ಸುಂಟಿಕೊಪ್ಪ: ಅಲ್ ಅಮೀನ್ ಆಶ್ರಯದಲ್ಲಿ ಸರಳ ಸಾಮೂಹಿಕ ವಿವಾಹ ಸಂಪನ್ನ

KannadaprabhaNewsNetwork | Published : Mar 5, 2024 1:31 AM

ಸಾರಾಂಶ

ಇದೇ ಪ್ರಥಮವಾಗಿ ಸುಂಟಿಕೊಪ್ಪದಲ್ಲಿ ಆಯ್ದ 8 ಮಂದಿ ಬಡ ಹೆಣ್ಣುಮಕ್ಕಳ ಶುಭ ವಿವಾಹಕ್ಕೆ ಜಿಲ್ಲೆಯ ಸಾವಿರಾರು ಮುಸ್ಲಿಂ ಬಾಂಧವರು ಸಾಕ್ಷಿಗಳಾದರು. ಸುಂಟಿಕೊಪ್ಪ ಗದ್ದೆಹಳ್ಳದ ಎಸ್ಎಸ್‌ ಇಂಟರ್‌ನ್ಯಾಶನಲ್‌ ಹಾಲ್‌ನಲ್ಲಿ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಬಡ ಕುಟುಂಬದವರು ಇಂದು ಈಗಿನ ಚಿನ್ನದ ದರದಲ್ಲಿ ತಮ್ಮ ಮಗಳಿಗೆ ಐದು ಪವನ್ ಚಿನ್ನಾಭರಣ ಹಾಕಿ ವಿವಾಹ ಮಾಡಿಸಬೇಕೆಂದರೆ ಕನಿಷ್ಠ ಮೂರು ಲಕ್ಷ ರು.ಗಳಾದರೂ ಬೇಕಾಗುತ್ತದೆ. ಬಡ ಕೂಲಿ ಕಾರ್ಮಿಕನೊಬ್ಬ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವುದು ನಿಜಕ್ಕೂ ಕಷ್ಟ ಸಾಧ್ಯ. ಇದನ್ನು ಮನಗಂಡ ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ಮುಸ್ಲಿಂ ಸಮುದಾಯದ ಬಡ ಕನ್ಯೆಯರ ಬಾಳು ಬೆಳಗಲು ಕಾರ್ಯನಿರ್ವಹಿಸುತ್ತಿದೆ. ಈ ಸಮಿತಿ ಕಳೆದ 20 ವರ್ಷಗಳಿಂದ ಜಿಲ್ಲೆಯ ಮುಸ್ಲಿಂ ಸಮಾಜದ ಬಡ ಯುವತಿಯರ ವಿವಾಹ ಉಚಿತವಾಗಿ ನಡೆಸಿಕೊಡುತ್ತಾ ಬರುತ್ತಿದೆ.

