ಸಂಸೆ-ಎಳನೀರು-ದಿಡುಪೆ ರಸ್ತೆ ಅಭಿವೃದ್ಧಿಗೆ ಸಮೀಕ್ಷೆ

KannadaprabhaNewsNetwork | Published : Dec 28, 2024 1:03 AM

ಸಾರಾಂಶ

ಸಂಸೆ-ಎಳನೀರು-ದಿಡುಪೆ ರಸ್ತೆ ದ.ಕ.ಜಿಲ್ಲೆಯನ್ನು ಚಿಕಮಗಳೂರು ಜಿಲ್ಲೆಗೆ ಸಮೀಪದಿಂದ ಜೋಡಿಸುತ್ತದೆ. ಈ ಉದ್ದೇಶಿ ರಸ್ತೆಯ ಅಭಿವೃದ್ಧಿಗಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶನದಂತೆ ಕೆಲ ದಿನಗಳ ಹಿಂದೆ ಸಮೀಕ್ಷೆ ನಡೆದಿದೆ. ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು ಈ ರಸ್ತೆಯ ಅಭಿವೃದ್ಧಿ ಕನಸು ನನಸಾಗುವ ಆಶಯ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸಂಸೆ-ಎಳನೀರು-ದಿಡುಪೆ ರಸ್ತೆ ದ.ಕ.ಜಿಲ್ಲೆಯನ್ನು ಚಿಕಮಗಳೂರು ಜಿಲ್ಲೆಗೆ ಸಮೀಪದಿಂದ ಜೋಡಿಸುತ್ತದೆ. ಈ ಉದ್ದೇಶಿ ರಸ್ತೆಯ ಅಭಿವೃದ್ಧಿಗಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶನದಂತೆ ಕೆಲ ದಿನಗಳ ಹಿಂದೆ ಸಮೀಕ್ಷೆ ನಡೆದಿದೆ. ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು ಈ ರಸ್ತೆಯ ಅಭಿವೃದ್ಧಿ ಕನಸು ನನಸಾಗುವ ಆಶಯ ವ್ಯಕ್ತವಾಗಿದೆ.

ಸಂಸೆ ಮತ್ತು ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ರಸ್ತೆ ಅಭಿವೃದ್ಧಿ ಹೊಂದಿದರೆ ಎರಡು ಜಿಲ್ಲೆಗಳ ಸಂಪರ್ಕ ಬಹಳ ಹತ್ತಿರವಾಗಲಿದೆ.

ಎಳನೀರು ಪ್ರದೇಶದ ಜನರು ತಮ್ಮ ಪಂಚಾಯಿತಿ ಅಥವಾ ತಾಲೂಕು ಕಚೇರಿಗಳ ಕೆಲಸಕ್ಕೆ ಈಗ 120 ಕಿ.ಮೀ.ಗಿಂತ ಅಧಿಕ ದೂರ ಸಂಚಾರ ನಡೆಸಬೇಕಾಗಿದೆ. ಈ ರಸ್ತೆ ಅಭಿವೃದ್ಧಿ ಹೊಂದಿದರೆ ಮಲವಂತಿಗೆ 10 ಕಿ.ಮೀ., ತಾಲೂಕು ಕಚೇರಿಗೆ 30 ಕಿ.ಮೀ. ದೂರದಲ್ಲಿ ಕ್ರಮಿಸಿ ತಲುಪಬಹುದು.

ಮಳೆಗಾಲದಲ್ಲಿ ಸಂಚಾರ ಅಸಾಧ್ಯವಾಗಿರುವ ಈ ರಸ್ತೆಯಲ್ಲಿ ಬೇಸಿಗೆ ಕಾಲದಲ್ಲಿ ಜೀಪು ಹಾಗೂ ಬೈಕುಗಳು ಕಷ್ಟಪಟ್ಟು ಸಂಚರಿಸುತ್ತವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಈ ರಸ್ತೆಯಲ್ಲಿ ಹಲವಾರು ಜಲಪಾತ, ಸುಂದರ ಪರಿಸರ, ವನ್ಯಮೃಗಗಳ ಓಡಾಟವೂ ಇದೆ.ಈ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಸಾಕಷ್ಟು ಬೇಡಿಕೆ ಇದ್ದು ಅದು ಕನಸಾಗಿ ಉಳಿದಿದೆ. ಈ ರಸ್ತೆ ಅಭಿವೃದ್ಧಿ ಬಗ್ಗೆ ಮಾಧ್ಯಮಗಳಲ್ಲಿ ಹಲವಾರು ಬಾರಿ ವರದಿ ಪ್ರಕಟವಾಗಿವೆ.

