ತುಂಡಾದ ಕೈಯನ್ನು ಯಶಸ್ವಿಯಾಗಿ ಮರುಜೋಡಿಸಿದ ‘ಸರ್ಜಿ’ಆಸ್ಪತ್ರೆ ವೈದ್ಯರು!

KannadaprabhaNewsNetwork | Published : Aug 25, 2024 1:59 AM

ಸಾರಾಂಶ

ಸಾಮಿಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಕಾರ್ಮಿಕರೊಬ್ಬರ ಕೈ ಆಕಸ್ಮಿಕವಾಗಿ ಮರ ಕೊಯ್ಯುವ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದ ಎರಡೂ ಕೈಗಳನ್ನು ಸರ್ಜಿ ಸೂಪರ್ ಸ್ಪೆಷಾಲಿಟಿ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಜೋಡಿಸಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎರಡು ತುಂಡಾಗಿದ್ದ ಕೈಗೆ ಶಸ್ತ್ರ ಚಿಕಿತ್ಸೆ ನಡೆಸಿ, ಮರು ಜೋಡಿಸುವ ಮೂಲಕ ಅಪರೂಪದ ಸಾಧನೆ ಮಾಡುವಲ್ಲಿ ಇಲ್ಲಿನ ಸರ್ಜಿ ಸೂಪರ್ ಸ್ಪೆಷಾಲಿಟಿ ತಜ್ಞ ವೈದ್ಯರ ತಂಡ ಯಶಸ್ಸು ಸಾಧಿಸಿ ರೋಗಿಗೆ ಮರು ಜೀವನವನ್ನು ಕಲ್ಪಿಸಿದೆ.

ಜಿಲ್ಲೆಯ ಸಾಮಿಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಕಾರ್ಮಿಕರೊಬ್ಬರ ಕೈ ಆಕಸ್ಮಿಕವಾಗಿ ಮರ ಕೊಯ್ಯುವ ಯಂತ್ರಕ್ಕೆ ಸಿಲುಕಿ ಎರಡು ತುಂಡಾಗಿತ್ತು. ಸಂಪೂರ್ಣ ಕತ್ತರಿಸಿದ ಮುಂಗೈಯನ್ನು ಐಸ್ ಬಾಕ್ಸ್ ನಲ್ಲಿ ಇಟ್ಟುಕೊಂಡು ರೋಗಿಯು ಆಸ್ಪತ್ರೆಯ ಅಪಘಾತ ವಿಭಾಗಕ್ಕೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಸತತ ವಾಗಿ 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದು, ಮುಂಗೈನ ಮಾಂಸಖಂಡ , ಮೂಳೆ ಹಾಗೂ ನರಗಳನ್ನು ಯಶಸ್ವಿಯಾಗಿ ಮರು ಜೋಡಿಸಿ ರೋಗಿಗೆ ಹೊಸ ಬದುಕು ಕೊಟ್ಟಿದ್ದಾರೆ. ರೋಗಿಗೆ ಉತ್ತಮ ಆರೈಕೆ ಮಾಡಿ ಒಂದು ವಾರದ ಬಳಿಕ ಡಿಸ್ಚಾರ್ಜ್ ಮಾಡಲಾಗಿತ್ತು, ಆನಂತರ ಕಾಲ ಕಾಲಕ್ಕೆ ತಪಾಸಣೆ ನಡೆಸಿ, ಇದೀಗ ಕೈ ಚಲನವಲನ ಚೆನ್ನಾಗಿದ್ದು, ರೋಗಿಯು ಚೇತರಿಸಿಕೊಂಡಿದ್ದಾರೆ. ಸರ್ಜಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ.ಚೇತನ್ ಹಾಗೂ ಮೂಳೆ ರೋಗ ತಜ್ಞರಾದ ಡಾ.ಮಂಜುನಾಥ್ , ವೈದ್ಯಕೀಯ ಅಧೀಕ್ಷಕ ಹಾಗೂ ಅರಿವಳಿಕೆ ತಜ್ಞರಾದ ಡಾ.ವಾದಿರಾಜ ಕುಲಕರ್ಣಿ ಮತ್ತು ಡಾ.ಮೂರ್ಕಣಪ್ಪ, ಡಾ.ಸಂತೋಷ್, ಡಾ.ಅರ್ಜುನ್ ಅವರ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

ಮರು ಜೋಡಣೆ, ಹೇಗೆ ಸಾಧ್ಯ?:

ಅವಘಡ ಸಂಭವಿಸಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ತುಂಡಾಗಿದ್ದರೆ ಭಯಪಡದೇ ಆತ್ಮಸ್ಥೈರ್ಯದೊಂದಿಗೆ ತುಂಡಾದ ಭಾಗವನ್ನು ಪ್ಲಾಸ್ಟಿಕ್ ಕವರ್ ನೊಂದಿಗೆ ಐಸ್ ಬಾಕ್ಸ್ ನಲ್ಲಿಟ್ಟು 6 ಗಂಟೆಯೊಳಗೆ ಆಸ್ಪತ್ರೆಗೆ ತಂದರೆ ಶಸ್ತ್ರ ಚಿಕಿತ್ಸೆ ಮಾಡಿ ಮರು ಜೋಡಿಸಲು ಸಾಧ್ಯವಿದೆ, ಆದರೆ ಇದು ಬಹಳಷ್ಟು ಜನರಿಗೆ ಸಾಧ್ಯವಾಗುವುದಿಲ್ಲ. ಘಟನೆ ನಡೆದಾಗ ಭಯ ಭೀತರಾಗಿ ಕಟ್ ಆದ ಭಾಗವನ್ನು ತರದೇ ಮರೆತು ಆಸ್ಪತ್ರೆಗೆ ಬರುವ ಸಾಧ್ಯತೆಗಳೇ ಹೆಚ್ಚು. ಇಲ್ಲವೆ ಬಹಳ ತಡವಾಗಿ ಬಂದರೆ ತುಂಡಾದ ಭಾಗದ ಮಾಂಸ ಖಂಡಗಳು ಕೊಳೆತಂತಾಗುತ್ತವೆ, ಜೀವಕೋಶಗಳು ಸಾಯುತ್ತವೆ, ಹಾಗಾಗಿ ಚಿಕಿತ್ಸೆ ಮಾಡಿದರೂ ಯಶಸ್ವಿ ಆಗುವುದಿಲ್ಲ. ಆದರೆ ಈ ಘಟನೆಯಲ್ಲಿ ರೋಗಿಯು ಎಚ್ಚೆತ್ತುಕೊಂಡು ಸಕಾಲಕ್ಕೆ ತುಂಡಾದ ಕೈಯೊಂದಿಗೆ ಬಂದಿದ್ದರಿಂದ 7 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಮರು ಜೋಡಿಸಲು ಸಾಧ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Share this article