ರಾಜಧಾನಿಯಲ್ಲೇ ಕನ್ನಡಕ್ಕೆ ಉಳಿವಿನ ಸವಾಲು: ಡಾ.ಕುಮಾರ ಹೆಗ್ಡೆ

KannadaprabhaNewsNetwork |  
Published : May 07, 2024, 01:02 AM IST
ಕಸಾಪ 110 | Kannada Prabha

ಸಾರಾಂಶ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಆಶ್ರಯದಲ್ಲಿ ಭಾನುವಾರ ಉಜಿರೆ ಶ್ರೀ ಸಿದ್ಧವನ ಗುರುಕುಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ೧೧೦ನೇ ಸಂಸ್ಥಾಪನಾ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಯಿ, ಮಾತೃಭೂಮಿ ಸ್ವರ್ಗಕ್ಕಿಂತ ಮಿಗಿಲಾದುದು. ಮಾತೃ ಭಾಷೆಗೆ ಪ್ರಾಧಾನ್ಯತೆಯಿದ್ದರೂ ಕನ್ನಡ ರಾಜ್ಯಧಾನಿಯಲ್ಲೇ ಕನ್ನಡಕ್ಕೆ ಬಹುದೊಡ್ಡ ಉಳಿವಿನ ಸವಾಲು ಎದುರಾಗಿದೆ ಎಂದು ಉಜಿರೆ ಶ್ರೀ ಧ.ಮಂ. ಕಾಲೇಜು ಪ್ರಾಚಾರ್ಯ ಡಾ.ಬಿ.ಎ.ಕುಮಾರ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಆಶ್ರಯದಲ್ಲಿ ಭಾನುವಾರ ಉಜಿರೆ ಶ್ರೀ ಸಿದ್ಧವನ ಗುರುಕುಲದಲ್ಲಿ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೦ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮೊಬೈಲ್, ಫಾಸ್ಟ್‌ಫುಡ್ ಯುಗದಲ್ಲಿ ಓದುವ, ಬರೆಯುವ ಹವ್ಯಾಸ ಮರೆಯಾಗುತ್ತಿದೆ. ಅದಕ್ಕಾಗಿ ಪ್ರತಿ ಹೋಬಳಿ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಸಂವಾದ, ಕವಿ, ಕವನಗಳಿಗೆ ಬೆಂಬಲಿಸುವ, ಕನ್ನಡ ಭಾಷೆಯಲ್ಲಿ ಬರೆಯುವ ಕಾರ್‍ಯಕ್ರಮ ಹಮ್ಮಿಕೊಳ್ಳಬೇಕಿದೆ. ವಿದ್ಯಾರ್ಥಿ ಜೀವನದಲ್ಲಿ ಶ್ರೇಷ್ಠವಾದದ್ದು ತನ್ನತ್ತ ಆವರಿಸುವ ಸಲುವಾಗಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷಾ ಸಂಮೃದ್ಧಿಗೆ ಜಿಲ್ಲೆಯಲ್ಲಿ ನಾವು ೪೦೦ಕ್ಕಿಂತ ಅಧಿಕ ಕಾರ್‍ಯಕ್ರಮ ನಡೆಸಿ ಮನೆ ಮನೆಗೆ ಪಸರಿಸುವ ಕಾರ್ಯವಾಗಿದೆ. ಗಡಿನಾಡಲ್ಲೂ ಸಾಹಿತ್ಯ ಕಾರ್‍ಯೋನ್ಮುಖವಾಗಿದೆ. ಜಿಲ್ಲೆಯ ೯ ತಾಲೂಕುಗಳಲ್ಲಿ ಇಂದು ಸಂಸ್ಥಾಪನಾ ದಿನಾಚರಣೆ ಆಯೋಜಿಸಲಾಗಿದೆ ಎಂದರು.