ಅರಣ್ಯ ನೀತಿ ಅಡ್ಡಿ:

ಪ್ರಸ್ತುತ ಈ ರಸ್ತೆಯ ತೀರಾ ಅಗಲ ಕಿರಿಗಾಗಿದ್ದು ಅಗಲೀಕರಣಕ್ಕೆ ಅರಣ್ಯ ಇಲಾಖೆಯ ನೀತಿ ಅಡ್ಡಿಯಾಗಿದೆ. ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಅನುಮತಿ ಸಿಗದ ಕಾರಣ ಹಲವಾರು ಹೋರಾಟಗಳು ನಡೆದಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಬಗ್ಗೆ ಕಳೆದ ಅವಧಿಯಲ್ಲಿ ಶಾಸಕ ಹರೀಶ್ ಪೂಂಜ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.

ಕಳೆದ ವರ್ಷ ಬೆಳ್ತಂಗಡಿ ಶಾಸಕ ಹಾಗೂ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಇಲ್ಲಿಗೆ ಭೇಟಿ ನೀಡಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅಭಿವೃದ್ಧಿ ಬಗ್ಗೆ ರೂಪುರೇಷೆ ರೂಪಿಸುವಂತೆ ಸೂಚಿಸಿದ್ದರು.

ಇದೀಗ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಸಮೀಕ್ಷೆಗಳು ನಡೆದಿವೆ. ಇದು ಸಮೀಕ್ಷೆಗಳಿಗೆ ಸೀಮಿತವಾಗದೆ ರಸ್ತೆ ಅಭಿವೃದ್ಧಿ ಹೊಂದಬೇಕು. ಜತೆಗೆ ಇಲ್ಲಿನ ಅನೇಕ ಪರಿಸರಗಳಿಗೆ ನಾನಾ ರೀತಿಯ ಸವಲತ್ತುಗಳು ದೊರೆಯಬೇಕು ಎಂಬುದು ಸ್ಥಳೀಯರ ಆಶಯವಾಗಿದೆ.

ಎಳನೀರು ಹಲವು ಅಭಿವೃದ್ಧಿ:

ಶಾಸಕ ಹರೀಶ್ ಪೂಂಜ ವಿಶೇಷ ಮುತುವರ್ಜಿಯಲ್ಲಿ ಕಳೆದ ಅವಧಿಯಲ್ಲಿ ಎಳನೀರು ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಅಗತ್ಯ ಸ್ಥಳಗಳಲ್ಲಿ ಸೇತುವೆ ನಿರ್ಮಾಣ,ತಡೆಗೋಡೆ ರಚನೆ,ಕಿಂಡಿ ಅಣೆಕಟ್ಟು, ಕಿರು ಸೇತುವೆ, ಅಂಗನವಾಡಿ ಕೇಂದ್ರದ ಅಭಿವೃದ್ಧಿ ನಡೆದಿದೆ.

ಸಂಸೆಯಿಂದ ಎಳನೀರು ಪ್ರದೇಶಕ್ಕೆ ಮೂರು ಕಿ.ಮೀ. ರಸ್ತೆಗೆ ಕಾಂಕ್ರೀಟಿಕರಣ ಕಾಮಗಾರಿ ಮೋರಿಗಳ ರಚನೆಯು ಆಗಿದೆ .ದಿಡುಪೆಯಿಂದ ಎಳನೀರಿಗೆ ಸುಮಾರು 10 ಕಿ.ಮೀ. ದೂರ ಇದ್ದು ಇನ್ನು 7 ಕಿಮೀ. ರಸ್ತೆಗೆ ಕಾಂಕ್ರೀಕರಣ ನಡೆಯಬೇಕಿದೆ ಹಾಗೂ ರಸ್ತೆ ಅಗಲೀಕರಣ ಕೆಲಸ ಆಗಬೇಕಿದೆ.

........................

ಈ ರಸ್ತೆ ಅಭಿವೃದ್ಧಿ ಹಲವು ದಶಕಗಳ ಬೇಡಿಕೆಯಾಗಿದೆ. ಈ ರಸ್ತೆ ಅಭಿವೃದ್ಧಿ ಹೊಂದಿದರೆ ಎರಡು ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗುವ ಜತೆ ಇಲ್ಲಿನ ಪರಿಸರ ಅಭಿವೃದ್ಧಿ ಹೊಂದಲಿದೆ. ಕಳೆದ ಅವಧಿಯಲ್ಲಿ ಶಾಸಕ ಹರೀಶ್ ಪೂಂಜ ಎಳನೀರು ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಿದ್ದು ಹಲವು ಮೂಲಭೂತ ಸೌಕರ್ಯಗಳು ದೊರಕಿವೆ.

-ಪ್ರಕಾಶ್ ಜೈನ್, ಅಧ್ಯಕ್ಷ, ಗ್ರಾ.ಪಂ.ಮಲವಂತಿಗೆ.

Share this article