಸುಡುವ 45 ಡಿಗ್ರಿಗೂ ಹೆಚ್ಚಿನ ಉರಿ ಬಿಸಿಲಲ್ಲಿ ಜನ ತಮಗೆ, ಮನೆಯಲ್ಲಿರೋ ಜಾನುವಾರುಗಳಿಗೆ ಬಾಯಾರಿಕೆ ನೀಗಿಸಲು ನೀರಿನ ಜಲಮೂಲಗಳನ್ನು ಅರಸುತ್ತ ಹೈರಾಣಗುತ್ತಿದ್ದಾರೆ.

ಇಲ್ಲೆಲ್ಲಾ ನೀರಿಲ್ಲ, ನೀರಿಲ್ಲ

ಅಫಜಲ್ಪೂರ- ಊಕಂಲಗಾ, ಬಳೂರಗಿ, ರೇವೂರ ಬಿ, ನಂದರಗಾ, ಮಲ್ಲಾಬಾದ್

ಆಳಂದ- ಹಾಳ ತಡಕಲ್‌, ಸರಸಂಬಾ, ಹೆಬಳಿ, ನೀರಗುಡಿ, ಯಳಸಂಗಿ, ಸಾವಳೇಶ್ವರ, ತಡಕಲ್‌, ಹೊದಲೂರು, ಕವಲಗಾ, ಕಡಗಂಚಿ, ಧುತ್ತರಗಾಂವ್‌, ಹಡಲಗಿ, ಕೋರಳ್ಳಿ, ಧಂಗಾಪೂರ, ಹೀರೋಳ್ಳಿ,

ಕಲಬುರಗಿ- ಮಿಣಜಗಿ, ಕಲ್ಲಹಂಗರಗಾ, ಸಾವಳಗಿ, ಕಲಬುರಗಿ ದಕ್ಷಿಣ- ಕುಸನೂರ್‌, ಭೀಮಳ್ಳಿ, ಅಜಾದಪೂರ

ಕಮಲಾಪುರ- ಚೆಂಗಟಾ, ಶ್ರೀಚಂದ ಹಾಗೂ ಅಂಬಲಗಾ, ಕಲಮೂಡ್‌

ಚಿತ್ತಾಪುರ- ರಾಜೋಳ, ಇವಣಿ

ಯಡ್ರಾಮಿ- ಮಳ್ಳಿ ಹಾಗೂ ಸುತ್ತಲಿನ ಊರುಗಳು

ಜೇವರ್ಗಿ- ನೆಲೋಗಿ, ಆಂದೋಲಾ, ಕುಕನೂರ್‌

ಜಲಮೂಲಗಳು ಬತ್ತಿ ಪರೇಶಾನಿ ಹೆಚ್ಚಿದೆ

ಕಲಬುರಗಿ ನಗರಕ್ಕೆ ಹೊಂದಿಕೊಂಡಿರುವ ಕುಸನೂರಕ್ಕೆ ಎಲ್‌ ಆ್ಯಂಡ್ ಟಿ ಕಂಪನಿಯವರಿಂದ ನಿತ್ಯ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯ 850 ಕ್ಕೂ ಹೆಚ್ಚಿನ ಹಳ್ಳಿಗಳ ಪೈಕಿ 350 ಕ್ಕೂ ಹೆಚ್ಚಿನ ಕಡೆ ಕುಡಿಯುವ ನೀರಿನ ಸಮಸ್ಯೆ ಕಾಡುವ ಅಂದಾಜಿತ್ತು. ಇದೀಗ ಕೊನೆ ಹಂತದಲ್ಲಿ 50 ಕ್ಕೂ ಹೆಚ್ಚು ಊರುಗಳಲ್ಲಿ ದಾಹ ಹೆಚ್ಚಿದೆ. ನೀರಿನ ಮೂಲ ಬತ್ತಿ ಪಾತಾಳ ಸೇರಿದೆ.1, 332 ಸಾರ್ವಜನಿಕ ಕೊಳವೆ ಬಾವಿಗಳ ಅಂತರ್ಜಲ ಬಿಸಿಲಿಗೆ ಬತ್ತಿ ಮಂಗಮಾಯ. ಹೀಗಾಗಿ ನೀರಿಲ್ಲದೆ ಬೋರವೆಲ್‌ ಒಣಗಿ ನಿಂತಿವೆ. ಕಲಬುರಗಿ ನಗರದಲ್ಲಿಯೂ ಸಮಸ್ಯೆ ಉಲ್ಬಣಿಸಿದೆ. ಅನೇಕ ವಾರ್ಡ್‌ಗಳಿಗೆ ಟ್ಯಾಂಕರ್‌ ನೀರೇ ಗತಿಯಾಗಿದೆ.

