4ನೇ ಕನಕಗಿರಿ ಉತ್ಸವಕ್ಕೆ ಸಿದ್ಧಗೊಂಡ ಸುವರ್ಣಗಿರಿ

KannadaprabhaNewsNetwork | Published : Mar 2, 2024 1:47 AM

ಸಾರಾಂಶ

ಕನಕಗಿರಿ ಉತ್ಸವವನ್ನು ಈಗಾಗಲೇ ೨೦೧೦, ೨೦೧೩, ೨೦೧೫ರಲ್ಲಿ ಆಚರಿಸಿದ್ದ ಶಿವರಾಜ ತಂಗಡಗಿ ೪ನೇ ಬಾರಿಯೂ ಉತ್ಸವ ಆಚರಣೆಗೆ ಮುಂದಾಗಿದ್ದಾರೆ.

ಎಂ.ಪ್ರಹ್ಲಾದ

ಕನಕಗಿರಿ: ಅತಿವೃಷ್ಟಿ, ಅನಾವೃಷ್ಟಿ, ಬರಗಾಲ ಸೇರಿದಂತೆ ನಾನಾ ನೆಪ ಹೇಳಿ ಕನಕಗಿರಿ ಉತ್ಸವ ಆಚರಣೆ ಮುಂದೂಡಲಾಗುತ್ತಿತ್ತು. ಈ ಬಾರಿ ಒಂಬತ್ತು ವರ್ಷಗಳ ನಂತರ ಸರ್ಕಾರ ಮತ್ತು ಜಿಲ್ಲಾಡಳಿತ ಉತ್ಸವ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.ಕನಕಗಿರಿ ಉತ್ಸವವನ್ನು ಈಗಾಗಲೇ ೨೦೧೦, ೨೦೧೩, ೨೦೧೫ರಲ್ಲಿ ಆಚರಿಸಿದ್ದ ಶಿವರಾಜ ತಂಗಡಗಿ ೪ನೇ ಬಾರಿಯೂ ಉತ್ಸವ ಆಚರಣೆಗೆ ಮುಂದಾಗಿದ್ದಾರೆ. ಇದು ಕ್ಷೇತ್ರದ ಜನತೆಯಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ನಾಲ್ಕು ಬಾರಿ ನಡೆದ ಉತ್ಸವವು ಶಿವರಾಜ ತಂಗಡಗಿಯವರಿಂದಲೇ ಆಗಿದೆ. ಕನಕಗಿರಿ ಜನತೆ ತಂಗಡಗಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದಾಗೊಮ್ಮೆ ಸಚಿವರಾಗಿದ್ದು, ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಅವರ ಸಮ್ಮುಖದಲ್ಲಿಯೇ ೪ನೇ ಬಾರಿಯೂ ಕನಕಗಿರಿ ಉತ್ಸವ ನಡೆಯುತ್ತಿರುವುದು ಮತ್ತೊಂದು ಇತಿಹಾಸವೇ ಸರಿ.ಈ ಬಾರಿಯ ಉತ್ಸವದಲ್ಲಿ ಯಥೇಚ್ಛವಾಗಿ ಗ್ರಾಮೀಣ ಕ್ರೀಡೆಗಳು ನಡೆದಿವೆ. ಅಂಧಮಕ್ಕಳಿಂದ ಮಲ್ಲಕಂಬ ಪ್ರದರ್ಶನ, ಸ್ಥಳೀಯ ರೈತರಿಂದ ಸಂಗ್ರಾಣಿ ಕಲ್ಲು ಎತ್ತುವುದು ಸೇರಿದಂತೆ ಹಲವು ಕ್ರೀಡೆಗಳು ನಡೆದವು.ಕಂಗೊಳಿಸಿದ ದೀಪಾಲಂಕಾರ: ಎಪಿಎಂಸಿ ಆವರಣ, ಕನಕಾಚಲಪತಿ ದೇವಸ್ಥಾನ, ಬಸ್ ನಿಲ್ದಾಣದಿಂದ ರಾಜಾ ಉಡಚಪ್ಪ ನಾಯಕ ವೇದಿಕೆವರೆಗೆ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತ ಸೇರಿದಂತೆ ನಾನಾ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ಕನಕಗಿರಿಯ ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.ಸ್ವಾಗತ ಕಮಾನುಗಳ ನಿರ್ಮಾಣ: ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರ ಆಹ್ವಾನಿಸುವುದಕ್ಕಾಗಿ ಪಟ್ಟಣದ ನಾಲ್ಕು ಕಡೆಗಳಲ್ಲಿ ಸ್ವಾಗತ ಕಮಾನುಗಳ ನಿರ್ಮಿಸಲಾಗಿದೆ. ಉತ್ಸವ ಪ್ರಮುಖ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿಯೂ ಸ್ವಾಗತ ಬ್ಯಾನರ್‌ಗಳು ರಾರಾಜಿಸುತ್ತಿವೆ.