ಕನ್ನಡಪ್ರಭ ವಾರ್ತೆ ಮೈಸೂರುನೈಋತ್ಯ ರೈಲ್ವೆಯ ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ಹಲವು ಕಾಮಗಾರಿ ಕೈಗೊಳ್ಳುತ್ತಿದ್ದು, ಬೆಂಗಳೂರು- ಮಳವಳ್ಳಿ, ಸಂತೇಮರಹಳ್ಳಿ- ಚಾಮರಾಜನಗರ, ಮೈಸೂರು- ಕುಶಾಲನಗರ ರೈಲು ಮಾರ್ಗ, ಗೂಡ್ಸ್ ವಾಹನಗಳ ದಟ್ಟಣೆ ತಪ್ಪಿಸಲು ಗೂಡ್ಸ್ ರೈಲು ಸಂಚಾರಕ್ಕೆ ಸರ್ಕ್ಯೂಟ್ ಮಾರ್ಗ ಸಿದ್ಧಪಡಿಸಲಾಗುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಶಯವು ದೇಶದ ಅಭ್ಯುದಯ ಆಗುವುದು. ಬೆಂಗಳೂರಿಗೆ ರೈಲ್ವೆ ಇಲಾಖೆಯಿಂದ ಸಿಗುತ್ತಿರುವ ಸವಲತ್ತಿನಂತೆ ಮೈಸೂರಿನಲ್ಲಿಯೂ ವಿವಿಧ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರ ಬರುವುದಕ್ಕೆ ಮುನ್ನ ರಾಜ್ಯಕ್ಕೆ 885 ಕೋಟಿ ರು. ನೀಡಲಾಗುತ್ತಿತ್ತು. ಆದರೆ ನಮ್ಮ ಸರ್ಕಾರದ ಬಂದ ಬಳಿಕ 7,560 ಕೋಟಿ ನೀಡಲಾಗುತ್ತಿದೆ. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಶತಮಾನವಾಗುವ ಹಿನ್ನೆಲೆಯಲ್ಲಿ ವಿಕಸಿತ ಭಾರತದ ಆಶಯದಂತೆ ರೈಲ್ವೆ ಇಲಾಖೆಯ ಕಾರ್ಯದ ಬಗ್ಗೆ ಹೊರ ರಾಷ್ಟ್ರಗಳಲ್ಲೂ ಮಾತನಾಡುವಂತಾಗಬೇಕು ಎಂಬ ಉದ್ದೇಶ ಮೋದಿ ಅವರಿಗಿದೆ ಎಂದರು.ಮೈಸೂರು- ಕೇರಳ, ಕೊಯಮತ್ತೂರು ರೈಲು ಮಾರ್ಗ ಯೋಜನೆ ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಬೆಂಗಳೂರು ಸಮೀಪದ ಹೆಜ್ಜಾಲದಿಂದ ಆರಂಭವಾಗುವ ರೈಲು ಮಾರ್ಗವು ಮಳವಳ್ಳಿ, ಸಂತೇಮರಹಳ್ಳಿ, ಚಾಮರಾಜನಗರವನ್ನು ಸೇರಲಿದ್ದು, ಇದಕ್ಕೆ 1380 ಕೋಟಿ ರು. ಅಂದಾಜು ವೆಚ್ಚ ಆಗಲಿದ್ದು, ಅದನ್ನು ರೈಲ್ವೆ ಇಲಾಖೆಯಿಂದಲೇ ಕೈಗೆತ್ತಿಕೊಳ್ಳಲಾಗುವುದು. ಈ ಮಾರ್ಗವು ಸುಮಾರು 142 ಕಿ.ಮೀ. ದೂರವಿದೆ. ಈ ಯೋಜನೆಯು ಮಲ್ಲಿಕಾರ್ಜುನ ಖರ್ಗೆ ಅವರು ಸಚಿವರಾಗಿದ್ದಾಗ, ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದರು. ಆಗ ಆರಂಭಿಸಲು ಯೋಚಿಸಿದ್ದರು. ಆದರೆ ಅದು ಕೈಗೂಡಲಿಲ್ಲ. ಈಗ ನಾವು ಅದನ್ನು ಕಾರ್ಯಗತಗೊಳಿಸುತ್ತಿದ್ದೇವೆ ಎಂದರು.