ಭೀಮಾ ನದಿಗೆ ನಾರಾಯಣಪುರ ಜಲಾಶದಿಂದ ನೀರು ಹೊಂದಾಣಿಕೆ ಮಾಡಿ ಪಡೆಯಲು ಅದಾಗಲೇ ಡೀಸಿ ಕಲಬುರಗಿ ಪ್ರಸ್ತಾವನೆಯನ್ನ ಪ್ರಾ. ಆಯುಕ್ತರಿಗೆ ಸಲ್ಲಿಸಿದ್ದು, ಅದು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಬೇಕಿದೆ. ಅಫಜಲ್ಪುರದ ಸೊನ್ನದಲ್ಲಿ ಲಭ್ಯವಿರೋ ನೀರನ್ನು ಜೂನ್‌ ನಂತರವೂ ಮಳೆ ಬಾರದಿದ್ದರೆ ಉಂಟಾಗುವ ಸಂಕಷ್ಟದಲ್ಲಿ ಬಳಸಲು ನಿರ್ಧರಿಸಿ ಕಾಯ್ದಿರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಕೃಷ್ಣಾ ನದಿ ಹೆಚ್ಚುವರಿ ನೀರನ್ನು ಭೀಮೆಗೆ ಪಡೆದು ಜನ- ಜಾನುವಾರು ನೀರಿನ ಹಾಹಾಕಾರ ನೀಗಿಸೋದೇ ಈಗಿನ ಪರಿಹಾರ ಸೂತ್ರವಾಗಿದೆ.

ನೀರಿನ ಬಿಡುಗಡೆಗೆ ಕ್ಯಾರೆ ಎನ್ನದ ಮಹಾರಾಷ್ಟ್ರ

ಉಜನಿ ಜಲಾಶಯದಿಂದ ಒಂದೋ, ಎರಡೋ ಟಿಎಂಸಿ ನೀರನ್ನು ಬೇಸಿಗೆ ಸಂಕಷ್ಟ ಪರಿಹಾರ ರೂಪದಲ್ಲಿ ಹರಿ ಬಿಡುವಂತೆ ಸದನದಲ್ಲಿ ಇಲ್ಲಿನ ಶಾಸಕರು, ಸಚಿವರು ಆಗ್ರಹಿಸಿದರು. ಸಿಎಂ ಸಿದ್ದರಾಮಯ್ಯನವರೂ ಪತ್ರ ಬರೆದು ಆಗ್ರಹಿಸಿದರೂ ಇಂದಿಗೂ ಮಹಾರಾಷ್ಟ್ರ ಈ ನೀರಿನ ಬಿಡುಗಡೆ ಬಗ್ಗೆ ಕ್ಯಾರೆ ಎಂದಿಲ್ಲ. ಹೀಗಾಗಿ ಉಜನಿ ಜಲಾಶಯದ ನೀರು ಭೀಮಾ ನದಿಗೆ ಹರಿದು ಬರುವ ಸಂಭವಗಳು ಕ್ಷೀಣ ಎನ್ನಲಾಗುತ್ತಿದೆ.