ರೈತಪರ ಯೋಜನೆ, ಕಾಯ್ದೆ ಜಾರಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : Apr 16, 2024 1:09 AM

ಸಾರಾಂಶ

ದೇಶದ ರೈತ ಉತ್ಪನ್ನಗಳ ಮೇಲಿನ ಜಿಎಸ್‌ಟಿ ತೆಗೆಯುವುದು, ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ, ಸಾಲಮನ್ನಾ ಸೇರಿದಂತೆ ರೈತಪರ ಹಲವು ಯೋಜನೆಗಳನ್ನು ರಾಷ್ಟ್ರೀಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ. ರೈತಪರ ಕಾಯ್ದೆ ಜಾರಿಗಾಗಿ ಮತದಾರರು ಕಾಂಗ್ರೆಸ್‌ಗೆ ಮತ ನೀಡಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಹಲವು ರೈತಪರ ಯೋಜನೆಗಳು ಹಾಗೂ ಕಾಯ್ದೆ ಜಾರಿಗಾಗಿ ಮತದಾರರು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ತಾಲೂಕಿನ ಕದಬಹಳ್ಳಿ, ಲಾಳನಕೆರೆ, ಬಿಂಡಿಗನವಿಲೆ, ಹೊನ್ನಾವರ, ದೊಡ್ಡಾಬಾಲ, ಮಾಯಿಗೋನಹಳ್ಳಿ ಸೇರಿದಂತೆ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

ದೇಶದ ರೈತ ಉತ್ಪನ್ನಗಳ ಮೇಲಿನ ಜಿಎಸ್‌ಟಿ ತೆಗೆಯುವುದು, ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ, ಸಾಲಮನ್ನಾ ಸೇರಿದಂತೆ ರೈತಪರ ಹಲವು ಯೋಜನೆಗಳನ್ನು ರಾಷ್ಟ್ರೀಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ. ರೈತಪರ ಕಾಯ್ದೆ ಜಾರಿಗಾಗಿ ಮತದಾರರು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಕೋರಿದರು.

ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ, ಶಾಶ್ವತವಾಗಿ ಕೊಬ್ಬರಿ ಖರೀದಿ, ಬೆಂಬಲ ಬೆಲೆ ಸೇರಿದಂತೆ ಹಲವು ಗ್ಯಾರಂಟಿ ಭರವಸೆಗಳನ್ನು ಕಾಂಗ್ರೆಸ್ ನೀಡಿದ್ದು ಇದನ್ನು ಅನುಷ್ಟಾನಕ್ಕೆ ತರಲು ಮತದಾರರು ಕಾಂಗ್ರೆಸ್ ಬೆಂಬಲಿಸಬೇಕು ಎಂದರು.

ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿವೆಯೇ ಹೊರತು ಪ್ರಧಾನಿ ಮೋದಿ ಅವರ ಗ್ಯಾರಂಟಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ರಾಜ್ಯಕ್ಕೆ ಐದು ಗ್ಯಾರಂಟಿ ನೀಡಿದ್ದೇವೆ. ಈಗ ರಾಷ್ಟ್ರ ವ್ಯಾಪಿ ಗ್ಯಾರಂಟಿ ಘೋಷಣೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಪ್ರಯೋಜನವಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಸ್ಥಳೀಯರು. ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ ಸರಳ ವ್ಯಕ್ತಿತ್ವ ಉಳ್ಳವರು. ಅವರಿಗೆ ಹೆಚ್ಚು ಮತಕೊಟ್ಟು ಗೆಲ್ಲಿಸುವ ಜೊತೆಗೆ ರಾಷ್ಟ್ರದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರೆ ಮಾತ್ರ ದೇಶದ ಎಲ್ಲಾ ವರ್ಗದ ಜನರು ಶಾಂತಿ ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಾನು ಇದೇ ತಾಲೂಕಿನ ರೈತನ ಮಗ. ರೈತರ ಕಷ್ಟ, ಜಿಲ್ಲೆಯ ನಾಡಿಮಿಡಿತ ನನಗೆ ಬಹಳ ಚೆನ್ನಾಗಿ ಗೊತ್ತಿದೆ. ದೇಶ್ಯವ್ಯಾಪಿ ಗ್ಯಾರಂಟಿ ಯೋಜನಗಳ ಜಾರಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ನನ್ನನ್ನು ಆಶೀರ್ವದಿಸಿ ಎಂದು ಮತಯಾಚಿಸಿದರು.

ಇದೇ ವೇಳೆ ಕದಬಹಳ್ಳಿ, ಲಾಳನಕೆರೆ, ಮಾಯೊಗೋನಹಳ್ಳಿ ಸೇರಿದಂತೆ ವಿವಿಧ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಪಕ್ಷದ ಹಲವು ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಬಳಿಕ ಪಾಲಗ್ರಹಾರ, ಹರದನಹಳ್ಳಿ, ದೇವರಮಲ್ಲನಾಯ್ಕನಹಳ್ಳಿ, ದೇವಲಾಪುರ, ಭೀಮನಹಳ್ಳಿ, ಕರಡಹಳ್ಳಿ, ಮಣ್ಣಹಳ್ಳಿ, ಬ್ರಹ್ಮದೇವರಹಳ್ಳಿ, ಹೊಣಕೆರೆ, ಚಿಣ್ಯ, ಕಾಂತಾಪುರ ಹಾಗೂ ಬೋಗಾದಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಸಚಿವ ಚಲುವರಾಯಸ್ವಾಮಿ ಪುತ್ರ ಸಚ್ಚಿನ್, ಸ್ಟಾರ್ ಚಂದ್ರು ಸಹೋದರ ಕನ್ನಾಘಟ್ಟ ವೆಂಕಟೇಶ್, ಮುಖಂಡರಾದ ಎನ್.ಲಕ್ಷ್ಮೀಕಾಂತ್, ಸುನಿಲ್‌ಲಕ್ಷ್ಮೀಕಾಂತ್, ಎಚ್.ಟಿ.ಕೃಷ್ಣೇಗೌಡ, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ಬಿ.ರಾಜೇಗೌಡ ಸೇರಿದಂತೆ ಹಲವರು ಇದ್ದರು.

Share this article