ಶಿವಾನಂದ ಗೊಂಬಿ
ಹುಬ್ಬಳ್ಳಿ:ಸ್ವಚ್ಛ ಭಾರತ -1ರಲ್ಲಿ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಕೇಂದ್ರ ಸರ್ಕಾರ ಸ್ವಚ್ಛ ಭಾರತ 2ರಲ್ಲಿ ತ್ಯಾಜ್ಯ ವಿಲೇವಾರಿಗೆ ಇನ್ನಷ್ಟು ವೈಜ್ಞಾನಿಕತೆ ಸ್ಪರ್ಶ ನೀಡುತ್ತಿದೆ. ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ರಾಜ್ಯದ 8 ಮಹಾನಗರ ಪಾಲಿಕೆಗಳಿಗೆ 10 ಎಂಆರ್‌ಎಫ್ ಘಟಕ ಪ್ರಾರಂಭಿಸಲು ಹಸಿರು ನಿಶಾನೆ ತೋರಿಸಿದೆ.
ಎಂಆರ್‌ಎಫ್ ಎಂದರೆ ಮಟಿರಿಯಲ್ ರಿಕವರಿ ಫೆಸಿಲಿಟಿ ಘಟಕ. ಅಂದರೆ ಒಣ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ಅವುಗಳಲ್ಲಿ ಮತ್ತೆ ಬಳಸಲು ಯೋಗ್ಯವನ್ನಾಗಿಸುವ ವಸ್ತುಗಳನ್ನು ಹೆಕ್ಕಿ ತೆಗೆದು ರಿಸೈಕಲಿಂಗ್‌ಗೆ ಕಳುಹಿಸುವುದು. ಆ ಮೂಲಕ ವ್ಯರ್ಥವಾಗುವ ಕಸದಲ್ಲಿ ರಸ ತೆಗೆಯುವ ಯೋಜನೆ ಇದಾಗಿದೆ. ಇದರಿಂದ ಪಾಲಿಕೆಗೂ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದಂತಾಗುತ್ತದೆ ಜತೆಗೆ ಸಂಪನ್ಮೂಲ ಕ್ರೋಡೀಕರಣಕ್ಕೂ ಸಹಕಾರಿಯಾಗುತ್ತದೆ.ಹೇಗೆ ಮಾಡುವುದು?
ಸ್ವಚ್ಛ ಭಾರತ -1ರಲ್ಲಿ ಮನೆ-ಮನೆಗೆ ಕಸ ಸಂಗ್ರಹಿಸುವುದು, ಕಾಂಪೋಸ್ಟ್ ತಯಾರಿಕೆ ಸೇರಿದಂತೆ ಇತರೆ ಕೆಲಸಗಳನ್ನು ಮಾಡಲಾಗುತ್ತಿತ್ತು. ಇದೀಗ ಸ್ವಚ್ಛ ಭಾರತ-2ರಲ್ಲಿ ಮನೆ-ಮನೆಗೆ ಹೋಗಿ ಸಂಗ್ರಹಿಸಿದ ಒಣ ಹಾಗೂ ಹಸಿ ಕಸವನ್ನು ಕಡ್ಡಾಯವಾಗಿ ಪ್ರತ್ಯೇಕಿಸುವುದು. ಹಸಿ ಕಸವನ್ನು ಈಗ ಹೇಗೆ ವಿಲೇವಾರಿ ಮಾಡಲಾಗುತ್ತಿದೆ. ಅದೇ ರೀತಿ ಮುಂದುವರಿಸುವುದಾಗಿದೆ. ಇನ್ನು ಒಣಕಸವನ್ನು ಪ್ರತ್ಯೇಕಿಸುವುದು. ಮರುಬಳಕೆ ಮಾಡಬಹುದಾದ ಪೆಟ್ ಬಾಟಲ್, ಟಿನ್, ಕಾರ್ಡ್‌ಬೋರ್ಡ್, ಮಲ್ಟಿ ಲೇಯರ್ ಪ್ಲಾಸ್ಟಿಕ್ (ಎಂಎಲ್‌ಪಿ) ಉದಾಹರಣೆಗೆ ಪಾರ್ಲೆಜಿ ಸೇರಿದಂತೆ ವಿವಿಧ ಪ್ಯಾಕೆಜಿಂಗ್‌ಗೆ ಬಳಸುವ ಪ್ಲಾಸ್ಟಿಕ್ ಹೀಗೆ ನಾನಾ ಒಣ ಕಸಗಳನ್ನು ಯಂತ್ರಗಳ ಮೂಲಕ ಪ್ರತ್ಯೇಕಿಸುವುದು. ಅವುಗಳನ್ನು ರಿಸೈಕಲ್ ಮಾಡುವಂತಹ ಅಧಿಕೃತ ಏಜೆನ್ಸಿಗಳಿಗೆ ಗುತ್ತಿಗೆ ನೀಡಿ ಅವುಗಳಿಗೆ ಮಾರಾಟ ಮಾಡಿ ಮತ್ತೆ ಬಳಕೆ ಮಾಡುವಂತೆ ಮಾಡುವುದಾಗಿದೆ. ಉದಾಹರಣೆಗೆ ಕಾರ್ಡ್‌ಬೋರ್ಡ್ ಪೇಪರ್ ತಯಾರಿಕೆಗೆ ಬಳಸಬಹುದಾಗಿದೆ. ಅವುಗಳನ್ನು ಅಲ್ಲಿಗೆ ಕಳುಹಿಸುವುದು. ಹೀಗೆ ಮರು ಬಳಕೆ ಮಾಡುವಂತಹ ಘಟಕಗಳಿಗೆ ಕಳುಹಿಸುವುದಾಗಿದೆ.ಎಷ್ಟು ಪಾಲಿಕೆಗಳಿಗೆ ಎಷ್ಟು?
