ಬಸವರಾಜ ಎಂ. ಕಟ್ಟಿಮನಿ
ಕನ್ನಡಪ್ರಭ ವಾರ್ತೆ ಹುಣಸಗಿಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ತೆರವಾಗಿರುವ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೇ 7ರಂದು ನಿಗದಿಯಾಗಿದ್ದು, ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಚುನಾವಣಾ ಕಣ ರಂಗೇರತೊಡಗಿದೆ.
ಸುರಪುರ ವಿಧಾನಸಭಾ ಕ್ಷೇತ್ರ (ಎಸ್.ಟಿ.ಮೀಸಲು) ರಾಜ್ಯದಲ್ಲಿ ಸದಾ ಗಮನ ಸೆಳೆಯುತ್ತಿರುವ, ಅತಿ ಸೂಕ್ಷ್ಮ ಕ್ಷೇತ್ರವಾಗಿದೆ. 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ದಿ.ಶಾಸಕ ರಾಜಾ ವೆಂಕಟಪ್ಪನಾಯಕ ಅವರು 25 ಸಾವಿರ ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು.ಫೆ.25ರಂದು ರಾಜಾ ವೆಂಕಟಪ್ಪ ನಾಯಕ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರಿಂದ ಲೋಕಸಭೆ ಚುನಾವಣೆ ಜೊತೆಯಲ್ಲಿಯೇ ಉಪ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷದಿಂದ ಅವರ ಹಿರಿಯ ಸುಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಬಹುತೇಕ ಟಿಕೆಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಮಾಜಿ ಸಚಿವ ರಾಜೂಗೌಡ ಬಿಜೆಪಿ ಹುರಿಯಾಳಾಗುವುದು ಖಚಿತವಾದಂತಿದೆ.
ಚುನಾವಣೆ ಘೋಷಣೆ ಮಾಡುತ್ತಿದ್ದಂತೆಯೇ ಈ ಇಬ್ಬರು ನಾಯಕರು ಮತಕ್ಷೇತ್ರದದಲ್ಲಿ ಮತದಾರರ ಮನವೋಲೈಸಲು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ ಟೆಕಿಟ್ ಆಕಾಂಕ್ಷಿ ರಾಜಾ ವೇಣುಗೋಪಾಲ ನಾಯಕ ಅವರು ತಮ್ಮ ತಂದೆ ರಾಜಾ ವೆಂಕಟಪ್ಪನಾಯಕ ಅವರಂತೆ ನಾನೂ ಕೂಡ ಕೊಟ್ಟ ಮಾತಿಗೆ ತಪ್ಪದೇ ಕಾರ್ಯಕರ್ತರ ಪರವಾಗಿ ಕೆಲಸ ಮಾಡುತ್ತೇನೆ. ನನಗೆ ಆಶೀರ್ವಾದ ಮಾಡಿ ಎಂದು ಮತದಾರರ ಮನವೊಲಿಸುವ ಯತ್ನ ಮಾಡುತ್ತಿದ್ದಾರೆ.ಇತ್ತಕಡೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ರಾಜೂಗೌಡ ಅವರು ಕಳೆದ 2018 ರಿಂದ 2023 ರ ಅವಧಿಯಲ್ಲಿ ಬಿಜೆಪಿ ಸರಕಾರದಿಂದ ಸುರಪುರ ಮತಕ್ಷೇತ್ರಕ್ಕೆ ₹3200 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅದನ್ನು ಕ್ಷೇತ್ರದ ಜನರು ಮರೆತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯದ ಜನರನ್ನು ಭರವಸೆಗೆ ತೆಗೆದುಕೊಂಡು ಸುರಪುರ ಮತಕ್ಷೇತ್ರದ ಭಿವೃದ್ಧಿ ಕೆಲಸದ ಜತೆಗೆ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಮತದಾರರಿಗೆ ಭರವಸೆ ನೀಡುತ್ತಿದ್ದಾರೆ.
ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆ ಹೆಚ್ಚು:ಕಳೆದ 2 ದಶಕಗಳಿಂದಲೂ ರಾಜಾ ವೆಂಕಟಪ್ಪ ನಾಯಕ ಅವರಿಗೆ ಶಾಸಕ ರಾಜೂಗೌಡ ಅವರು ಪ್ರಮುಖ ಎದುರಾಳಿ. ಇಬ್ಬರೂ ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ದರೂ ಇವರಿಬ್ಬರ ನಡುವೆಯೇ ಪೈಪೋಟಿ. ಸದ್ಯ ಬಿಜೆಪಿಯಿಂದ ರಾಜೂಗೌಡ, ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಿಂದ ರಾಜಾ ವೇಣುಗೋಪಾಲ ನಾಯಕ ಅವರು ಎದುರಾಳಿಗಳಾಗುವ ಸಾಧ್ಯತೆ ಇದೆ. ಮತದಾರರು ಯಾರ ಪರವಾಗಿ ನಿಲ್ಲುತ್ತಾರೆ ಎಂದು ಕಾಯ್ದು ನೋಡಬೇಕಾಗಿದೆ.