ಬೆಂಗಳೂರು : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡೆಂಘೀ ಪ್ರಕರಣ ನಿಯಂತ್ರಣಕ್ಕೆ ನಗರದಲ್ಲಿ ಎಲ್ಲ 25 ಲಕ್ಷ ಮನೆಗಳಿಗೂ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುವುದು ಹಾಗೂ ಸೊಳ್ಳೆ ಉತ್ಪತ್ತಿ ತಡೆಗೆ ಜಾಗೃತಿ ಮೂಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಡೆಂಘೀ ನಿಯಂತ್ರಿಸಲು ಕಿರಿಯ ಆರೋಗ್ಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚಿನ ತಂಡಗಳನ್ನು ನಿಯೋಜಿಸಲಾಗಿದೆ. ಈ ತಂಡಗಳಿಗೆ ನಗರದಲ್ಲಿ ಎಲ್ಲ 25 ಲಕ್ಷ ಮನೆಗಳಿಗೂ ಭೇಟಿ ನೀಡಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಈ ವೇಳೆ ಲಾರ್ವಾ ಪತ್ತೆ ಮತ್ತು ನಾಶ ಕಾರ್ಯ ಮಾಡುವುದು ಹಾಗೂ ಡೆಂಘೀ ನಿಯಂತ್ರಣ ಕುರಿತು ಜನರಿಗೆ ಭಿತ್ತಿಪತ್ರ ವಿತರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದರು.
ನಗರದಲ್ಲಿ ಈ ವರ್ಷದ ಜನವರಿಯಿಂದ ಈವರೆಗೆ 3,815 ಡೆಂಘೀ ಪ್ರಕರಣಗಳು ಕಂಡು ಬಂದಿವೆ. ಜು. 1ರಿಂದ 6ನೇ ತಾರೀಖಿನವರೆಗೆ 776 ಮಂದಿಗೆ ಡೆಂಘೀ ದೃಢಪಟ್ಟಿದೆ. ಪ್ರತಿದಿನ ಸರಾಸರಿ 130ರಿಂದ 140 ಪ್ರಕರಣಗಳು ದೃಢಪಡುತ್ತಿದ್ದು, ಹೆಚ್ಚಿನ ಪ್ರಕರಣಗಳು ಕಂಡುಬರುವ ಪ್ರದೇಶಗಳಲ್ಲಿ ಔಷಧ ಸಿಂಪಡಣೆ ಹಾಗೂ ಫಾಗಿಂಗ್ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ಒಮ್ಮೆಲೇ ಜೋರಾದ ಮಳೆ ಬಂದರೆ ನೀರು ನಿಲ್ಲುವುದು ಕಡಿಮೆಯಾಗುತ್ತಿದೆ. ಆದರೆ, ಬಿಡುವು ನೀಡಿ ಮಳೆ ಬರುತ್ತಿರುವ ಕಾರಣ ನಿಂತ ನೀರಲ್ಲಿ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆ ಹೆಚ್ಚುತ್ತಿವೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸಲು ಹೆಚ್ಚಿನ ಪ್ರಮಾಣದಲ್ಲಿ ಔಷಧ ಸಿಂಪಡಣೆ ಹಾಗೂ ಫಾಗಿಂಗ್ ಮಾಡಲು ಸಿಬ್ಬಂದಿ ಸಂಖ್ಯೆ ಹೆಚ್ಚಳ ಮಾಡುವಂತೆ ವಲಯ ಆಯುಕ್ತರುಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಬಿಎಂಟಿಸಿಯಿಂದ ಮುಂಜಾಗ್ರತಾ ಕ್ರಮ:
ಡೆಂಘೀ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಿಎಂಟಿಸಿಯ ಎಲ್ಲ 49 ಘಟಕ, 10 ಟಿಟಿಎಂಸಿ, ಪ್ರಮುಖ ಮೂರು ಬಸ್ ನಿಲ್ದಾಣಗಳು ಹಾಗೂ ನಾಲ್ಕು ಕಾರ್ಯಾಗಾರಗಳಲ್ಲಿ ಸ್ವಚ್ಛತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬ್ಬಂದಿಗಳು ತಾವು ಕಾರ್ಯನಿರ್ವಹಿಸುವ ಸ್ಥಳದಲ್ಲಿ ನೀರು ನಿಲ್ಲುವ ಟೈರ್‌ಗಳು, ಸಿಮೆಂಟ್ ತೊಟ್ಟಿ, ಹೂದಾನಿ, ಕಟ್ಟಡದ ಮೇಲ್ಛಾವಣಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ನಿಂತಿದ್ದ ನೀರನ್ನು ತೆರವು ಮಾಡಿ, ಲಾರ್ವಾ ಉತ್ಪತ್ತಿ ತಡೆಗೆ ಕ್ರಮ ಕೈಗೊಂಡರು.