ರಾಜ್ಯದಲ್ಲಿ ಹುಬ್ಬಳ್ಳಿ-ಧಾರವಾಡ, ಮೈಸೂರು, ವಿಜಯಪುರ, ಮಂಗಳೂರು, ಕಲಬುರಗಿ, ದಾವಣಗೆರೆ, ಬೆಳಗಾವಿ, ಬಳ್ಳಾರಿ, ವಿಜಯಪುರ ಹೀಗೆ ಎಂಟು ಮಹಾನಗರ ಪಾಲಿಕೆಗಳಿವೆ. ಹುಬ್ಬಳ್ಳಿ-ಧಾರವಾಡ ಹಾಗೂ ಮೈಸೂರು ಪಾಲಿಕೆಗಳಿಗೆ ತಲಾ 2 ಹಾಗೂ ಉಳಿದ ಆರು ಪಾಲಿಕೆಗೆ ತಲಾ ಒಂದೊಂದು ಎಂಆರ್‌ಎಫ್ ಘಟಕ ತೆರೆಯಲು ಕೇಂದ್ರ ಅಸ್ತು ಎಂದಿದೆ.ಈ ಪೈಕಿ ಕೇಂದ್ರ ಸರ್ಕಾರದ್ದು ಶೇ.33, ರಾಜ್ಯದ್ದು ಶೇ.22 ಹಾಗೂ ಆಯಾ ಪಾಲಿಕೆಗಳದ್ದು ಶೇ.45ರಷ್ಟು ಅನುದಾನ ಬಳಕೆಯಾಗಲಿದೆ. ಈ ಹತ್ತು ಘಟಕಗಳನ್ನು ತೆರೆಯಲು ₹ 107.39 ಕೋಟಿ ತಗುಲಲಿದೆ. ಈ ಪೈಕಿ ₹ 47.41 ಕೋಟಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ್ದಾದರೆ, ₹ 60 ಕೋಟಿ ಮಹಾನಗರ ಪಾಲಿಕೆಗಳು ಭರಿಸಬೇಕಿದೆ.ರಾಜ್ಯ ಸರ್ಕಾರವೂ ಇದೀಗ ವಿಸ್ತ್ರತಾ ಯೋಜನಾ ವರದಿಗಳಿಗೆ ಅನುಮೋದನೆ ನೀಡಿದೆ. ಇದೀಗ ಇದಕ್ಕಾಗಿ ನಿರ್ಮಿಸಲಿರುವ ಸೈಟ್‌ನ ಸ್ಥಿತಿಗತಿ, ಅಲ್ಲಿ ಯಾವ ರೀತಿ ನಿರ್ಮಿಸಲಾಗುತ್ತದೆ ಎಂಬುದರ ಬಗ್ಗೆ ಸಿವಿಲ್ ಕಾಮಗಾರಿ ಕುರಿತಂತೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕು. ಇದು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಾಗಿದೆ. ಇನ್ನು ಇದಕ್ಕೆ ಬೇಕಾದ ಯಂತ್ರೋಪಕರಣಗಳ ಪ್ರಸ್ತಾವನೆಯನ್ನು ರಾಜ್ಯದ ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಬೇಕು.
ಹುಬ್ಬಳ್ಳಿ- ಧಾರವಾಡದ ಕಥೆಯೇನು?:ಇಲ್ಲಿನ ಮಹಾನಗರ ಪಾಲಿಕೆಗೆ 2 ಎಂಆರ್‌ಎಫ್ ಘಟಕ ಮಂಜೂರಾತಿ ಸಿಕ್ಕಿದೆ. ಇದರಲ್ಲಿ ಒಂದು ಹುಬ್ಬಳ್ಳಿಯಲ್ಲಿನ ಡಂಪಿಂಗ್ ಯಾರ್ಡ್‌ನಲ್ಲಿ, ಮತ್ತೊಂದು ಧಾರವಾಡದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಬೇಕಾದ ಸಿದ್ಧತೆ ಪಾಲಿಕೆ ಅಧಿಕಾರಿ ವರ್ಗ ಮಾಡಿಕೊಳ್ಳುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು 6-8 ತಿಂಗಳಲ್ಲಿ ಎಂಆರ್‌ಎಫ್ ಘಟಕ ಪ್ರಾರಂಭವಾಗಲಿವೆ.
ಎಷ್ಟು ಟನ್ ಒಣ ಕಸ?ರಾಜ್ಯದ 8 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿನಿತ್ಯ ಸಂಗ್ರಹವಾಗುವ 1014 ಟನ್ ಒಣಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬಹುದಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ 210 ಟನ್ ಒಣಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬಹುದು ಎಂಬುದು ಸದ್ಯದ ಅಂಕಿ ಸಂಖ್ಯೆಯ ಅಂದಾಜು.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 2 ಎಂಆರ್‌ಎಫ್ ಘಟಕ ಸ್ಥಾಪನೆಗೆ ಸ್ವಚ್ಛ ಭಾರತ-2ರಲ್ಲಿ ಮಂಜೂರಾತಿ ದೊರೆತಿದೆ. ಇದರ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಮಲ್ಲಿಕಾರ್ಜುನ ಹೇಳಿದರು.