ಮೈಸೂರು ವಿಭಾಗದ ಸುಮಾರು 15 ನಿಲ್ದಾಣಗಳನ್ನು ಅಮೃತ್ ಯೋಜನೆಯಡಿ 330 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತೇವೆ. ಇದು 2025 ರೊಳಗೆ ಪೂರ್ಣಗೊಳ್ಳಲಿದೆ. ಒಟ್ಟಾರೆ ದೇಶದಲ್ಲಿ 61 ನಿಲ್ದಾಣಗಳನ್ನು 2 ಸಾವಿರ ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.ಪ್ರತಿ ವರ್ಷ ಕರ್ನಾಟಕದಲ್ಲಿ 174 ಕಿ.ಮೀ. ಹೊಸ ರೈಲು ಮಾರ್ಗ ಹೆಚ್ಚಾಗುತ್ತಿದೆ. ಹಾಗೆ ನೋಡಿದರೆ ಜರ್ಮನಿಯಲ್ಲಿ ಒಟ್ಟಾರೆ ರೈಲು ಮಾರ್ಗವು ಕೇವಲ 5 ಸಾವಿರ ಕಿ.ಮೀ. ಇದ್ದರೆ ಭಾರತದಲ್ಲಿ 90 ಸಾವಿರ ಕಿ.ಮೀ. ಇದೆ. ಮೈಸೂರು ಮಹಾರಾಜರು 1880ರಲ್ಲಿ ಮೈಸೂರು ರೈಲ್ವೆ ಯೋಜನೆ ಆರಂಭಿಸಿದ್ದರ ಫಲವಾಗಿ ನಾವು ಈಗ ಇಷ್ಟು ಅಭಿವೃದ್ಧಿ ಹೊಂದಿದ್ದೇವೆ ಎಂದರು. ಅಶೋಕಪುರಂ ರೈಲ್ವೆ ನಿಲ್ದಾಣಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣ ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದಿದೆ. ಈ ಹಿಂದೆ ಅಲ್ಲಿ 50 ರೈಲು ನಿಲುಗಡೆ ಸಾಮರ್ಥ್ಯವಿತ್ತು. ಅದನ್ನು ಈಗ 80 ರೈಲು ನಿಲ್ದಾಣಕ್ಕೆ ವಿಸ್ತರಿಸಲಾಗಿದೆ. ಈ ಶ್ರಮದ ಹಿಂದೆ ಮಾಜಿ ಸಂಸದ ಪ್ರತಾಪ ಸಿಂಹ ಅವರ ಅಪಾರ ಪ್ರಯತ್ನ ಮತ್ತು ದೂರದೃಷ್ಟಿಯನ್ನು ನಾವು ಶ್ಲಾಘಿಸಬೇಕು ಎಂದರು.ಈ ನಿಲ್ದಾಣವನ್ನು ನ. 15ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸುವರು. ಅಂತೆಯೇ ನಾಗನಹಳ್ಳಿಯಲ್ಲಿ ಮೆಮೂ ರೈಲು ಕೋಚ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. 440 ಕೋಟಿ ರು. ವೆಚ್ಚದಲ್ಲಿ ದೇಶದ ಪ್ರಮುಖ ನಗರಗಳು, ರೈಲ್ವೆ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುವಂತೆ ಆರಂಭಿಸಲಾಗುವುದು. ಇದರ ಮೂಲಕ ರಸ್ತೆಗಳಲ್ಲಿ ಸಂಚರಿಸುವ ಗೂಡ್ಸ್ ವಾಹನಗಳ ಒತ್ತಡ ನಿವಾರಿಸಿದಂತೆ ಆಗುತ್ತದೆ ಎಂದರು.ತುಮಕೂರು, ಮಂಡ್ಯ ಮಾರ್ಗವಾಗಿ ಚಾಮರಾಜನಗರಕ್ಕೆ ಮತ್ತೊಂದು ರೈಲು ಯೋಜನೆ ಆರಂಭಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಸೆ. 