- ಹಿಂದು ಸಂಘಟನೆಗಳ ಪ್ರತಿಭಟನೆಯಲ್ಲಿ ಮುಖಂಡರ ಒತ್ತಾಯ । ಮಠಾಧೀಶರು ಮಠ, ಮಂದಿರದಿಂದ ಹೊರಬಂದು ದನಿಯೆತ್ತಲು ಒತ್ತಾಯ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಸಂಸತ್ತಿನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದು ಧರ್ಮವನ್ನು, ಹಿಂದುಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ, ದ್ದನ್ನು ಖಂಡಿಸಿ ಹಿಂದು ಸಂಘಟನೆಗಳ ಒಕ್ಕೂಟ ಹಾಗೂ ಶ್ರೀ ಗೋವರ್ಧನ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿಯಿಂದ ವಸಂತ ಚಿತ್ರ ಮಂದಿರ, ರೈಲ್ವೆ ಕೆಳಸೇತುವೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಉಪವಿಭಾಗಾಧಿಕಾರಿ ದುರ್ಗಾಶ್ರೀ ಮುಖಾಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಅರ್ಪಿಸಿದರು.
ಹಿಂದುಪರ ಸಂಘಟನೆಗಳ ಹಿರಿಯ ಮುಖಂಡ ಎಂ.ಪಿ.ಕೃಷ್ಣಮೂರ್ತಿ ಪವಾರ್ ಮಾತನಾಡಿ, ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದು ಧರ್ಮ ಹಾಗೂ ಹಿಂದುಗಳನ್ನು ಅವಮಾನಿಸಿದ್ದಾರೆ. ಇದು ಅಕ್ಷಮ್ಯ. ಹಿಂದು ಧರ್ಮ, ಹಿಂದು ಧರ್ಮೀಯರನ್ನು ಹಿಂಸಕರು ಎಂಬುದಾಗಿ ರಾಹುಲ್ ಗಾಂಧಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ, ಆ ಸ್ಥಾನಕ್ಕೆ ಗೌರವ ಬರುವಂತೆ ವರ್ತನೆ ಮೈಗೂಡಿಸಿಕೊಳ್ಳಬೇಕು. ಮೂವರು ಪ್ರಧಾನಿಗಳನ್ನು ದೇಶಕ್ಕೆ ನೀಡಿದ ಕುಟುಂಬದ ರಾಹುಲ್ ಗಾಂಧಿ ಅವರಿಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದರು.
ಮುಖಂಡರಾದ ಎಸ್‌ಒಜಿ ಕಾಲನಿ ಹನುಮಂತಪ್ಪ ಮಾತನಾಡಿ, ಚುನಾವಣೆ ವೇಳೆ ಮಠ ಮಂದಿರಗಳಿಗೆ ಭೇಟಿ ನೀಡಿ, ನಂತರ ಹಿಂದು ದೇವರು, ಹಿಂದುಗಳನ್ನು ಅವಮಾನಿಸುವ ಕೆಲಸ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರ ಗುಣವಾಗಿದೆ. ರಾಹುಲ್ ಹಿಂದುಗಳಿಗೆ ಅವಮಾನಿಸಿದ್ದಾರೆ. ನಾವು ಶಕ್ತಿ ದೇವತೆಯ ಆರಾಧಕರು, ನವ ದುರ್ಗೆಯ ಆರಾಧಕರು. ಪರಶುರಾಮರ ಆರಾಧನೆ ಮಾಡುವವರು. ಎಲ್ಲ ದೇವತೆಗಳು ಉಗ್ರಸ್ವರೂಪ ಕಂಡರೂ, ಹಿಂದು ಧರ್ಮದಲ್ಲಿ ಎಲ್ಲಿಯೂ ಹಿಂದೆ ಕಾಣದು. ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷೆಯ ಸಂಕೇತ ಇದಾಗಿದೆ ಎಂದರು.ಸಂತೋಷಕುಮಾರ ಪೈಲ್ವಾನ್, ಹಿರಿಯ ಮುಖಂಡರಾದ ಮಾಲತೇಶ ಗುಪ್ತ, ಗೋಪಾಲರಾವ್ ಸಾವಂತ್, ರವೀಂದ್ರ ಮಟ್ಟಿಕಲ್, ಚೇತನ್ ಕನ್ನಡಿಗ, ಗಾಂಧಿ ನಗರ ಶಿವಮೂರ್ತೆಪ್ಪ, ಶಿವಳ್ಳಿ ರಂಗಪ್ಪ ಗಾಂಧಿ ನಗರ, ಹುಲಿ ಕುಂಟಪ್ಪ ಮೇದಾರ್, ರಾಮನಗರ ರಾಜು, ಕೆ.ಎಚ್.ಹನುಮಂತಪ್ಪ, ಶ್ರೀಕಾಂತ ಮಲ್ಕಪ್ಪ ಕಾಕಿ, ಎಸ್.ಎಸ್.ಬಸವರಾಜ, ಪರಶುರಾಮ, ಶರತ್, ಶಿವಕುಮಾರ, ಚಂದ್ರಪ್ಪ, ರಾಮನಗರ ಮಲ್ಲೇಶ, ರಾಜು ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.
