ಸುರ್ಜೆವಾಲ ರಾಜ್ಯಕ್ಕೆ ಬರುವುದು ಕಪ್ಪ ವಸೂಲಿಗೆ: ಸಿ.ಟಿ. ರವಿ

KannadaprabhaNewsNetwork | Published : Jul 1, 2025 12:47 AM

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಹಿಂದೆ ಮೊಗಲರ ಕಾಲದಲ್ಲಿ ರಾಜನಿಗೆ ಕಪ್ಪ ಒಪ್ಪಿಸುನ ಪದ್ಧತಿ ಇತ್ತು. ಅದು ಇಂದು ಕಾಂಗ್ರೆಸ್‌ನಲ್ಲಿ ಜಾರಿಯಲ್ಲಿದೆ. ಅದನ್ನು ವಸೂಲಿ ಮಾಡುವುದಕ್ಕೆ ಸುರ್ಜೆವಾಲ ಬೆಂಗಳೂರಿಗೆ ಬಂದಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಜನರ ಕಷ್ಟ ಕೇಳುವ ಹವ್ಯಾಸ ಇಲ್ಲ ಎಂದರು.

ಕನ್ನಡಪ್ರಭ ವಾರ್ತೆ ಉಡುಪಿ

ಎಐಸಿಸಿ ಪ್ರತಿನಿಧಿ ರಣದೀಪ್ ಸುರ್ಜೆವಾಲ ರಾಜ್ಯಕ್ಕೆ ಬಂದಿರುವುದು ಜನರ ಕಷ್ಟ ಕೇಳಲಿಕ್ಕೆ ಅಲ್ಲ, ಅವರು ಬಂದಿರುವುದು ಕಪ್ಪ ವಸೂಲಿ ಮಾಡುವುದಕ್ಕೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ.ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಮೊಗಲರ ಕಾಲದಲ್ಲಿ ರಾಜನಿಗೆ ಕಪ್ಪ ಒಪ್ಪಿಸುನ ಪದ್ಧತಿ ಇತ್ತು. ಅದು ಇಂದು ಕಾಂಗ್ರೆಸ್‌ನಲ್ಲಿ ಜಾರಿಯಲ್ಲಿದೆ. ಅದನ್ನು ವಸೂಲಿ ಮಾಡುವುದಕ್ಕೆ ಸುರ್ಜೆವಾಲ ಬೆಂಗಳೂರಿಗೆ ಬಂದಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಜನರ ಕಷ್ಟ ಕೇಳುವ ಹವ್ಯಾಸ ಇಲ್ಲ ಎಂದವರು ಹೇಳಿದರು.ಹಿಂದೆ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ದೆಹಲಿಗೆ ಕಪ್ಪ ಸಲ್ಲಿಸಲಿಲ್ಲ, ಅದಕ್ಕೆ ಅವರನ್ನು ಕಾಂಗ್ರೆಸ್ ವರಿಷ್ಠರು ಪದಚ್ಯುತಗೊಳಿಸಿದ್ದರು ಎಂದು ಸಿ.ಟಿ. ರವಿ ಉದಾಹರಿಸಿದರು.ಡಿಕೆಶಿ ಮತ್ತು ಸಿದ್ಧರಾಮಯ್ಯ ಕೈಗಳನ್ನು ಎತ್ತಿಹಿಡಿದು ಪೋಸ್ ಕೊಟ್ಟಿದ್ದಾರೆ, ಅವರು ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಭ್ರಷ್ಟಾಚಾರ ತಡೆಯುವ ವಿಷಯದಲ್ಲಿ ಜನರಿಗೆ ಕೈ ಎತ್ತಿ ಆಗಿದೆ, ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರಕ್ಕೆ ಶರಣಾಗಿದೆ ಎಂದು ವ್ಯಂಗ್ಯವಾಡಿದರು.ನೋ ಕಮೆಂಟ್, ನೋ ಕಮೆಂಟ್:

ಬಸವರಾಜ ಯತ್ನಾಳ್ ಮತ್ತೆ ಬಿಜೆಪಿ ನಾಯಕರ ವಿರುದ್ಧ ಮಾತನಾಡಿರುವ ಬಗ್ಗೆ ಸಿ.ಟಿ. ರವಿ ನೋ ಕಮೆಂಟ್, ಅವರೀಗ ಉಚ್ಛಾಟಿತ ನಾಯಕ, ಆದ್ದರಂದ ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.

ಈಶ್ವರಪ್ಪ ಅವರು ಮತ್ತೆ ಬಿಜೆಪಿ ಸೇರುವುದಕ್ಕೆ ಆಸಕ್ತಿ ತೋರಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೂ ಸಿ.ಟಿ. ರವಿ ನೋ ಕಮೆಂಟ್ಸ್ ಎಂದರು.ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಲ್ಲ:

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ ಮತ್ತೆ ಆಕಾಂಕ್ಷಿಯಾಗಿರುವ ಬಗ್ಗೆ, ಅದು ಕೇಳಿ ಪಡೆಯುವ ಹುದ್ದೆಯಲ್ಲ, ಅದು ತಾನಾಗಿಯೇ ಒಲಿದು ಬರಬೇಕು ಎಂದರು. ಆದರೇ ತಾನು ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ, ಸದ್ಯ ರಾಜ್ಯಾಧ್ಯಕ್ಷರ ಕುರ್ಚಿ ಖಾಲಿ ಇಲ್ಲ, ಆ ಕುರ್ಚಿಯಲ್ಲೀಗ ಅಧ್ಯಕ್ಷರಿದ್ದಾರೆ ಎಂದರು.

-------------------ಹೃದಯಾಘಾತ ಹೆಚ್ಚಳ: ಅಧ್ಯಯನ ತಂಡ ರಚಿಸಿ

ಕೆಲವು ಜಿಲ್ಲೆಗಳಲ್ಲಿ ಹೃದಯಾಘಾತದಿಂದ ಯುವಜನತೆ ಸಾವನ್ನಪ್ಪುತ್ತಿರುವ ಬಗ್ಗೆ ಸರ್ಕಾರ ರಾಜಕೀಯವನ್ನು ಪಕ್ಕಕ್ಕಿಟ್ಟು, ತಜ್ಞರ ಸಮಿತಿಯೊಂದನ್ನು ರಚಿಸಿ ವೈಜ್ಞಾನಿಕ ಅಧ್ಯಯನ ವರದಿ - ಶಿಫಾರಸುಗಳನ್ನು ಪಡೆಯಬೇಕು ಎಂದು ಸಿ.ಟಿ. ರವಿ ಸರ್ಕಾರವನ್ನು ಒತ್ತಾಯಿಸಿದರು.ಕೆಲವು ಜಿಲ್ಲಾಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞ ವೈದ್ಯರೇ ಇಲ್ಲ, ಹದಯಾಘಾತ ಹೆಚ್ಚುವುದಕ್ಕೆ ಏನು ಕಾರಣ, ಬದಲಾದ ಜೀವನ ಶೈಲಿಯೇ, ಆಹಾರ ಪದ್ಧತಿಯೇ, ಒತ್ತಡ ಕಾರಣವೇ ಎಂಬ ಬಗ್ಗೆ ಅಧ್ಯಯನವಾಗಬೇಕು ಎಂದವರು ಸಲಹೆ ನೀಡಿದರು.