27ರಂದು ಚಾಲನೆ ನೀಡಲಾಗುವುದು ಎಂದು ಅವರು ವಿವರಿಸಿದರು. ವಂದೇ ಭಾರತ್ ರೈಲುಉತ್ತರ ಪ್ರದೇಶದಲ್ಲಿ ವೆಂದೇ ಭಾರತ್ ರೈಲು 10 ಇದೆ. ಕರ್ನಾಟಕದಲ್ಲಿ 9 ಇದ್ದು, ಜಮ್‌ಶಡ್ ಪುರದಿಂದ ಪ್ರಧಾನಿಗಳು 6 ಹೊಸ ವಂದೇಭಾರತ್ರೈಲುಗಳಿಗೆ ಚಾಲನೆ ನೀಡುತ್ತಾರೆ. ಏಕ ಕಾಲಕ್ಕೆ ಜಮ್ಶಡ್ಪುರ, ಜಾರ್ಖಂಡ್ ನ ದೇವಗರ್, ವಾರಣಾಸಿ, ಪುಣೆಯಿಂದ ಹುಬ್ಬಳ್ಳಿ, ಕೊಲ್ಲಾಪುರದಿಂದ ಆರಂಭವಾಗಲಿದೆ ಎಂದರು.ನಾನು ಮತ್ತು ಅಶ್ವಿನಿ ವೈಷ್ಣವ್ ಅವರು ಇತ್ತೇಚೆಗೆ ಬಿಇಎಂಎಲ್ ಗೆ ಭೇಟಿ ನೀಡೆದ್ದೆವು. ಆಗ ಪ್ರಧಾನಿಯವರ ಸೂಚನೆಯಂತೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯವಿರುವ ರೈಲು ನಿರ್ಮಿಸುವ ಸಂಬಂಧ ಮಾತುಕತೆ ನಡೆದಿದ್ದು, ಅದೂ ಕೂಡ ಸದ್ಯದಲ್ಲಿಯೇ ಲೋಕಾರ್ಪಣೆ ಆಗಲಿದೆ. ಅಂತಹ ರೈಲು ಕರ್ನಾಟಕಕ್ಕೂ ಬರಲಿದೆ ಎಂಬ ವಿಶ್ವಾಸವಿದೆ ಎಂದರು.ಅಶೋಕಪುರಂ ರೈಲ್ವೆ ಕಾರ್ಯಾಗಾರ ಮೇಲ್ದರ್ಜೆಗೇರಿಸಲು 59.40 ಕೋಟಿ ರು. ಬಿಡುಗಡೆ ಆಗಿದೆ. 2014 ರಿಂದ 2024 ರವರೆಗೆ ಕರ್ನಾಟಕದಲ್ಲಿ ಒಟ್ಟು 227 ಕಿ.ಮೀ. ಜೋಡಿ ರೈಲು ಮಾರ್ಗವಾಗಿದೆ. ಈ ಹಿಂದೆ ರೈಲ್ವೆ ಕೆಳಸೇತುವೆ ಮತ್ತು ಮೇಲ್ಸೇತುವೆಗಳಿಗೆ ಸಂಬಂಧಿಸಿದ ಇಲಾಖೆಗಳು ಅನುದಾನ ನೀಡುತ್ತಿರಲಿಲ್ಲ. ಈಗ ನಾವೇ ಅದನ್ನೂ ಮಾಡುತ್ತಿದ್ದೇವೆ ಎಂದರು.ರೈಲುಗಳಲ್ಲಿ ಮಹಿಳೆಯರ ಮೀಸಲು ಬೋಗಿ ಹೆಚ್ಚಳ, ಸಿಸಿ ಕ್ಯಾಮೆರಾ ಅಳವಡಿಕೆ ಸಂಬಂಧ ಹೆಚ್ಚು ಗಮನ ಹರಿಸಲಾಗುತ್ತಿದೆ. ಮಾಧ್ಯಮದವರಿಗೆ ಮತ್ತು ಹಿರಿಯ ನಾಗರೀಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡುವ ಸಂಬಂಧ ಸಚಿವರೊಡನೆ ಮಾತನಾಡಿ ತೀರ್ಮಾನಿಸುವುದಾಗಿ ಅವರು ಹೇಳಿದರು.ತುಮಕೂರು ಬಳಿಯ ಏಕಶಿಲಾ ಬೆಟ್ಟ ಮತ್ತು ಮೈಸೂರು ರೈಲ್ವೆ ಮ್ಯೂಸಿಯಂ ಅನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಸಂಬಂಧ ರಾಜ್ಯದ ಪ್ರವಾಸೋದ್ಯಮ ಸಚಿವರೊಡನೆಯೂ ಮಾತುಕತೆ ನಡೆಸುತ್ತೇನೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಟಿ.ಎಸ್. ಶ್ರೀವತ್ಸ, ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್ ಮೊದಲಾದವರು ಇದ್ದರು.