ಸುಂಟಿಕೊಪ್ಪ: ಗ್ರಾಹಕರ ಸೇವೆಗೆ ದೊರಕದ ನಂದಿನಿ ಕ್ಷೀರ ಕೇಂದ್ರ

KannadaprabhaNewsNetwork | Updated : Jul 05 2024, 12:54 AM IST

ಸಾರಾಂಶ

ಒಂದೂವರೆ ದಶಕದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಹಿನ್ನಲೆಯಲ್ಲಿ ಸಾಕಷ್ಟು ಪ್ರಯತ್ನ ಹಾಗೂ ಬೇಡಿಕೆಯ ಫಲವಾಗಿ ನಂದಿನಿ ಕ್ಷೀರಕೇಂದ್ರ ಸುಂಟಿಕೊಪ್ಪ ಹೋಬಳಿ ಕೇಂದ್ರಕ್ಕೆ ಮಂಜೂರಾಗಿತ್ತು. ಆಗ ಹರಾಜಿನಲ್ಲಿ ಕೇಂದ್ರವನ್ನು ಪಡೆದುಕೊಂಡವರು ವ್ಯವಹಾರ ಕೈಗೂಡದ ಹಿನ್ನಲೆಯಲ್ಲಿ ಇನ್ನೊಬ್ಬರಿಗೆ ಪರಭಾರೆ ಮಾಡಿದರು. ಅವರಿಗೂ ವ್ಯಾಪಾರ ಕೈಗೂಡದ ಹಿನ್ನಲೆಯಲ್ಲಿ ನಂದಿನಿ ಕ್ಷೀರ ಕೇಂದ್ರವು ಯಾರಿಗೂ ಬೇಡದಂತಾಗಿ ಮುಚ್ಚಲ್ಪಟ್ಟಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸಾರ್ವಜನಿಕರಿಗೆ ಸಹಾಯವಾಗಬೇಕಿದ ಪಟ್ಟಣದ ಹೃದಯಭಾಗದಲ್ಲಿರುವ ನಂದಿನಿ ಕ್ಷೀರ ಕೇಂದ್ರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿ ಮುಚ್ಚಲ್ಪಟ್ಟಿದ್ದು, ಗ್ರಾಹಕರಿಗೆ ಸಮಸ್ಯೆ ಉಂಟುಮಾಡಿದೆ.

ಒಂದೂವರೆ ದಶಕದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಹಿನ್ನಲೆಯಲ್ಲಿ ಸಾಕಷ್ಟು ಪ್ರಯತ್ನ ಹಾಗೂ ಬೇಡಿಕೆಯ ಫಲವಾಗಿ ನಂದಿನಿ ಕ್ಷೀರಕೇಂದ್ರ ಸುಂಟಿಕೊಪ್ಪ ಹೋಬಳಿ ಕೇಂದ್ರಕ್ಕೆ ಮಂಜೂರಾಗಿತ್ತು. ಆಗ ಹರಾಜಿನಲ್ಲಿ ಕೇಂದ್ರವನ್ನು ಪಡೆದುಕೊಂಡವರು ವ್ಯವಹಾರ ಕೈಗೂಡದ ಹಿನ್ನಲೆಯಲ್ಲಿ ಇನ್ನೊಬ್ಬರಿಗೆ ಪರಭಾರೆ ಮಾಡಿದರು. ಅವರಿಗೂ ವ್ಯಾಪಾರ ಕೈಗೂಡದ ಹಿನ್ನಲೆಯಲ್ಲಿ ನಂದಿನಿ ಕ್ಷೀರ ಕೇಂದ್ರವು ಯಾರಿಗೂ ಬೇಡದಂತಾಗಿ ಮುಚ್ಚಲ್ಪಟ್ಟಿದೆ.

