ದೇಶಕ್ಕೆ ದಿವ್ಯಾಂಗರ ಕೊಡುಗೆ ಸಮೀಕ್ಷೆ ನಡೆಸಿ: ಬೊಮ್ಮಾಯಿ

KannadaprabhaNewsNetwork |  
Published : Mar 04, 2024, 01:20 AM IST
Sakshema | Kannada Prabha

ಸಾರಾಂಶ

ರಾಷ್ಟ್ರಕ್ಕೆ ದಿವ್ಯಾಂಗರು ನೀಡಿರುವ ಕೊಡುಗೆಯನ್ನು ಸಮೀಕ್ಷೆ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದ ಜಿಡಿಪಿಗೆ ದಿವ್ಯಾಂಗರ ಕೊಡುಗೆ ಏನು ಎಂದು ರಾಷ್ಟ್ರ ಮಟ್ಟದಲ್ಲಿ ಸಮೀಕ್ಷೆಯಾಗಬೇಕು. ಆಗ ಅವರ ಸೇವೆ ಏನಿದೆ ಎಂದು ಎಲ್ಲರಿಗೂ ತಿಳಿಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಾಮರಾಜಪೇಟೆಯ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಕ್ಷಮ ವಿಶೇಷ ಚೇತನರ ದಕ್ಷಿಣ ಪ್ರಾಂತ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ದಿವ್ಯಾಂಗರ ಬಗ್ಗೆ ಅನುಕಂಪ ಬೇಡ, ಅವಕಾಶ ನೀಡಿದರೆ ಸಾಧನೆ ಮಾಡುತ್ತಾರೆ. ಸರ್ಕಾರಗಳು ಅನೇಕ ಯೋಜನೆ ಜಾರಿಗೊಳಿಸಿದರೂ ಸರಿಯಾಗಿ ತಲುಪಿಸುವ ಕೆಲಸ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಯೋಜನೆ ಅಂತಿಮ‌ ವ್ಯಕ್ತಿಗೆ ತಲುಪಿಸುವ ಕಾರ್ಯ ಮಾಡುತ್ತಾರೆ. ನಾವು ಅಧಿಕಾರದಲ್ಲಿದ್ದಾಗ ಸಕ್ಷಮ ಸಂಸ್ಥೆಯ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ್ದೆವು. ಉತ್ತಮ ಕೆಲಸ ಮಾಡುವವರನ್ನು ಗೌರವಿಸುವುದರಲ್ಲಿ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟರು.

ದಿವ್ಯಾಂಗರು ಎಲ್ಲ ರಂಗದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ಮನುಷ್ಯರಿಗಿಂತ ಮಿಗಿಲಾದ ಕಲ್ಪನಾ ಶಕ್ತಿಯನ್ನು ಹೊಂದಿರುತ್ತಾರೆ, ದಿವ್ಯಾಂಗರನ್ನು ವಿಕಲಚೇತನ, ವಿಶೇಷ ಚೇತನ ಎಂದು ಕರೆಯುತ್ತೇವೆ. ಸಾಧಿಸುವ ಛಲ ಹೊಂದಿರುವ ಅವರಿಗೆ ಅವಕಾಶ ನೀಡಿದರೆ ಸ್ವಾಭಿಮಾನದಿಂದ ಬದುಕುತ್ತಾರೆ. ಅವರೇ ನಿಜವಾದ ಯೋಗಿಗಳು ಎಂದು ಬಣ್ಣಿಸಿದರು.

ಎಲ್ಲ ಅಂಗಾಂಗಳನ್ನು ಹೊಂದಿರುವ ನಾವು ನೆಮ್ಮದಿ, ಖುಷಿಯಿಂದ ಇಲ್ಲ. ಭಗವಂತ ಕೊಟ್ಟಿರುವ ಎಲ್ಲ ಆಂಗಗಳನ್ನು ಸರಿಯಾಗಿ ಬಳಸಿಕೊಂಡಿದ್ದೇವೆಯೇ. ಇಎನ್‌ಟಿ ಪರೀಕ್ಷೆ ಮಾಡಿಸುವವರು ಯಾರು? ಕಣ್ಣಿನ ಪರೀಕ್ಷೆ ಮಾಡಿಸುವ ನಾವು ನಿಜವಾದ ದಿವ್ಯಾಂಗರು. ಕೆಲವು ಅಂಗ ಊನ‌ ಇರುವವರು ಛಲದಿಂದ ಬದುಕುತ್ತಾರೆ ಎಂದು ತಿಳಿಸಿದರು.

ನಾವು ಕೆಲವು ಸಾರಿ ಭಿಕ್ಷುಕರಾಗುತ್ತೇವೆ. ರಾಜಕಾರಣಿಗಳು ಟಿಕೆಟ್ ಭಿಕ್ಷೆ ಬೇಡುತ್ತಾರೆ. ವ್ಯಾಪಾರಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಆದರೆ, ದಿವ್ಯಾಂಗರು ಸ್ವಾಭಿಮಾನದಿಂದ ಬದುಕುತ್ತಾರೆ. ನಾನು ಪಂಡಿತ ಪುಟ್ಟರಾಜ ಗವಾಯಿಗಳ ಸಂಪರ್ಕದಲ್ಲಿ ಸಾಕಷ್ಟು ಪಡೆದಿದ್ದೇನೆ ಎಂದು ಬೊಮ್ಮಾಯಿ ಸ್ಮರಿಸಿದರು.

ಶಾಸಕರಾದ ಉದಯ ಗರುಡಾಚಾರ್, ಎನ್.ರವಿಕುಮಾರ್ ಸಮಾರಂಭದಲ್ಲಿ ಹಾಜರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