ಶಿವಮೊಗ್ಗ: ತಾಲೂಕಿನ ಬ್ಯಾಡನಾಳ, ಜೋಡನಾಳ ಗ್ರಾಮದಲ್ಲಿರುವ ಮೂಲ ಶರಾವತಿ ಮುಳುಗಡೆ ಸಂತ್ರಸ್ತರ ಅನುಭವದಲ್ಲಿರುವ ಜಮೀನು ಕೈಬಿಟ್ಟು, ಶರಾವತಿ ಮುಳುಗಡೆ ರೈತರಲ್ಲದ ಜಮೀನನ್ನು ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿದ್ದಾರೆ ಎಂದು ರೈತ ಪ್ರವೀಣ ಬ್ಯಾಡನಾಳ್ ಆರೋಪಿಸಿದರು.
ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1962ರಲ್ಲಿಯೇ ಶಿವಮೊಗ್ಗ ತಾಲೂಕು ಬ್ಯಾಡನಾಳ, ಕೋಣೆಹೊಸೂರು ಗ್ರಾಮದಲ್ಲಿ ಸರ್ವೇ ನಂ. 22, 23ರಲ್ಲಿ ಸುಮಾರು 22 ಕುಟುಂಬಗಳಿಗೆ ಹಾಗೂ ತುಪ್ಪೂರು ಗ್ರಾಮದ ಮಜರೆ ಚೋಡನಾಳ ಸರ್ವೆ 45ರಲ್ಲಿ 25 ಕುಟುಂಬಗಳಿಗೆ ಮುಳುಗಡೆ ಸಂತ್ರಸ್ತರು ಎಂದು ಸರ್ಕಾರ ಹಕ್ಕು ಪತ್ರ ಕೊಟ್ಟಿದೆ. ಇವರು ಮೂಲ ಸಂತ್ರಸ್ತರಾಗಿದ್ದು, ಇವರ ಜಮೀನನ್ನು ಸರ್ವೆ ಮಾಡದೇ ಕೈಬಿಡಲಾಗಿದೆ ಎಂದು ದೂರಿದರು.ಜಿಲ್ಲೆಯ ಬಹುತೇಕ ಕಡೆ ಶರಾವತಿ ಮುಳುಗಡೆ ಸಂತ್ರಸ್ತರ ಗ್ರಾಮದಲ್ಲಿ ಇದೇ ರೀತಿಯ ಮೂಲ ಸಂತ್ರಸ್ತರ ಜಮೀನನ್ನು ಸರ್ವೆ ಕಾರ್ಯದಿಂದ ಕೈ ಬಿಟ್ಟಿದ್ದಾರೆ. ಸರ್ವೆ ವಿಚಾರದಲ್ಲಿ ಅಧಿಕಾರಿಗಳು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಬ್ಯಾಡನಾಳ ಜೋಡನಾಳ ಗ್ರಾಮದ ಸುಮಾರು 50 ರೈತರ ಜಮೀನುಗಳ ಸರ್ವೇ ಮಾಡಲು ಆಗುವುದಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡ ತೀ.ನಾ. ಶ್ರೀನಿವಾಸ್ ಮಾತನಾಡಿ, ನಾಡಿಗೆ ಬೆಳಕು ನೀಡಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ಶರಾವತಿ ಮುಳುಗಡೆ ಸಂತ್ರಸ್ತರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಮುಳುಗಡೆ ಸಂತ್ರಸ್ತರು ಅನುಭವದಲ್ಲಿರುವ ಜಮೀನುಗಳನ್ನು ಸರ್ವೆ ಮಾಡದೇ ಬೇರೆಯವರು ಅನುಭವದಲ್ಲಿರುವ ಜಮೀನನ್ನು ಸರ್ವೆ ಮಾಡುತ್ತಿದ್ದಾರೆ. ಅಧಿಕಾರಿಗಳು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.ಸರ್ವೆ ಕಾರ್ಯ ಸರಿಯಾಗಿ ಆಗುತ್ತಿಲ್ಲ ಅಂತ ಜಿಲ್ಲಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಗಮನಕ್ಕೆ ತಂದರೆ ನಮಗೂ ಅದಕ್ಕೂ ಸಂಬಂಧವಿಲ್ಲದ ರೀತಿ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವ ಆಸಕ್ತಿ ಇಲ್ಲ, 65 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಇನ್ನು ಸಹಿಸಲ್ಲ, ಅಧಿಕಾರಿಗಳ ನಡೆಯ ವಿರುದ್ಧ ಕಾನೂನುಭಂಗ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.