ಕೆಲ ಸಮಯದ ಹಿಂದೆ ಈ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಬಂಧಿಸಿದವರು ವ್ಯವಹಾರ ನಡೆಸುತ್ತಿದ್ದವರನ್ನು ಎಚ್ಚರಿಸಿ ನಂದಿನಿ ಕ್ಷೀರ ಕೇಂದ್ರ ಮತ್ತೆ ಕಾರ್ಯನಿರ್ವಹಿಸುವಂತೆ ಮಾಡಿದ್ದರು. ಆದರೆ ಕೆಲವು ತಿಂಗಳು ಬಳಿಕ ಮತ್ತೆ ಕ್ಷೀರ ಕೇಂದ್ರ ಯಥಾಸ್ಥಿತಿಗೆ ಬಂದಿರುವ ಬಗ್ಗೆ ಸಾರ್ವಜನಿಕರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕೆಎಂಫ್‌ ಒಡೆತನದ ನಂದಿನಿ ಉತ್ಪನ್ನಗಳು ಗ್ರಾಹಕ ವಲಯದಲ್ಲಿ ಜನಪ್ರಿಯವಾಗಿವೆ. ಸಾಮಾನ್ಯವಾಗಿ ನಂದಿನಿ ಉತ್ಪನಗಳು ನಿಗದಿತ ಬೆಲೆಗೆ ಮಾರಾಟವಾಗುತ್ತಿದ್ದು, ಖಾಸಗಿ ಮತ್ತು ಇತರೇ ಏಜೆನ್ಸಿಗಳು ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳ ಬೆಲೆ ಹೆಚ್ಚಿಸುತ್ತವೆ. ಇದೀಗ ಕ್ಷೀರ ಕೇಂದ್ರ ಮುಚ್ಚಿರುವ ಹಿನ್ನಲೆಯಲ್ಲಿ ದುಪ್ಪಟ್ಟು ದರ ನೀಡಬೇಕಾದ ಅನಿವಾರ್ಯತೆ ಇದೆಯೆಂದು ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ.

..............................ಕ್ಷೀರ ಕೇಂದ್ರದ ಗುತ್ತಿಗೆ ಪಡೆದ ಗುತ್ತಿಗೆದಾರರು ಉತ್ಪನ್ನಗಳ ಮಾರಾಟ ಮಾಡದಿದ್ದರೂ, ಕೆಎಂಎಫ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕ್ಷೀರ ಕೇಂದ್ರವು ವ್ಯಾಪಾರ ವಹಿವಾಟು ನಡೆಸದೆ ಗೋದಾಮು ಆಗಿ ಪರಿವರ್ತನೆಗೊಂಡಿದೆ. ಕೂಡಲೇ ಕ್ಷೀರಕೇಂದ್ರದಲ್ಲಿ ನಂದಿನಿ ಹಾಲು ಸೇರಿದಂತೆ ಉತ್ಪಾನಗಳ ಮಾರಾಟ ಆರಂಭಿಸಲು ಅಧಿಕಾರಿಗಳು ಮುಂದಾಗಲಿ.

-ವಿಘ್ನೇಶ್‌, ಸುಂಟಿಕೊಪ್ಪ ಬಿಜೆಪಿ ಯುವಮೋರ್ಚಾ ಅಧ್ಯಕ್ಷ.

.......................

ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರಿ ಸ್ವಾಮ್ಯದ ಕೆಎಂಎಫ್ ನಂದಿನಿ ಕ್ಷೀರ ಕೇಂದ್ರವನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ಸುಂಟಿಕೊಪ್ಪದಲ್ಲಿ ಆರಂಭಿಸಲಾಗಿತ್ತು. ಇದೀಗ ಕೇಂದ್ರ ಬಳಕೆಗಿಲ್ಲದೆ, ಸುಂಟಿಕೊಪ್ಪದಲ್ಲಿ ಗ್ರಾಹಕರು ಖಾಸಗಿ ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳನ್ನು ದುಬಾರಿ ಬೆಲೆ ತೆತ್ತು ಉಪಯೋಗಿಸುವಂತಾಗಿದೆ. ಕೆಎಂಎಫ್‌ ಅಧಿಕಾರಿಗಳು ಇತ್ತ ಗಮನ ಹರಿಸಿ, ಕ್ರಮ ಕೈಗೊಳ್ಳಲಿ.

-ಸುರೇಶ್‌ ಗೋಪಿ, ಸ್ಥಳೀಯರು.

.........................

ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ನಂದಿನಿ ಕ್ಷೀರ ಕೇಂದ್ರವನ್ನು ಲಕ್ಷಾಂತರ ರು. ವ್ಯಯಿಸಿ ಸುಂಟಿಕೊಪ್ಪ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲಾಗಿದೆ. ಆದರೆ ಕೆಲವು ತಿಂಗಳು ಹಿಂದಿನಿಂದಲೇ ಇಲ್ಲಿ ಉತ್ಪನ್ನಗಳ ಮಾರಾಟವಾಗದೆ, ಗ್ರಾಹಕರಿಗೆ ಅನಾನೂಕೂಲವಾಗುತ್ತಿರುವ ಬಗ್ಗೆ ದೂರು ಬಂದಿದೆ. ಕ್ಷೀರ ಕೇಂದ್ರವನ್ನು ಕೂಡಲೇ ಪುನಾರಂಭಿಸಲು ಕೆಎಂಎಫ್ ಅಧಿಕಾರಿಗಳು ಗಮನಹರಿಸಬೇಕು.

-ಪಿ.ಆರ್‌.ಸುನಿಲ್‌ಕುಮಾರ್‌, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷ.

Share this article