ದೊಡ್ಡಬಳ್ಳಾಪುರ: ನಗರಸಭೆ 2024-25ನೇ ಸಾಲಿನ ಆಯವ್ಯಯ ಸಿದ್ದತೆ ಕುರಿತು ಸಾರ್ವಜನಿಕ ಸಮಾಲೋಚನಾ ಸಭೆ ಇಲ್ಲಿನ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿ ಮಂಗಳವಾರ ನಡೆಯಿತು.
ನಗರ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಕೊರತೆ ನಿರಂತರವಾಗಿ ಕಾಡುತ್ತಿದೆ. ಗಲ್ಲಿಗಲ್ಲಿಗಳಲ್ಲೂ ಕಸ ನಿರ್ವಹಣೆ ದೊಡ್ಡ ಸವಾಲಾಗಿದೆ. ಘನತ್ಯಾಜ್ಯ ಸಂಗ್ರಹ ನಿರ್ವಹಣೆ ವ್ಯವಸ್ಥೆ ಸರಿ ಇಲ್ಲ. ನಗರಸಭೆ ಸ್ವತ್ತುಗಳ ರಕ್ಷಣೆಗೆ ಯಾವುದೇ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ. ನಾಗರಕೆರೆ ಸಮಗ್ರ ಅಭಿವೃದ್ದಿ ಇಚ್ಛಾಶಕ್ತಿ ಕೊರತೆಯಿದೆ. ಕಳೆದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದ ಕೆಲ ಪ್ರಸ್ತಾವನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ತುರ್ತು ಕ್ರಮ ಅಗತ್ಯಎಂದರು.
ವಿವಿಧ ವಿಚಾರಗಳ ಪ್ರಸ್ತಾಪ:ಸಭೆಯಲ್ಲಿ ಯುವ ಸಂಚಲನ ಅಧ್ಯಕ್ಷ ಚಿದಾನಂದ್, ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿ ತಾಲೂಕು ಅಧ್ಯಕ್ಷ ಜೆ.ಆರ್.ರಮೇಶ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗಂಗರಾಜ ಶಿರವಾರ, ಮಾಜಿ ನಗರಸಭಾ ಸದಸ್ಯೆ ಪ್ರಮೀಳಾ ಮಹದೇವ್ ಮತ್ತಿತರರು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.
ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಗರಸಭೆ ಅಧಿಕಾರಿಗಳು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿರುವುದಾಗಿ ಹೇಳುತ್ತಾರೆ. ಆದರೆ ಹಲವು ಬೀದಿಗಳಲ್ಲಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಜೊತೆಗೆ ಬೀಡಾಡಿ ಹಸುಗಳು, ಕತ್ತೆ, ಕುದುರೆಗಳ ಹಾವಳಿಯೂ ಮಿತಿ ಮೀರಿದೆ. ಮಾರುಕಟ್ಟೆ ಪ್ರದೇಶದಲ್ಲಿ ಕೆಲವೊಮ್ಮೆ ಓಡಾಡುವುದೇ ಸವಾಲಿನ ಕೆಲಸ. ಈ ಬಗ್ಗೆ ಬಜೆಟ್‌ನಲ್ಲಿ ಸೂಕ್ತ ಕ್ರಮ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ನಗರಾಭಿವೃದ್ದಿಗೆ ಪೂರಕವಾದ ಜನಸ್ನೇಹಿ ಬಜೆಟ್ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಬರೀ ಘೋಷಣೆಗಳಿಗೆ ಸೀಮಿತವಾಗದೆ ವಾಸ್ತವಿಕ ವಿಚಾರಗಳಿಗೆ ಹತ್ತಿರವಿರುವ ಆಯವ್ಯಯವನ್ನು ಮಂಡಿಸಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಪರಮೇಶ್, ಉಪಾಧ್ಯಕ್ಷೆ ಫರ್ಹಾನಾ ತಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ , ಲೆಕ್ಕಾಧಿಕಾರಿ ನಂದೀಶ್, ವಿವಿಧ ಶಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಮತ್ತಿತರರು ಹಾಜರಿದ್ದರು.13ಕೆಡಿಬಿಪಿ2-