ಕನ್ನಡಪ್ರಭ ವಾರ್ತೆ ಮೈಸೂರು
ಶಾಲಾ ಪಠ್ಯಪುಸ್ತಕದ ಸಂಕೀರ್ಣ ವಿಷಯಗಳನ್ನೂ ರಂಗರೂಪಕ್ಕೆ ಅಳವಡಿಸಿ ಕಲಿಕೆ ಉಂಟುಮಾಡಿದರೆ, ಅದರಿಂದ ವಿಷಯ ಕರಗತವಾಗುತ್ತದೆ. ಪರಿಣಾಮಕಾರಿ ಕಲಿಕೆಯು ಚೇತೋಹಾರಿ ಮತ್ತು ಪರಿಣಾಮಕಾರಿಯಾಗುತ್ತದೆ ಎಂದು ಸಾಹಿತಿ ಹಾಗೂ ಸಂಘಟಕ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.ರಾಜೇಂದ್ರನಗರದಲ್ಲಿರುವ ಶ್ರೀ ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಬುಧವಾರ ಆರಂಭವಾದ ಎರಡು ದಿನಗಳ ''''''''ಬೋಧನೆಯಲ್ಲಿ ನಾಟಕ ಮತ್ತು ಕಲೆ'''''''' ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕ ಅತ್ಯಂತ ಆಕರ್ಷಕವಾದ ಜೀವಂತಿಕೆಯ ಪ್ರಬಲಮಾಧ್ಯಮ.ವೇಷಭೂಷಣ, ಸಂಭಾಷಣೆ, ಸಂಗೀತ, ನಟನೆ ನೋಡುಗರ ಮೇಲೆ ಅಪಾರ ಪ್ರಭಾವ ಬೀರುತ್ತವೆ. ಇಂತಹ ನಾಟಕ ಮಾಧ್ಯಮದ ಮೂಲಕ ಮಕ್ಕಳಿಗೆ ರಂಜನೆ ಮತ್ತು ಕಲಿಕೆ ಎರಡನ್ನೂ ಕೊಡಲು ಸಾಧ್ಯವಿದೆ ಎಂದರು.ನವೀನ ಮಾದರಿಯ ಕಲಿಕೆಯ ತಂತ್ರ ಮತ್ತು ಮಾಧ್ಯಮಗಳನ್ನು ಶಿಕ್ಷಕರು ಆವಿಷ್ಕಾರ ಮಾಡಬೇಕು. ಆಗ ಮಾತ್ರ ಬೋಧನೆಯ ಏಕತಾನತೆಯಿಂದ ಹೊರಬರಲು ಸಾಧ್ಯ. ನಾಟಕ, ಸಂಗೀತ, ಕಲೆ, ಸಾಹಿತ್ಯದಂತಹ ಸಹಪಠ್ಯದ ಮೂಲಕವೂ ಪಠ್ಯದ ಕಲಿಕೆಯನ್ನೂ ಸೃಜನಾತ್ಮಕವಾಗಿ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.
ಮೈಸೂರು ನಗರ ರಂಗ ಚಟುವಟಿಕೆಗಳ ಕ್ರಿಯಾಶೀಲ ತವರು. ಇಲ್ಲಿ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ನಡೆದು ರಂಗಾಸಕ್ತರಿಗೆ ರಂಜನೆ ನೀಡುತ್ತಿವೆ. ಮುಂದೆ ಶಿಕ್ಷಕರಾಗಲಿರುವ ಪ್ರಶಿಕ್ಷಣಾರ್ಥಿಗಳು ರಂಗಾಯಣವೂ ಸೇರಿದಂತೆ ಇತರೆಡೆ ನಡೆಯುವ ರಂಗ ಪ್ರದರ್ಶನಗಳ ವೀಕ್ಷಿಸುವ ಸದಭಿರುಚಿ ಬೆಳೆಸಿಕೊಂಡರೆ, ಮುಂದಿನ ಕಲಿಕಾ ವೃತ್ತಿ ಬದುಕಿಗೆ ಸಹಕಾರಿಯಾಗಲಿಯೆಂದು ತಿಳಿಸಿದರು.ಪ್ರಾಂಶುಪಾಲ ಅಂತೋಣಿ ಪಾಲ್ ರಾಜ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ಎಸ್. ಸುಮಾ, ವಿಜ್ಞಾನ ಸಹಾಯಕ ಪ್ರಾಧ್ಯಾಪಕಿ ಪಲ್ಲವಿ, ಇತಿಹಾಸ ಸಹಾಯಕ ಪ್ರಾಧ್ಯಾಪಕ ಆರ್. ಉಮೇಶ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಪ್ರಶಿಕ್ಷಣಾರ್ಥಿಗಳಿಂದ ಕುರುಕ್ಷೇತ್ರ ನಾಟಕ ಪ್ರದರ್ಶನ ನಡೆಯಿತು.