ರಾಷ್ಟ್ರೀಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ನ್ಯಾ.ಕೃಷ್ಣ ಶ್ರೀಪಾದ ದೀಕ್ಷಿತ್ ಅಭಿಮತ ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ವರ್ತಮಾನದ ಸನ್ನಿವೇಶದಲ್ಲಿ ಯುವಕರ ಬಗೆಗಿನ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ ಬಗ್ಗೆ 2 ದಿನಗಳ ಕಾಲ ನಡೆದ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಮೇರಿಕಾದ ಚಿಕಾಗೋದಲ್ಲಿ ಭಾಷಣ ಮಾಡಿದ ಸ್ವಾಮಿ ವಿವೇಕಾನಂದರು, ಭಾರತದ ಬಗ್ಗೆ ಬೇರೆ ದೇಶಗಳಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದರು. ಭಾರತವೆಂದರೆ ಜ್ಞಾನದ ನಾಡು ಎನ್ನುವುದು ಅವರ ಪರಿಕಲ್ಪನೆಯಾಗಿತ್ತು. ತುಂಬಾ ಬಡತನದ ಕುಟುಂಬ ಅವರದು. ಜಾತಿಯತೆ ನಿರ್ಮೂಲನೆಯಾಗುವ ತನಕ ಭಾರತದ ಉದ್ದಾರ ಸಾಧ್ಯವಿಲ್ಲ ಎಂದು ವಿವೇಕಾನಂದರು ಹೇಳಿದ್ದನ್ನು ಸ್ಮರಿಸಿಕೊಂಡ ನ್ಯಾಯಾಧೀಶ ಕೃಷ್ಣ ಶ್ರೀಪಾದ ದೀಕ್ಷಿತ್‍ರವರು ರಾಮಾಯಣ, ಮಹಾಭಾರತ, ಸಂವಿಧಾನವನ್ನು ಕೊಡುಗೆಯಾಗಿ ಕೊಟ್ಟವರು ಮೇಲ್ಜಾತಿಯವರಲ್ಲ ಎನ್ನುವ ಜಾಗೃತಿ ಎಲ್ಲರಲ್ಲಿಯೂ ಇರಬೇಕು ಎಂದು ಹೇಳಿದರು. ವಿಕ್ರಮಾದಿತ್ಯನಿಗೆ ಸಲಹೆ ಕೊಟ್ಟವನು ಕಾಳಿದಾಸ. 10 ಉಪನಿಷತ್ತುಗಳಲ್ಲಿ ಮೂರ್ನಾಲ್ಕು ಉಪನಿಷತ್ತುಗಳನ್ನು ಕೊಟ್ಟವರು ಕೆಳಜಾತಿಯವರು. ಸನಾತನ ಧರ್ಮ ಭಾರತೀಯರಿಗೆ ಪೂರಕವಾಗಿದೆ ಎನ್ನುವುದು ಸ್ವಾಮಿ ವಿವೇಕಾನಂದರವರ ಆಶಯವಾಗಿತ್ತು. ಸನಾತನ ಧರ್ಮಕ್ಕೆ ತನ್ನದೆಯಾದ ವೈಶಿಷ್ಠ್ಯತೆಯಿದೆ. ಹಾಗಾಗಿ ಧರ್ಮ ಉಳಿಸಲು ಪ್ರಯತ್ನಿಸುತ್ತೇನೆ. ಮನುಷ್ಯ ತನ್ನಲ್ಲಿರುವ ಕೀಳರಿಮೆಯನ್ನು ಬಿಡಬೇಕೆಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.ಉತ್ಕಷ್ಟವಾದ ಚಿಂತನೆ ಅವರದು. ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅತ್ಯಂತ ಕೆಳ ಸಮುದಾಯದವರು. ಜಾತಿ ನಿರ್ಮೂಲನೆ ಅವರ ಉದ್ದೇಶವಾಗಿತ್ತು. ಆದರೆ ಇಂದಿಗೂ ಜಾತಿ ತಾರತಮ್ಯ ನಿವಾರಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಸರಸ್ವತಿ ಕಾನೂನು ಕಾಲೇಜು ಅಧ್ಯಕ್ಷ ಎಚ್.ಹನುಮಂತಪ್ಪ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಸಿ.ಬಸವರಾಜು, ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ರಾಜ್ಯ ಎನ್.ಎಸ್.ಎಸ್.ಅಧಿಕಾರಿ ಪ್ರತಾಪ್ ಲಿಂಗಯ್ಯ, ಸರಸ್ವತಿ ಕಾನೂನು ಕಾಲೇಜು ಉಪಾಧ್ಯಕ್ಷರಾದ ಫಾತ್ಯರಾಜನ್, ಡಿ.ಕೆ.ಶೀಲಾ, ಎನ್.ಎಸ್.ಎಸ್.ಕೋ-ಆರ್ಡಿನೇಟರ್ ಐ.ಬಿ.ಬೀರಾದರ್, ಸರಸ್ವತಿ ಕಾನೂನು ಕಾಲೇಜು ಪ್ರಾಚಾರ್ಯರಾದ ಡಾ.ಎಂ.ಎಸ್.ಸುಧಾದೇವಿ, ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಜರಿದ್ದರು.