ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ರೈತ ಮಂಜಪ್ಪ ಸಿರಿಗೇರಿ ನರೇಗಾ ಯೋಜನೆಯಡಿ ತೈವಾನ್ ಮಾದರಿಯ ಪೇರಲು ಬೆಳೆದು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾನೆ. ಕೈಹಿಡಿದ ಪೇರಲ: ಮಂಜಪ್ಪನು ಈ ಹಿಂದೆ ತನ್ನ ಒಂದು ಎಕರೆ ಜಮೀನಿನಲ್ಲಿ ಹತ್ತಿ ಅಥವಾ ಮೆಕ್ಕೆಜೋಳ ಬೆಳೆಯನ್ನು ಬೆಳೆಯುತ್ತಿದ್ದನು. ಇದರಿಂದ ವರ್ಷಕ್ಕೆ ಕೇವಲ 30 ರಿಂದ 40 ಸಾವಿರ ರು. ಆದಾಯ ಗಳಿಸುತ್ತಿದ್ದನು. ಆದರೆ ಒಂದು ವರ್ಷದ ಹಿಂದೆ ಗ್ರಾಮ ಪಂಚಾಯಿತಿಯವರ ಮಾರ್ಗದರ್ಶನದಂತೆ ತೋಟಗಾರಿಕೆ ಇಲಾಖೆಯವರ ತಾಂತ್ರಿಕ ಮಾರ್ಗದರ್ಶನದಲ್ಲಿ ತನ್ನ ಒಂದು ಎಕರೆ ಜಮೀನಿನಲ್ಲಿ ಪೈಲ್ವಾನ್ ಮಾದರಿಯ 500 ಪೇರಲ ಸಸಿಗಳನ್ನು ನಾಟಿ ಮಾಡಿದ್ದನು. ಅದೀಗ ಸಮೃದ್ಧವಾಗಿ ಬೆಳೆದು ಬರಪೂರ ಫಲ ನೀಡುತ್ತಿದೆ. ಅದು ವರ್ಷದಲ್ಲಿ ಎರಡು ಬಾರಿ ಫಲ ನೀಡುತ್ತಿದ್ದು ಈಗಾಗಲೇ ಸುಮಾರು 60 ಬಾಕ್ಸ್ ಪೇರಲವನ್ನು ಪ್ರತಿ ಬಾಕ್ಸಿಗೆ ಐದು ನೂರು ರು.ಗಳಂತೆ ಮಾರಾಟ ಮಾಡಿದ್ದಾರೆ. ಅದು ಕೂಡ ಮಾರಾಟಗಾರರು ಹೊಲಕ್ಕೆ ಬಂದ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಬೆಳೆದ ಫಸಲನ್ನು ಮಾರುಕಟ್ಟೆಗೆ ಸಾಗಿಸುವ ಪ್ರಯಾಸವೂ ತಪ್ಪಿದಂತಾಗಿದೆ. ಪೇರಲ ಬೆಳೆಯಿಂದ ಈಗಾಗಲೇ ಸುಮಾರು ರು. 30 ಸಾವಿರ ಆದಾಯ ಬಂದಿದ್ದು ಇನ್ನೂ ರು.40 ಸಾವಿರ ಆದಾಯದ ನಿರೀಕ್ಷೆಯಿದೆ. ವರ್ಷದಲ್ಲಿ ಒಂದು ಬೆಳೆಗೆ ಸುಮಾರು ಖರ್ಚು ವೆಚ್ಚ ತೆಗೆದು 60 ರಿಂದ 70 ಸಾವಿರ ಆದಾಯ ಗಳಿಸಲು ಸಾಧ್ಯವಾಗಿದೆ. ರೋಗ ನಿಯಂತ್ರಣಕ್ಕೆ ಸೋಲಾರ್ ಅಳವಡಿಕೆ: ಒಂದು ಎಕರೆ ವಿಸ್ತೀರ್ಣಕ್ಕೆ ಬೇಕಾದ ಸುಮಾರು 5 ಸಾವಿರ ರು.ವೆಚ್ಚದಲ್ಲಿ ಸೋಲಾರ್ ಖರೀದಿಸಿ ರಾತ್ರಿಯ ಸಮಯದಲ್ಲಿ ಕಾಯಿ ಕೊರೆಯುವ ಹುಳು ನಿಯಂತ್ರಿಸಲು ಪತಂಗ ಆಕರ್ಷಣೆಯ ಬುಟ್ಟಿಯನ್ನು ಅಳವಡಿಸಿದ್ದಾರೆ. ಇದರಿಂದ ಚುಕ್ಕೆ ಅಥವಾ ಕಾಯಿಕೊರಕ ಮುಂತಾದ ರೋಗದ ಬಾಧೆಯಿಂದ ಪೇರಲ ಗಿಡ ಮತ್ತು ಹಣ್ಣುಗಳು ಮುಕ್ತವಾಗಿವೆ. ಹೀಗಾಗಿ ರಸಾಯನಿಕ ಸಿಂಪಡಣೆಯ ಖರ್ಚು ಕಡಿಮೆಯಾಗಿದ್ದು, ಸಂಪೂರ್ಣವಾಗಿ ಸಾವಯವ ಗೊಬ್ಬರದಲ್ಲಿ ಪೇರಲ ಬೆಳೆಯಲಾಗಿದೆ. ರೈತರು ನರೇಗಾ ಯೋಜನೆಯಡಿ ಬಹುವಾರ್ಷಿಕ ಪೇರಲು ಬೆಳೆದರೆ ಆರ್ಥಿಕವಾಗಿ ಸುಧಾರಣೆಯಾಗಲು ಸಾಧ್ಯ. ಕೇವಲ ಒಂದು ಎಕರೇ ಜಮೀನಿನಲ್ಲಿ ಪೇರಲ ಬೆಳೆದಿದ್ದು ವರ್ಷಕ್ಕೆ ಎರಡು ಬಾರಿ ಫಸಲು ಬಂದರೆ ಸುಮಾರು ಒಂದು ಲಕ್ಷದವರೆಗೆ ಆದಾಯ ಬರುತ್ತದೆ ಎಂದು ಸುಣಕಲ್ಲಬಿದರಿ ರೈತ ಮಂಜಪ್ಪ ಸಿರಿಗೇರಿ ಹೇಳುತ್ತಾರೆ.