ಪುತ್ತೂರು ವಿವೇಕಾನಂದ ಕಾಲೇಜು ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಶ ಕುಮಾರ ಎಂ.ಕೆ. ವಿಶೇಷ ಉಪನ್ಯಾಸ ನೀಡಿ, ಒಂದು ಭಾಷೆ, ಸಾಹಿತ್ಯ ಮೇಲ್ನೋಟಕ್ಕೆ ಅದಾಗಿ ಅದು ತೆರೆದುಕೊಳ್ಳುವುದಿಲ್ಲ. ಭಾಷೆಯ ಶಬ್ಧ ಮತ್ತು ಅರ್ಥಗಳ ಮಂಜುಳ ಸಂಯೋಜನೆ ಸಮಾಜಕ್ಕೆ ಹಿತವಾದ ಸಾಹಿತ್ಯ ನೀಡುವ ಸಾಹಿತ್ಯ ಕೃಷಿ ಬೆಳೆಯಬೇಕಿದೆ ಎಂದರು.

ಇಂದು ವಿಕೃತಿಯೆಡೆಗೆ ಕೊಂಡೊಯ್ಯುವ ಸಾಹಿತ್ಯದಿಂದ ಅಪಾಯವಿದೆ. ನಮ್ಮನ್ನು ಜೀವನ ಪರ್ಯಂತ ಉಳಿಸಿಕೊಳ್ಳಬಹುದಾದ ಹವ್ಯಾಸ ಇದ್ದರೆ ಅದು ಓದುವ ಹವ್ಯಾಸ ಎಂದ ಅವರು ಎಲ್ಲ ಭಾಷೆಗಳನ್ನು ಪ್ರೀತಿಸಿ, ಗೌರವಿಸಿ, ನಮ್ಮ ಕನ್ನಡ ಭಾಷಾ ಸಂಸ್ಕೃತಿಯಿಂದ ಸಾಹಿತ್ಯವನ್ನು ಗಟ್ಟಿಗೊಳಿಸುವ ಕೆಲಸವಾಗಲಿ ಎಂದರು.

ಬೆಂಗಳೂರು ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಾಧವ ಎಂ.ಕೆ. ಮಾತನಾಡಿ, ಭಾರತ ದೇಶ ಇತರ ದೇಶದ ಮೇಲೆ ದಾಳಿ ಮಾಡಿರುವ ಇತಿಹಾಸವಿಲ್ಲ, ಆದರೆ ಭಾರತದ ಮೇಲೆ ಆಗಿರುವ ದಾಳಿಗಳು ಭಾಷೆಯ ಮೇಲೂ ಪರಿಣಾಮ ಬೀರಿದೆ. ಅದಕ್ಕೆ ಬ್ರಿಟಿಷರಿಂದ ಭಾರತದಲ್ಲಿ ಆಂಗ್ಲ ಶಿಕ್ಷಣ ಪದ್ಧತಿ ಪರಿಣಾಮ ಬೀರಿರುವುದೇ ಸಾಕ್ಷಿ. ಇಂದು ಶಿಕ್ಷಣ ಪದ್ಧತಿ ವ್ಯಾಪರೀಕರಣವಾಗಿದೆ. ಡೀಮ್ಡ್ ವಿವಿಗಳು ನಮ್ಮ ದೇಶೀಯ ಭಾಷೆಯನ್ನು ಅಳಿಸಿ ಪಾಶ್ಚಾತ್ತೀಕರಣವಾಗಿಸುತ್ತಿದೆ. ಹೀಗಾಗಿ ಕನ್ನಡ ಭಾಷಾ ಕೀಳರಿಮೆಯಿಂದ ಹೊರಬರದೇ ಹೋದಲ್ಲಿ ಕನ್ನಡದ ಉಳಿವು ಸವಾಲಾಗಲಿದೆ ಎಂದು ವಿಶ್ಲೇಷಿಸಿದರು.

ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ನಿರ್ವಹಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