ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಸಲಾಗುವ ನರಸಿಂಹ ಜಯಂತಿ ಹಿನ್ನೆಲೆಯಲ್ಲಿ ರಥೋತ್ಸವ ಭಕ್ತಿ-ಭಾವದಲ್ಲಿ ಸೋಮವಾರ ಬೆಳಗಿನ ಜಾವದ ವೇಳೆಗೆ ಸಂಪೂರ್ಣಗೊಂಡಿತು.
ಕಲ್ಪೋಕ್ತ ಮಹಾ ಪೂಜೆ, ಮಹಾ ಮಂಗಳಾರತಿ, ೧೨ ಗಂಟೆಗೆ ಮಹಾರಥೋತ್ಸವಕ್ಕೇ ದೇವರನ್ನು ಪಲ್ಲಕ್ಕಿಯ ಮೇಲೆ ಮೆರವಣಿಗೆಯ ಮೂಲಕ ಚಂಡೆ, ವೇದಘೋಷ, ವಾಲಗಗಳ ಮೂಲಕ ಒಯ್ದು ತಡರಾತ್ರಿ ೧೨:೪೫ಕ್ಕೆ ಮಹಾರಥದಲ್ಲಿ ದೇವರ ಸ್ಥಾಪನೆ ನಡೆಯಿತು.
ರಥ ಬೀದಿಯಲ್ಲಿ ಸಿಂಗಾರಗೊಂಡ ರಥದಲ್ಲಿ ಶ್ರೀದೇವರನ್ನು ರಥಾರೂಢಗೊಳಿಸುವಾಗ ಭಕ್ತರು ಹರ್ಷೊದ್ಗಾರ ನಡೆಸಿದರು. ಶ್ರೀಗಳ ಕರಕಮಲಗಳಿಂದ ಪೂಜೆ ನಡೆಯಿತು. ರಥದ ಗಾಲಿಪೂಜೆ, ರಥ ಕಾಣಿಕೆ ಸಲ್ಲಿಕೆ ಬಳಿಕ ನಡು ರಾತ್ರಿ ೧ ಗಂಟೆ ವೇಳೆಗೆ ಭಕ್ತರಿಂದ ರಥ ಎಳೆಯುವ ಕಾರ್ಯಕ್ರಮ ನಡೆಯಿತು. ಯತಿಗಳು ರಥವನ್ನು ಅನುಸರಿಸಿ ಸಾಗಿದರು. ರಥವೇರಿದ ಭಗವಂತ ಆಗಮಿಸುವ ದೃಶ್ಯವನ್ನು ಭಕ್ತರು ಇಕ್ಕೆಲದಲ್ಲಿ ನಿಂತು ಕಣ್ತುಂಬಿಕೊಂಡರು.ರಥೋತ್ಸವದ ಬಳಿಕ ಅಷ್ಟಾವಧಾನ ಸೇವೆಯನ್ನು ಸ್ವೀಕರಿಸಿ ದೇವರು ಮತ್ತೆ ಗರ್ಭಗುಡಿಗೆ ೨:೩೦ರ ಪ್ರವೇಶಿಸಿದನು. ಶ್ರೀಮಠದಲ್ಲಿ ಮುಂಜಾನೆ ನೃಸಿಂಹ ಹವನ, ಇತರ ಪೂಜೆಗಳು ಕೂಡ ನಡೆದವು. ಎ.೩೦ರಿಂದಲೇ ರಥೋತ್ಸವದ ಸಂಬಂಧಿ ಧಾರ್ಮಿಕ ಕಾರ್ಯಗಳು ಆರಂಭವಾಗಿದ್ದವು.
ರಥದ ನಿರ್ಮಾಣ ಕಾರ್ಯವನ್ನು 15 ದಿನಗಳ ಕಾಲ ಸೋಂದಾದ ಮುಸ್ಲಿಂ ಸಮುದಾಯವದರು ಭಕ್ತಿ ಭಾವದಲ್ಲಿ ನಡೆಸಿಕೊಂಡು ಬಂದಿದ್ದು, ರಥೋತ್ಸವದ ಯಶಸ್ಸಿಗೆ ಸಹಕಾರಿ ಆಯಿತು.
ಬಾಕ್ಸ್:
ಭಾರತ ಪಾಕಿಸ್ತಾನದ ನಡುವಿನ ಯುದ್ಧದ ಕಾರಣದಿಂದ ನರಸಿಂಹ ದೇವರ ರಥೋತ್ಸವ ವೇಳೆ ಸುಡುಮದ್ದು ಪ್ರದರ್ಶನ ಕೈ ಬಿಡಲಾಗಿದೆ.
ಇನ್ನು ಸ್ವರ್ಣವಲ್ಲೀ ಮಠದ ಗುರುಗಳ ಪರಂಪರೆಯಲ್ಲಿ ನಿತ್ಯ ಅನುಷ್ಠಾನವೂ ಹೆಚ್ಚು. ನರಸಿಂಹ ಜಯಂತಿಗೆ ಬಿಡುವೇ ಇಲ್ಲದಷ್ಟು ಧಾರ್ಮಿಕ ಕಾರ್ಯಕ್ರಮಗಳು. ಈ ಮಧ್ಯೆ ಎರಡು ದಿನಗಳ ಕೃಷಿ ಜಯಂತಿ. ಈ ಒತ್ತಡಗಳ ಮಧ್ಯೆಯೂ ವಿಶ್ರಾಂತಿ ಮಾಡದೇ ಧಾರ್ಮಿಕ ಹಾಗೂ ಸಾಮಾಜಿಕ ಬದ್ಧತೆಯ ದ್ಯೋತಕವಾಗಿ ಶ್ರೀಗಳು ಕಂಡು ಬಂದರು. ದೇವರ ಕೈಂಕರ್ಯದಲ್ಲಿ ನಿಷ್ಠೆಯಲ್ಲಿ ತೊಡಗಿಕೊಂಡ ಶ್ರೀಗಳು ನಮ್ಮ ಭಾಗ್ಯ ಎಂಬ ಭಕ್ತಿಯ ಉದ್ಗಾರ ಶಿಷ್ಯರಲ್ಲಿ ವ್ಯಕ್ತವಾದವು.