ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದೂರುಗಳು ಕೇಳಿ ಬರುತ್ತಿದ್ದು, ಜಿಲ್ಲೆಯ ಪ್ರತೀ ಕುಟುಂಬಕ್ಕೂ ಜಲ ಮೂಲವನ್ನು ಬಳಸಿಕೊಂಡು ನಲ್ಲಿ ನೀರು ಸಂಪರ್ಕ ಒದಗಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾವೇರಿ ನದಿ ಹುಟ್ಟುವ ಕೊಡಗು ಜಿಲ್ಲೆಯಲ್ಲಿ ದೀಪದ ಕೆಳಗೆ ಕತ್ತಲು ಎನ್ನುವಂತಾಗಬಾರದು. ಕೊಡಗು ಜಿಲ್ಲೆಯ ಎಲ್ಲ ಕುಟುಂಬಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು. ಗಾಳಿಬೀಡು ಬಳಿ ಇರುವ ನವೋದಯ ಶಾಲೆಗೂ ಕುಡಿಯುವ ನೀರು ಸಂಪರ್ಕ ಒದಗಿಸುವಂತೆ ಇದೇ ಸಂದರ್ಭದಲ್ಲಿ ಸಂಸದರು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಕಸ ವಿಲೇವಾರಿ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಬಗ್ಗೆ ಪ್ರವಾಸಿಗರಿಗೂ ಅರಿವು ಮೂಡಿಸಬೇಕು ಎಂದರು. ಹಾಗೆಯೇ ಜಲ ಜೀವನ್ ಅಭಿಯಾನ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸುಜಾ ಕುಶಾಲಪ್ಪ ಸೂಚಿಸಿದರು. ಸಮನ್ವಯತೆಯಿಂದ ಕಾರ್ಯನಿರ್ವಹಿಸಿ: ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಸಿಇಒ ವರ್ಣಿತ್ ನೇಗಿ ಅವರು ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಂದಾಗ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು. ರಸ್ತೆ, ಕುಡಿಯುವ ನೀರು ಹಾಗೂ ತ್ಯಾಜ್ಯ ವಿಲೇವಾರಿ ಸಂಬಂಧಿಸಿದಂತೆ ಜಿ.ಪಂ. ಉಪ ಕಾರ್ಯದರ್ಶಿ ಧನರಾಜ್, ತಾ.ಪಂ. ಇಒಗಳಾದ ಶೇಖರ್, ಜಯಣ್ಣ, ಅಪ್ಪಣ್ಣ ಮಾಹಿತಿ ನೀಡಿದರು. ಕೊಡಗು ಜಿಲ್ಲೆಯ 5 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವು ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.ಈ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಬರ ನಿರ್ವಹಣೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ 35 ಕೋಟಿ ರು. ಇದ್ದು, ಇತ್ತೀಚೆಗೆ ಸರ್ಕಾರ 7.50 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಸರ್ಕಾರದ ಮಾರ್ಗಸೂಚಿಯಂತೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲಾಗುವುದು. ಹಾಗೆಯೇ ಬರ ನಿರ್ವಹಣೆ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಸರ್ಕಾರ 2022- 23ನೇ ಸಾಲಿನಲ್ಲಿ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ 10 ಕೋಟಿ ರು. ಅನುದಾನವನ್ನು ಒದಗಿಸಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಗೆ 10 ಕೋಟಿ ರು. ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕಿದೆ ಎಂದು ಹೇಳಿದರು. ಇದರಲ್ಲಿ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗೆ ಹಲವು ಕಾರ್ಯ ಕೈಗೊಳ್ಳಬೇಕಿದೆ ಎಂದರು. ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಸದ ಪ್ರತಾಪ್ ಸಿಂಹ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಸೂಚಿಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಸುಂದರ ಅವರು ಕೊಡಗು ಜಿಲ್ಲೆಯಲ್ಲಿ ಸುಮಾರು 9,700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 838 ಲಕ್ಷ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾಫಿ ಮಂಡಳಿ ಉಪ ನಿರ್ದೇಶಕ ಚಂದ್ರಶೇಖರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ ಅವರು ಬೆಳೆ ಹಾನಿ ಬಗ್ಗೆ ಹಲವು ಮಾಹಿತಿ ನೀಡಿದರು. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸದಸ್ಯರೊಬ್ಬರು ತೋಟಗಾರಿಕೆ ಇಲಾಖೆಯಿಂದ ನೀಡಲಾಗುವ ‘ಸಸಿ’ ವಿತರಣೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಹೆಚ್ಚಿನ ಮಾಹಿತಿ ನೀಡುವುದರ ಜೊತೆಗೆ ಗಿಡಗಳನ್ನು ವಿತರಿಸುವಂತಾಗಬೇಕು ಎಂದು ಹೇಳಿದರು. ಈ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ತೋಟಗಾರಿಕೆಯಿಂದ ನೀಡಲಾಗುವ ಸಸಿಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಬೇಕು. ಪಾರದರ್ಶಕವಾಗಿ ಸಸಿಗಳನ್ನು ವಿತರಿಸುವಂತೆ ನಿರ್ದೇಶನ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸರ್ಕಾರ ಈಗಾಗಲೇ 135 ಕೋಟಿ ರು. ಬಿಡುಗಡೆ ಮಾಡಿದೆ. ಬಾಕಿ ಇರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕ್ರಿಟಿಕಲ್ ಕೇರೆ ಸೆಂಟರ್ ನಿರ್ಮಾಣ ಮತ್ತಿತರ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ವೈದ್ಯಾಧಿಕಾರಿ ಅವರಿಗೆ ಸೂಚಿಸಿದರು.ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಕುಮಾರಸ್ವಾಮಿ, ಪಿ.ಎಂ. ವಿಜಯ, ಯಮುನಾ ಚಂಗಪ್ಪ, ಚಂದ್ರಕಲಾ ಬಿ., ಚೆಕ್ಕೇರ ಅಯ್ಯಪ್ಪ, ಭಾಸ್ಕರ ನಾಯ್ಕ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಳ್ಳಿಚಂಡ ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ಬಿಸಿಎಂ ಇಲಾಖಾ ಅಧಿಕಾರಿ ಕವಿತಾ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ, ಪಿಎಂಜಿಎಸ್‌ವೈ ಎಂಜಿನಿಯರ್ ಪ್ರಭು, ಆಹಾರ ಇಲಾಖೆ ಜಂಟಿ ನಿರ್ದೇಶಕರಾದ ಕುಮುದಾ ಶರತ್ ಇತರರು ಹಲವು ಮಾಹಿತಿ ನೀಡಿದರು.ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ
ಕೊಡಗು ಜಿಲ್ಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿ ಕ್ರಮವಹಿಸುವಂತೆ ಸಂಸದ ಪ್ರತಾಪ್ ಸಿಂಹ ನಿರ್ದೇಶನ ನೀಡಿದರು. ಎಸ್ಎಸ್‌ಎಲ್‌ಸಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ಉತ್ತಮ ಫಲಿತಾಂಶಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕೆಂದು ಸೂಚಿಸಿದರು. ಜಿಲ್ಲೆಯ ಹಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಣೆ ಜೊತೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಆನೆ-ಮಾನವ ಸಂಘರ್ಷಕ್ಕೆ ಕ್ರಮ ಕೈಗೊಳ್ಳಿ:ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗಿದ್ದು, ಕಾಫಿ ತೋಟಗಳಲ್ಲಿ ಕೆಲಸ ಮಾಡುವವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.ಈ ಸಂದರ್ಭ ಅರಣ್ಯಾಧಿಕಾರಿ ಮಾತನಾಡಿ ನಾಡಿಗೆ ಬರುತ್ತಿರುವ ಕಾಡಾನೆಗಳ ಚಲನವಲನವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಅಲ್ಲದೆ ರೈಲ್ವೇ ಹಳಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ವಿರಾಜಪೇಟೆ ವ್ಯಾಪ್ತಿಯ ಅಮ್ಮತ್ತಿ, ಸಿದ್ದಾಪುರ ಭಾಗದಲ್ಲಿ ಪುಂಡಾಟ ನಡೆಸುತ್ತಿರುವ ಮೂರು ಆನೆಗಳ ಸೆರೆಗೆ ಇಲಾಖೆಯಿಂದ ಅನುಮತಿ ದೊರೆತಿದೆ ಎಂದು ತಿಳಿಸಿದರು.
ಹಾಡಿಗಳಲ್ಲಿ ಪಾದ್ರಿಗಳ ಸಂಖ್ಯೆ ಹೆಚ್ಚುತ್ತಿದೆ!ಹಾಡಿಗಳಲ್ಲಿ ಪಾದ್ರಿಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಸಂಸದ ಪ್ರತಾಪ ಸಿಂಹ ಐಟಿಡಿಪಿ ಅಧಿಕಾರಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ 350 ಹಾಡಿಗಳಿದೆ. 11 ಆಶ್ರಮ ಶಾಲೆಗಳಿದೆ ಎಂದು ಐಟಿಡಿಪಿ ಅಧಿಕಾರಿ ಹೊನ್ನೇಗೌಡ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಪ್ರತಾಪ ಸಿಂಹ, ಹಾಡಿಯ ನಿವಾಸಿಗಳಿಗೆ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಾಡಿಗಳಲ್ಲಿ ಪಾದ್ರಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಮಾಹಿತಿ ದೊರಕಿದ್ದು, ಈ ಬಗ್ಗೆ ಸಂಬಂಧಿಸಿದವರು ಕ್ರಮ ವಹಿಸಬೇಕೆಂದು ಸೂಚಿಸಿದರು.