ಈ ಭಾನುವಾರ ಇದೇ ಪ್ರಥಮವಾಗಿ ಸುಂಟಿಕೊಪ್ಪದಲ್ಲಿ ಆಯ್ದ 8 ಮಂದಿ ಬಡ ಹೆಣ್ಣುಮಕ್ಕಳ ಶುಭ ವಿವಾಹಕ್ಕೆ ಜಿಲ್ಲೆಯ ಸಾವಿರಾರು ಮುಸ್ಲಿಂ ಬಾಂಧವರು ಸಾಕ್ಷಿಗಳಾದರು. ಸುಂಟಿಕೊಪ್ಪ ಗದ್ದೆಹಳ್ಳದ ಎಸ್ಎಸ್‌ ಇಂಟರ್‌ನ್ಯಾಶನಲ್‌ ಹಾಲ್‌ನಲ್ಲಿ ನಡೆದ ಸರಳ ಸುಂದರ ಸಮಾರಂಭದಲ್ಲಿ ಸಮುದಾಯದ ಧರ್ಮ ಗುರು ಸೈಯದ್ ಕೆ.ಎಸ್. ಮುಕ್ತಾರ್ ತಂಙಳ್ ಕುಂಬೋಲ್ ಅವರು ನಿಖಾಹ್‌ ನೇತೃತ್ವ ವಹಿಸಿದ್ದರು. ಜಿಲ್ಲೆಯ ಮುಸ್ಲಿಂ ಮುಂದಾಳು ಹಾಜಿ ಕೆ.ಎಂ. ಇಬ್ರಾಹಿಂ ಮಾಸ್ಟರ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು.ವಧುವಿಗೆ ಐದು ಪವನ್ ಚಿನ್ನಾಭರಣ ವಧೂ ವರರಿಗೆ ಹೊಸ ಉಡುಪು ಹಾಗೂ ಸೇರಿದ ಸಾರ್ವಜನಿಕರಿಗೆ ಮಧ್ಯಾಹ್ನದ ಭೋಜನ ನೀಡುವ ಮೂಲಕ ಅಲ್‌ಮೀನ್ ನ ಕಾರ್ಯಕರ್ತರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಉದ್ಯಮಿ ಎಂ.ಎಂ.ಸಾಹೀರ್‌ ತಮ್ಮ ಕಲ್ಯಾಣ ಮಂಟಪವನ್ನು ಈ ಸಾಮೂಹಿಕ ವಿವಾಹ ಸಮಾರಂಭಕ್ಕೆ ಉಚಿತವಾಗಿ ಬಿಟ್ಟುಕೊಟ್ಟಿದ್ದಲ್ಲದೆ, ಇಬ್ರಾಹಿಂ ಮಾಸ್ಟರ್ ಅವರ ಮಾತಿಗೆ ಮನ್ನಣೆ ನೀಡಿ ಮುಂದೆ ಪ್ರತಿ ವರ್ಷ ಬಡವರ ಸಾಮೂಹಿಕ ವಿವಾಹಕ್ಕಾಗಿ ಕಲ್ಯಾಣ ಮಂಟಪವನ್ನು ತಾವು ಉಚಿತವಾಗಿ ಕೊಡುವುದಾಗಿ ಭರವಸೆ ನೀಡಿದರು.

ಬಡ ಕನ್ಯೆಯರ ವಿವಾಹಾರ್ಥ ಜಿಲ್ಲೆಯಾದ್ಯಂತ ಕೊಡುಗೈ ದಾನಿಗಳ ಮನೆಗಳಿಗೆ ತೆರಳಿದಾಗ ಉತ್ತಮ ಪ್ರತಿಕ್ರಿಯೆ ದೊರೆತುದರ ಫಲವಾಗಿ ಈ ಸಮಾರಂಭ ಆಯೋಜಿಸಲು ಸಾಧ್ಯವಾಯಿತು ಎಂದು ಸಮಿತಿಯ ಕೋಶಾಧಿಕಾರಿ ಅಬ್ದುಲ್ ಲತೀಫ್ ಹಾಜಿ ಹೇಳಿದರು.

ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ.ಮಹಮ್ಮದ್ ಸಮಾರಂಭದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಅಲ್‌ಮೀನ್ ಸಮಿತಿಯ ಅಧ್ಯಕ್ಷ ಬಿ.ಎಚ್. ಅಹಮದ್ ಹಾಜಿ, ಪೆರಂಬಾಡಿ ಅಧ್ಯಕ್ಷರು ಶಂಶುಲ್ ಉಲಮಾ ಎಜುಕೇಶನಲ್ ಟ್ರಸ್ಟ್ ಸಿ.ಪಿ.ಎಂ.ಬಶೀರ್ ಹಾಜಿ,ಕೊಡಗು ಜಿಲ್ಲೆ ನಾಯಿಭ್ ಖಾಝಿ ಬಹು ಅಬ್ಧುಲ್ಲಾ ಫೈಝಿ, ಸುಂಟಿಕೊಪ್ಪ ಮುದ್ರರೀಸ್ ಸುನ್ನಿ ಮುಸ್ಲಿಂ ಜಮಾಅತ್ ಉಸ್ಮಾನ್ ಫೈಝಿ, ಗದ್ದೆಹಳ್ಳ ನೂರ್ ಜುಮಾ ಮಸೀದಿ ಖತೀಬರ್ ಉಸಾಮಾ ಸಖಾಫಿ, ಕೊಡಗರಹಳ್ಳಿ ಬಾಪು ಹಾಜಿ ಮತ್ತಿತರರು ಹಾಜರಿದ್ದರು.

Share this article