ಸಚಿವರು, ಸಂಸದರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸರಿಯಾಗಿ ಸರ್ವೆ ಕಾರ್ಯ ಮಾಡಲು ಕಟ್ಟುನಿಟ್ಟಾಗಿ ಸೂಚಿಸಬೇಕು ಆದರೆ ಇಲ್ಲಿ ಎಲ್ಲಾ ಉಲ್ಟಾ ಆಗಿದೆ. ಸಂಸದರು, ಸಚಿವರು ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುತ್ತಿದ್ದಾರಾ ಎಂಬ ಅನುಮಾನವಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರೈತರಾದ ಶಿವಪ್ಪ, ಕೃಷ್ಣಮೂರ್ತಿ, ಸೋಮಶೇಖರ್, ರಾಜಪ್ಪ, ಜಯರಾಮ್, ನಾರಾಯಣಪ್ಪ.ಸಿ.ಕೆ ಸೇರಿದಂತೆ 15ಕ್ಕೂ ಹೆಚ್ಚು ಸಂತ್ರಸ್ತರು ಇದ್ದರು. ಮದನ್ ಗೋಪಾಲ್ ವರದಿ ಜಾರಿಯಾಗಲಿ: ತಿ.ನಾ.ಶ್ರೀನಿವಾಸ್ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಮದನ್ ಗೋಪಾಲ್ ವರದಿ ಜಾರಿಯಾಗಬೇಕು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ. ಶ್ರೀನಿವಾಸ್ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಕೋರ್ಟ್ ರಾಜ್ಯ ಸರ್ಕಾರದ ಕಾರ್ಯದರ್ಶಿ ಹಾಗೂ ಕೇಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಸಮಾಲೋಚನೆ ನಡೆಸಿ ಎಂದು ಆದೇಶ ಮಾಡಿತ್ತು. ಅದರಂತೆ ಈಗ ರಾಜ್ಯ ಸರ್ಕಾರ 9126 ಎಕರೆ ಅರಣ್ಯ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಸರ್ವೇ ಮಾಡಲು ಆರಂಭಿಸಿದೆ. ಆದರೆ, ಜಿಲ್ಲಾದ್ಯಂತ ಸಾವಿರಾರು ರೈತರ ಜಮೀನು ಅಳತೆ ಮಾಡುವುದನ್ನು ಕೈಬಿಡಲಾರಂಭಿಸಿದೆ. ಏಕೆಂದು ಅರ್ಥವಾಗುತ್ತಿಲ್ಲ. ಯಾವ ಮಾನದಂಡ ಇಟ್ಟುಕೊಂಡು ಸರ್ವೇ ಮಾಡಿಸುತ್ತದೆ ಎಂದು ತಿಳಿದಿಲ್ಲ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸುಪ್ರೀಂ ಕೋರ್ಟ್ ಆದೇಶ ಬಂದ ನಂತರ ಪರಸ್ಪರ ಹೇಳಿಕೆ ನೀಡಿ ಈ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ ಎಂದು ಕೊಚ್ಚಿಕೊಳ್ಳುತ್ತಿದ್ದರು. ಆದರೆ, ಈಗ ಸರ್ವೇಯನ್ನೇ ಮಾಡುತ್ತಿಲ್ಲ. ಆದ್ದರಿಂದ ಸಮಸ್ಯೆ ಪೂರ್ಣ ಬಗೆಹರಿಯಬೇಕೆಂದರೆ ಮುಳುಗಡೆ ಸಂತ್ರಸ್ತರ ಗ್ರಾಮಗಳ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ಅಗತ್ಯಕ್ರಮ ಕೈಗೊಳ್ಳಬೇಕು ಎಂದರು.