ಕನ್ನಡಪ್ರಭ ವಾರ್ತೆ ಮಂಗಳೂರುರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಒಂಬತ್ತನೇ ತಿಂಗಳ ಸ್ವಚ್ಛತಾ ಅಭಿಯಾನಕ್ಕೆ ಭಾನುವಾರ ಕೊಟ್ಟಾರಚೌಕಿಯ ಫ್ಲೈ ಓವರ್ ಪರಿಸರದಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ನೇತೃತ್ವದಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಸಂವಹನ ವಿಭಾಗದ ಪ್ರಧಾನ ವ್ಯವಸ್ಥಾಪಕ ಡಾ. ರುಡಾಲ್ಫ್ ನೊರೊನ್ಹಾ ಹಾಗೂ ಮಹಾನಗರ ಪಾಲಿಕೆಯ ಸದಸ್ಯಕಿರಣ್ ಕೋಡಿಕಲ್ ಹಸಿರು ನಿಶಾನೆ ತೋರುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಡಾ. ರುಡಾಲ್ಫ್ ನೊರೊನ್ಹಾ, ಪ್ರಧಾನಮಂತ್ರಿಗಳ ಸ್ವಚ್ಛ ಭಾರತದ ಕರೆಗೆ ಓಗೊಟ್ಟು, ಧನಾತ್ಮಕ ಚಿಂತನೆಯೊಂದಿಗೆ ಆರಂಭವಾದ ಕಾರ್ಯ ಇಂದು ಬೃಹತ್ ಅಭಿಯಾನವಾಗಿದೆ. ಮಂಗಳೂರು ರಾಮಕೃಷ್ಣ ಮಿಷನ್ ೨೦೧೫ರಲ್ಲಿ ಆರಂಭಿಸಿದ ಸ್ವಚ್ಛ ಮಂಗಳೂರು ಅಭಿಯಾನ ಇಂದಿಗೂ ಹಲವಾರು ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಬೆಳ್ಳಾಲ ಗೋಪಿನಾಥ್ ರಾವ್, ಸಿ.ಎ ಶಿವಕುಮಾರ್, ಕಮಲಾಕ್ಷ ಪೈ, ಶೇಷಪ್ಪ ಅಮೀನ್ ಮತ್ತು ರಂಜನ್ ಬೆಳ್ಳರ್ಪ್ಪಾಡಿ ಇದ್ದರು. ಫ್ಲೈ ಓವರ್ ಕೆಳಭಾಗದ ಪರಿಸರದಲ್ಲಿದ್ದ ಮದ್ಯದ ಬಾಟಲಿಗಳು, ತ್ಯಾಜ್ಯ, ಬಟ್ಟೆ, ಪ್ಲಾಸ್ಟಿಕ್ ಮುಂತಾದ ವಸ್ತುಗಳನ್ನು ಸ್ವಯಂಸೇವಕರು ಸ್ವಚ್ಛಗೊಳಿಸಿದರು. ಮಳೆಯಿಂದಾಗಿ ರಸ್ತೆಯಲ್ಲಿ ಕೊಚ್ಚಿ ಬಂದಿದ್ದ ಮಣ್ಣನ್ನು ತೆರವುಗೊಳಿಸಲಾಯಿತು. ವರ್ಣಚಿತ್ರಕ್ಕೆ ಜೀವಕಳೆ: ರಾಷ್ಟೀಯ ಹೆದ್ದಾರಿಯಿಂದ ಮಂಗಳೂರು ನಗರ ಪ್ರವೇಶ ಪಡೆಯುವ ಕೊಟ್ಟಾರ ಚೌಕಿಯಲ್ಲಿ ೨೦೧೯ ರಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಸಮಾರೋಪದ ಅಂಗವಾಗಿ ಸಂಪೂರ್ಣ ಕೊಟ್ಟಾರ ಚೌಕಿ ಫ್ಲೈ ಓವರ್ ಕೆಳಭಾಗದ ೩೦,೦೦೦ ಚದರ ಅಡಿ ವಿಸ್ತೀರ್ಣದ ಜಾಗವನ್ನು ಅಭಿವೃದ್ಧಿಪಡಿಸಿ ಸುಂದರಿಕರಣಗೊಳಿಸಲಾಗಿತ್ತು. ಕಾಲಾನುಕ್ರಮದಲ್ಲಿ ಇಲ್ಲಿನ ಕಂಬಗಳಲ್ಲಿ ಬಿಡಿಸಲಾಗಿದ್ದ ವರ್ಣಚಿತ್ರದ ಬಣ್ಣಗಳು ಮಾಸಿಹೋಗಿತ್ತು.
ಇದರ ನಿರ್ವಹಣೆಯ ಅವಶ್ಯಕತೆ ಇರುವುದನ್ನು ಮನಗಂಡ ರಾಮಕೃಷ್ಣ ಮಿಷನ್ ಸ್ವಯಂಸೇವಕರ ತಂಡ ಈ ವರ್ಣಚಿತ್ರಗಳನ್ನು ಮರು ಪೈಂಟಿಂಗ್ ಮಾಡುವ ಕಾರ್ಯವನ್ನು ಕೈಗೊಂಡಿತು. ಆದಿತತ್ವ ಆರ್ಟ್ಸ್‌ನ ವಿಕ್ರಂ ಶೆಟ್ಟಿ ನೇತೃತ್ವದ ೨೦ ಕಲಾವಿದರ ತಂಡ, ೭,೦೦೦ ಚದರ ಅಡಿಯ ೧೮ ಫ್ಲೈ ಓವರ್ ಕಂಬಗಳಲ್ಲಿ ‘ವೆಕ್ಟರ್ ಚಿತ್ರ’ ಬಿಡಿಸುವ ಕಾರ್ಯವನ್ನು ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಿದೆ.ರಾಮಕೃಷ್ಣ ಮಿಷನ್ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ಲಾಘನೆ
ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಸಹಕಾರದಲ್ಲಿ ಸುಮಾರು ೫ ಲಕ್ಷ ರು. ವೆಚ್ಚದಲ್ಲಿ ೭,೦೦೦ ಚದರ ಅಡಿಯ ೧೮ ಪಿಲ್ಲರ್‌ಗಳಲ್ಲಿ ವರ್ಣಚಿತ್ರಗಳನ್ನು ಬಿಡಿಸುವ ಮೂಲಕ ಮಂಗಳೂರು ನಗರದ ಪ್ರವೇಶ ದ್ವಾರದಂತಿರುವ ಕೊಟ್ಟಾರ ಚೌಕಿಯ ಫ್ಲೈ ಓವರ್‌ನ ಪಿಲ್ಲರ್‌ಗಳಿಗೆ ಹೊಸ ರೂಪ ನೀಡಿದ ಸ್ವಚ್ಛ ಮಂಗಳೂರು ಅಭಿಯಾನದ ಸ್ವಯಂಸೇವಕರ ಕಾರ್ಯವನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶ್ಲಾಘಿಸಿದ್ದಾರೆ.