- - - ಹಿಂದು ಧರ್ಮದ ಇತಿಹಾಸವೇ ಗೊತ್ತಿಲ್ಲದ ರಾಹುಲ್ ಗಾಂಧಿ ಬಾಲಿಶ ಮಾತುಗಳನ್ನಾಡಿದ್ದಾರೆ. ರಾಹುಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಾಧು, ಸಂತರು ಮಠ, ಮಂದಿರಗಳಿಂದ ಹೊರಬಂದು ರಾಹುಲ್ ಗಾಂಧಿ ವಿರುದ್ಧ ಧ್ವನಿ ಎತ್ತಬೇಕು. ಧರ್ಮ, ಹಿಂದು ಧರ್ಮ, ಹಿಂದು ಭಕ್ತರೇ ಇಲ್ಲದಿದ್ದರೆ ಯಾವುದೇ ಮಠಗಳಾಗಲೀ, ಸ್ವಾಮೀಜಿಗಳಾಗಲಿ ಇರುವುದಿಲ್ಲ- ಹನುಮಂತಪ್ಪ, ಮುಖಂಡ
- - - ಹಿಂದುಗಳು ಶಾಂತಿಪ್ರಿಯರು. ಹಿಂದು ಧರ್ಮದ ಯಾರೊಬ್ಬರೂ ಬಾಂಬ್ ಹಾಕುವವರಲ್ಲ. ಬಾಂಬ್ ತಯಾರಿಸುವವರು ಅಲ್ಲ. ಕಲ್ಲು ತೂರಾಟ ನಡೆಸುವವರೂ ಆಗಿಲ್ಲ. ಆದರೆ, ಎರಡು ಮುಖಗಳ ನಿಲುವನ್ನು ಹೊಂದಿರುವ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಿಂದು ದೇವರು, ಹಿಂದು ಧರ್ಮ, ಹಿಂದುಗಳ ಬಗ್ಗೆ ಅವಮಾನಿಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ಅದೇ ಹಿಂದುಗಳನ್ನು ಹೀಯಾಳಿಸುವುದು ರಾಹುಲ್ ಗಾಂಧಿಗೆ ಪರಿಪಾಠವಾಗಿದೆ- ಎಂ.ಪಿ.ಕೃಷ್ಣಮೂರ್ತಿ ಪವಾರ್, ಮುಖಂಡ
- - - -8ಕೆಡಿವಿಜಿ1, 2:ಸಂಸತ್ತಿನಲ್ಲಿ ಹಿಂದು ದೇವರು, ಧರ್ಮ, ಹಿಂದುಗಳನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವಮಾನಿಸಿದ್ದಾರೆಂದು ಆರೋಪಿಸಿ ದಾವಣಗೆರೆಯಲ್ಲಿ ಸೋಮವಾರ ಹಿಂದು ಸಂಘಟನೆಗಳ ಒಕ್ಕೂಟ, ಶ್ರೀ ಗೋವರ್ಧನ ಸಮಿತಿಯಿಂದ ಪ್ರತಿಭಟಿಸಿ, ಎಸಿ ದುರ್ಗಾಶ್ರೀ ಮುಖಾಂತರ ರಾಷ್ಟ್ರಪತಿಗೆ ಮನವಿ ಅರ್ಪಿಸಲಾಯಿತು.