ಭೀಮಾ ನದಿಗೆ ನೀರು ಹರಿಸುವ ಹೋರಾಟಕ್ಕೆ ಬೆಂಬಲ

KannadaprabhaNewsNetwork |  
Published : Mar 18, 2024, 01:48 AM IST
ಅಫಜಲ್ಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿತು.  | Kannada Prabha

ಸಾರಾಂಶ

ಅಫಜಲ್ಪುರ ತಾಲೂಕಿನ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ಅಫಜಲ್ಪುರ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ಅಫಜಲ್ಪುರ ತಾಲೂಕಿನ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ಅಫಜಲ್ಪುರ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಸತ್ಯಾಗ್ರಹ ಕುರಿತು ಶಿವಕುಮಾರ ನಾಟಿಕಾರ ಮಾತನಾಡಿ ಇದೇ ಮೊದಲ ಬಾರಿಗೆ ಬೇಸಿಗೆ ಆರಂಭದಲ್ಲೇ ಭೀಮಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿದೆ. ನದಿ ನೀರು ಹಂಚಿಕೆ ಕಾನೂನಿನ ಅನ್ವಯ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನಮ್ಮ ಪಾಲಿನ ನೀರು ಬಿಟ್ಟಿಲ್ಲ ಹೀಗಾಗಿ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಿ ನಮ್ಮ ಪಾಲಿನ ನೀರನ್ನು ಪಡೆದುಕೊಳ್ಳಬೇಕು. ಸಧ್ಯ ತುರ್ತಾಗಿ ಮಾನವೀಯತೆ ದೃಷ್ಟಿಯಿಂದ ಆಲಮಟ್ಟಿ, ನಾರಾಯಣಪೂರ ಜಲಾಶಯಗಳಿಂದ ಕಾಲುವೆ ಮೂಲಕ ಭೀಮಾ ನದಿಗೆ ನೀರು ಹರಿಸಿದರೆ ಬೇಸಿಗೆ ಭೀಕರತೆಯಲ್ಲಿ ಕುಡಿಯಲು ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿ ಶೀಘ್ರ ಕ್ರಮಕ್ಕೆ ಮುಂದಾಗಬೇಕು. ಉಪವಾಸ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ, ನೀತಿ ಸಂಹಿತೆ ಹೆಸರಲ್ಲಿ ಜೈಲಿಗೆ ಅಟ್ಟಿದರೂ, ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆಗೆ ದಾಖಲಿಸಿದರೂ ಕೂಡ ನದಿಗೆ ನೀರು ಹರಿಯುವ ತನಕ ನಾನು ಉಪವಾಸ ಮುಂದುವರೆಸುತ್ತೇನೆ ಎಂದು ಎಚ್ಚರಿಸಿದರು.

ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಿವಕುಮಾರ ನಾಟಿಕಾರ ಅವರ ಆರೋಗ್ಯ ತಪಾಸಣೆ ನಡೆಸಿ ಹೆಚ್ಚು ಉಪವಾಸ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಸಲಹೆ ನೀಡಿದ ಘಟನೆ ನಡೆಯಿತು.

ಮಾಶಾಳದ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ ಜನರ ಕಷ್ಟಕ್ಕೆ ಸ್ಪಂದಿಸದಿದ್ದರೆ ಯಾವ ಪಕ್ಷವಾದರೇನು? ಜನ ತಿರಸ್ಕಾರ ಮಾಡಬೇಕು. ಇಂತಹ ಭೀಕರ ಸನ್ನಿವೇಶದಲ್ಲಿ ಭೀಮಾ ನದಿ ದಂಡೆಯ ಜನ ತತ್ತರಿಸಿ ಹೋಗಿದ್ದಾರೆ. ಈ ಸಮಯದಲ್ಲೂ ಜಾಗೃತವಾಗಲಿಲ್ಲವೆಂದರೆ ಇವರೆಲ್ಲರೂ ಯಾವ ಸೀಮೆಯ ಜನಪ್ರತಿನಿಧಿಗಳು ಎಂದು ಪ್ರಶ್ನಿಸಿದ ಅವರು ನಾಟಿಕಾರ ಅವರು ಯಾವುದೇ ಪಕ್ಷ, ಸಮುದಾಯದ ಲಾಭಕ್ಕಾಗಿ ಉಪವಾಸ ಸತ್ಯಾಗ್ರಹ ಕುಳಿತಿಲ್ಲ, ಬದಲಾಗಿ ಎಲ್ಲ ಜೀವಗಳ ಒಳಿತಿಗಾಗಿ ಕುಳಿತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮಠಾಧೀಶರಾಗಿ ನಾವು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸತ್ಯಾಗ್ರಹಕ್ಕೆ ಅಫಜಲ್ಪುರ ಪಟ್ಟಣದ ವರ್ತಕರು, ವ್ಯಾಪಾರಿಗಳು, ಬಡದಾಳ ನಾಗರಿಕ ಹೋರಾಟ ಸಮಿತಿಯವರು, ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಗ್ರಾಮಸ್ಥರು, ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದವು. ಈ ಸಂದರ್ಭದಲ್ಲಿ ಪ್ರಮುಖರಾದ ಮಕ್ಬೂಲ್ ಪಟೇಲ್, ಚಿದಾನಂದ ಮಠ, ಸದಾಶಿವ ಮೇತ್ರೆ, ಬಸಣ್ಣ ಗುಣಾರಿ, ಬಸವರಾಜ ವಾಳಿ, ಮರಯ್ಯ ಮುತ್ಯ, ವಿಜಯಕುಮಾರ ವರ್ಧಮಾನ, ಚಂದ್ರಶೇಖರ ದೇಸಾಯಿ, ಬೀರಣ್ಣ ಪೂಜಾರಿ, ಮಾಂತು ಬಳೂಂಡಗಿ, ಉಮೇಶ ಕಲಶೆಟ್ಟಿ, ಭೀಮಾಶಂಕರ ಖೈರಾಟ, ವೀರಣ್ಣ ಶಂಕರಶೆಟ್ಟಿ, ರಾಜು ಸಾಣಾಕ್, ಶರಣಗೌಡ ಪೊಲೀಸಪಾಟೀಲ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ್ ಸಿಂಗೆ, ಸಿದ್ದನಗೌಡ ಮಾಲಿ ಪಾಟೀಲ, ಅಮೋಲ್ ಮೊರೆ, ಶ್ರೀಕಾಂತ್ ದಿವಾನಜಿ, ಡಾ. ಶರಣಗೌಡ ಪಾಟೀಲ, ಜಮೀಲ್ ಗೌಂಡಿ, ರಾಜಕುಮಾರ್ ಉಕಲಿ, ರಾಜೇಂದ್ರ ಸರ್ದಾರ್, ಗುರುದೇವ್ ಪೂಜಾರಿ, ಅಮರಸಿಂಗ ರಜಪೂತ, ಮಾಂತೇಶ್ ಹಡಪದ್, ನಿಂಗು ಹೂಗಾರ, ಶರಣು ಬಳೂರಗಿ, ಪ್ರಕಾಶ್ ಖೈರಾಟ ಸೇರಿದಂತೆ ಅನೇಕರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