ಸ್ವರ ಸಂಕ್ರಾಂತಿ ಉತ್ಸವ: 15ರಂದು ಗಣೇಶ್, ಕುಮರೇಶ್ ವಯಲಿನ್ ಕಛೇರಿ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಮಂಗಳೂರಿನಲ್ಲಿ ಜ.೧೫ರಂದು ಸ್ವರ ಸಂಕ್ರಾಂತಿ ಉತ್ಸವ ಆಯೋಜಿಸಲಾಗಿದ್ದು, ಚೆನ್ನೈನ ಖ್ಯಾತ ಕಲಾವಿದರಿಂದ ವಯಲಿನ್‌ ಕಛೇರಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಚೆನ್ನೈನ ವಿಶ್ವವಿಖ್ಯಾತ ವಯಲಿನ್ ಕಲಾವಿದ ಸಹೋದರರಾದ ಗಣೇಶ್ ರಾಜಗೋಪಾಲನ್ ಮತ್ತು ಕುಮರೇಶ್ ರಾಜಗೋಪಾಲನ್ ಅವರಿಂದ ಬಹು ನಿರೀಕ್ಷಿತ ದ್ವಂದ್ವ ವಯಲಿನ್ ಕಛೇರಿ ನಗರದ ಪುರಭವನದಲ್ಲಿ ಜ.೧೫ರಂದು ನಡೆಯಲಿದೆ.

ಮಂಗಳೂರಿನ ‘ಕಲಾಶಾಲೆ’, ‘ಸ್ವರಾಲಯ ಸಾಧನಾ ಫೌಂಡೇಶನ್’ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸುತ್ತಿರುವ ‘ಸ್ವರ ಸಂಕ್ರಾಂತಿ ಉತ್ಸವ -೨೪’ ಅಂಗವಾಗಿ ಈ ಸಂಗೀತ ಕಛೇರಿ ನಡೆಯಲಿದೆ. ವಿದ್ವಾನ್ ಅನಂತ ಆರ್. ಕೃಷ್ಣನ್ ಮೃದಂಗದಲ್ಲಿ ಹಾಗೂ ವಿದ್ವಾನ್ ಸುಂದರ ಕುಮಾರ್ ಖಂಜಿರದಲ್ಲಿ ಸಾಥ್ ನೀಡಲಿದ್ದಾರೆ.

‘ಸ್ವರ ರತ್ನ’ ಪ್ರಶಸ್ತಿ:

ಧರ್ಮಸ್ಥಳ ಸಮೀಪದ ನಿಡ್ಲೆಯ ಹೆಸರಾಂತ ವಯಲಿನ್ ವಾದಕ, ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಸಾಧಕ ಮತ್ತು ಗುರು ವಿಠ್ಠಲ ರಾಮಮೂರ್ತಿ ಅವರ ಜೀವಮಾನದ ಸಂಗೀತ ಸೇವೆಯನ್ನು ಪರಿಗಣಿಸಿ ಈ ಬಾರಿಯ ‘ಸ್ವರ ರತ್ನ’ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ರಾಮಮೂರ್ತಿ ಅವರು ನಿಡ್ಲೆಯ ಅವರ ಮೂಲ ಮನೆಯಲ್ಲಿ ಕಳೆದ 20 ವರ್ಷಗಳಿಂದ ಗುರುಕುಲ ಮಾದರಿಯಲ್ಲಿ ಸಂಪೂರ್ಣ ಉಚಿತವಾಗಿ ‘ಕರುಂಬಿತ್ತಿಲ್ ಶಿಬಿರ’ ಎಂಬ ಸಂಗೀತ ಶಿಬಿರ ನಡೆಸುತ್ತಿದ್ದಾರೆ. ಅವರ ಸಂಗೀತ ಸಾಧನೆಯನ್ನು ಗೌರವಿಸಿ ಇತ್ತೀಚೆಗೆ ಅಮೆರಿಕದ ಟೇಂಪಿ ಅರಿಜೋನಾ ನಗರದಲ್ಲಿ ನವೆಂಬರ್ 5ನ್ನು ‘ವಿಠ್ಠಲ ರಾಮಮೂರ್ತಿ ದಿನ’ ಎಂದು ಘೋಷಿಸಲಾಗಿದೆ.

ಇದೇ ಸಂದರ್ಭದಲ್ಲಿ ಕರಾವಳಿ ಕರ್ನಾಟಕದ ಮೂವರು ಹಿರಿಯ ಸಂಗೀತ ಗುರುಗಳಾದ ವಿದ್ವಾನ್ ನಾಗೇಶ್ ಎ. ಬಪ್ಪನಾಡು, ವಿದುಷಿ ಪ್ರತಿಭಾ ಸಾಮಗ ಹಾಗೂ ವಿದ್ವಾನ್ ಯು. ಜಿ. ನಾರಾಯಣ ಶರ್ಮ ಕುಂಬ್ಳೆ ಅವರಿಗೆ ‘ಸ್ವರ ಸಾಧನಾ ಪ್ರಶಸ್ತಿ- ೨೪’ ನೀಡಿ ಗೌರವಿಸಲಾಗುವುದು.

ಸ್ವರ ಸಂಕ್ರಾಂತಿ ಉತ್ಸವಕ್ಕೆ ಸಂಗೀತಾಸಕ್ತರಿಗೆ ಮುಕ್ತ ಪ್ರವೇಶವಿದೆ. ಮಧ್ಯಾಹ್ನ 2ರಿಂದ ‘ಸ್ವರಾಲಯ’ದ 50 ವಿದ್ಯಾರ್ಥಿಗಳಿಂದ ವಯಲಿನ್ ಕಛೇರಿ ನಡೆಯಲಿದೆ. ಸಂಜೆ ೪ರಿಂದ ಗಣೇಶ್, ಕುಮರೇಶ್ ಅವರ ಕಛೇರಿ ಪ್ರಾರಂಭವಾಗಲಿದೆ. ಆಸಕ್ತರು ಮುಂಚಿತವಾಗಿ ನಿಗದಿತ ಉಚಿತ ಪಾಸ್ ಪಡೆದುಕೊಂಡು ಸಂಗೀತ ಕಛೇರಿ ಆರಂಭವಾಗುವ ಮೊದಲೇ ಆಸೀನರಾಗಲು ಕೋರಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಹಾಗೂ ಉಚಿತ ಪಾಸ್ ಗಳಿಗಾಗಿ +೯೧ ೮೦೯೫೩ ೪೨೪೨೪ ಸಂಪರ್ಕಿಸಬಹುದು ಎಂದು ಸ್ವರಾಲಯ ಸಾಧನಾ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ವಿಶ್ವಾಸ್ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article