ರಸ್ತೆಗೆ ಡಾಂಬರೀಕರಣ: ಬಸ್ ನಿಲ್ದಾಣದಿಂದ ವಾಲ್ಮೀಕಿ ವೃತ್ತದ ಕಡೆ ಸಾಗುವ ರಸ್ತೆಗೆ ಹಾಗೂ ಬಸ್ ನಿಲ್ದಾಣದಿಂದ ಕನಕಾಚಲಪತಿ ದೇವಸ್ಥಾನದವರೆಗೆ ಸಾಗುವ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಇನ್ನು ರಥಬೀದಿಗೆ ₹೨.೨ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿ ನಡೆದಿದೆ. ರಾಜಾ ಉಡಚಪ್ಪ ನಾಯಕ ವೇದಿಕೆಗೆ ಕಲ್ಪಿಸುವ ಎರಡು ಬದಿ ರಸ್ತೆಗಳನ್ನು ಡಾಂಬರೀಕರಣ ಮಾಡಿದ್ದು, ಉತ್ಸವಕ್ಕೆ ಹೊಸ ಮೆರಗು ಬಂದಿದೆ.ಕನಕಗಿರಿ ಉತ್ಸವಕ್ಕಿಂದು ಸಿಎಂ ಚಾಲನೆ:ಮಾ.೨ರಂದು ಸಂಜೆ ೬.೩೦ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಕಗಿರಿಯ ೪ನೇ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಜಿಂದಾಲ್ ಏರ್‌ಸ್ಕ್ರಿಪ್‌ಗೆ ಬಂದಿಳಿಯಲಿದ್ದಾರೆ. ನಂತರ ಹೆಲಿಕಾಪ್ಟರ್‌ ಮೂಲಕ ಕನಕಗಿರಿಗೆ ಆಗಮಿಸಲಿದ್ದಾರೆ.ಲಕ್ಷ ಆಸನ ವ್ಯವಸ್ಥೆ:ಮುಖ್ಯ ರಾಜಾ ಉಡಚಪ್ಪ ನಾಯಕ ವೇದಿಕೆಯ ಸುತ್ತ ಒಂದು ಲಕ್ಷಕ್ಕೂ ಅಧಿಕ ಆಸನ ವ್ಯವಸ್ಥೆ ಮಾಡಲಾಗಿದೆ. ಫಲ-ಪುಷ್ಪ ಪ್ರದರ್ಶನ, ಮಾಧ್ಯಮ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಮಳಿಗೆಗಳನ್ನು ತೆರೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.ಮಠಾಧೀಶರು, ಗಣ್ಯರು ಭಾಗಿ:ಇದೇ ಮೊದಲ ಬಾರಿಗೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀ, ಕನಕಗಿರಿಯ ಕಲ್ಮಠದ ಡಾ.ಚೆನ್ನಮಲ್ಲ ಶ್ರೀ, ಸುಳೇಕಲ್‌ನ ಭುವನೇಶ್ವರಿ ಶ್ರೀ, ರಾಜವಂಶಸ್ಥ ರಾಜಾ ನವೀನಚಂದ್ರ ನಾಯಕ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.ಅದ್ಧೂರಿ ಮೆರವಣಿಗೆ ಇಂದು:ಅಗಸಿ ಹನುಮಪ್ಪ ದೇವಸ್ಥಾನದಿಂದ ಅಂಬಾರಿ ಮೆರವಣಿಗೆಗೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಲಿದ್ದಾರೆ. ೩೭ ಕಲಾ ತಂಡಗಳು, ಶಾಲಾ ವಿದ್ಯಾರ್ಥಿಗಳಿಂದ ಸ್ತಬ್ಧಚಿತ್ರ ಮೆರವಣಿಗೆ, ಸಿದ್ದಾಪುರದ ಹಗಲುವೇಷಗಾರರಿಂದ ರಾಮಾಯಣ, ಮಹಾಭಾರತದ ವೇಶಭೂಷಣದ ನೃತ್ಯ, ವೀರಗಾಸೆ, ಜಾನಪದ ಸೊಗಡು, ಡೊಳ್ಳು ಕುಣಿತ ಸೇರಿದಂತೆ ನಾನಾ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.

Share this article