- ಜಗಳೂರು ತಾಲೂಕು ರೈತ ಸಂಘ, ಹಸಿರು ಸೇನೆ ಪ್ರತಿಭಟನೆಯಲ್ಲಿ ಚಿಕ್ಕಮಲ್ಲನಹೊಳೆ ಚಿರಂಜೀವಿ ಒತ್ತಾಯ - - -
ಕನ್ನಡಪ್ರಭ ವಾರ್ತೆ ಜಗಳೂರುರಸಗೊಬ್ಬರ ಬೆಲೆ ಏರಿಕೆ, ಬಿತ್ತನೆ ಬೀಜಗಳ ಬೆಲೆ ಏರಿಕೆಗೆ ಖಂಡನೆ ಹಾಗೂ ಅಧಿಕ ಬೆಲೆಗೆ ಮಾರಾಟ ಮೂಲಕ ಕೃತಕ ಅಭಾವ ಸೃಷ್ಟಿಸುತ್ತಿರುವ ಮಾರಾಟಗಾರರ ವಿರುದ್ಧ ಮೊಕದ್ದಮೆ ದಾಖಲಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವನಹಳ್ಳಿ ಮಂಜುನಾಥ್ ಬಣದ ತಾಲೂಕು ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಚಿಕ್ಕಮಲ್ಲನಹೊಳೆ ಚಿರಂಜೀವಿ ಮಾತನಾಡಿ, ಜಗಳೂರು ತಾಲೂಕು ಶಾಶ್ವತ ಬರಗಾಲಪೀಡಿತ ಪ್ರದೇಶ ಹಾಗೂ ರಾಜ್ಯದಲ್ಲಿಯೇ ಎರಡನೇ ಅತಿ ಹಿಂದುಳಿದ ಪ್ರದೇಶವೆಂದು ಸರ್ಕಾರದಿಂದಲೇ ಘೋಷಿತಗೊಂಡಿದೆ. ಇಂಥ ಸಂದರ್ಭದಲ್ಲೂ ರಸಗೊಬ್ಬರ, ಬಿತ್ತನೆ ಬೀಜಗಳು ಬೆಲೆ ಏರಿಕೆ ಖಂಡನೀಯ. ರಸಗೊಬ್ಬರ, ಬಿತ್ತನೆ ಬೀಜ ಕಳೆದ ವರ್ಷದ ದರದಲ್ಲಿಯೇ ಮಾರಾಟ ಮಾಡಬೇಕು ಎಂದರು.ಡಿಎಪಿ ಗೊಬ್ಬರ ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಸರಳವಾಗಿ ದೊರೆಯುವಂತೆ ಮಾಡಬೇಕು, ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಮಾರಾಟವಾಗಬೇಕು. ಬಿತ್ತನೆ ಬೀಜ, ರಸಗೊಬ್ಬರಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುವ ಮತ್ತು ಕೃತಕ ಅಭಾವ ಸೃಷ್ಟಿಸುವ ಮಾರಾಟಗಾರರ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಇಲ್ಲವಾದಲ್ಲಿ ಸಂಘದಿಂದ ದೊಡ್ಡಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ದಿಬ್ಬದಹಳ್ಳಿ ಗಂಗಾಧರಪ್ಪ, ಜಿಲ್ಲಾಧ್ಯಕ್ಷ ಕಾನನಕಟ್ಟೆ ತಿಪ್ಪೇಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಗುರುಸಿದ್ದಪ್ಪ, ಕಾಸವನಹಳ್ಳಿ ನಾಗರಾಜ್, ಸತೀಶ್, ತಾಯಿಟೋಣಿ ಸಹದೇವ ರೆಡ್ಡಿ, ಎಂ.ಶರಣಪ್ಪ, ಯರಲಕಟ್ಟೆ ಕೆಂಚಪ್ಪ, ತಿಪ್ಪೇಸ್ವಾಮಿ, ಪರಸಪ್ಪ, ರಂಗಪ್ಪ, ತಿಪ್ಪೇಸ್ವಾಮಿ, ಸೇರಿದಂತೆ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.- - -
(ಬಾಕ್ಸ್) * ಯೂರಿಯಾ ಕೊಡುವುದಿಲ್ಲಂಬ ಬೆದರಿಕೆ: ರಾಜು ಅಸಮಾಧಾನ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು ಮಾತನಾಡಿ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಮತ್ತು ಬೆಳೆಗೆ ತಗುಲುವ ರೋಗಬಾಧೆಗಳಿಂದಾಗಿ ತಾಲೂಕಿನ ರೈತರು ಬೆಳೆದ ಬೆಳೆ ಕೈಗೆ ಬಾರದಂತಾಗಿ ಹಪಹಪಿಸುತ್ತಿದ್ದಾರೆ. ಸರಿಯಾದ ಬೆಂಬಲ ಬೆಲೆ ಕೂಡ ಸಿಗದೇ ರೈತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಮಾರಾಟಗಾರರು ಜಿಂಕ್ ಮುಂತಾದ ರಾಸಾಯನಿಕ ಗೊಬ್ಬರ ತೆಗೆದುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದು, ಅವುಗಳನ್ನು ತೆಗೆದುಕೊಳ್ಳದೇ ಇದ್ದರೆ ಯೂರಿಯಾ ಗೊಬ್ಬರವೇ ಕೊಡುವುದಿಲ್ಲ ಎಂಬ ಬೆದರಿಕೆ ಹಾಕುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಕೃಷಿ ಇಲಾಖೆ ಅಧಿಕಾರಿಗಳು, ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕಿಡಿಕಾರಿದರು. ಶೀಘ್ರ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಲು ಆಗ್ರಹಿಸಿದರು.- - -
-೦೯ಜೆಎಲ್ಆರ್೦೧:ರಸಗೊಬ್ಬರ ಬೆಲೆ ಏರಿಕೆ, ಬಿತ್ತನೆ ಬೀಜ ಬೆಲೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವನಹಳ್ಳಿ ಮಂಜುನಾಥ್ ಬಣದ ತಾಲೂಕು ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.