ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯ ಶಾಸಕ ಸೂಚನೆ
ಕನ್ನಡಪ್ರಭ ವಾರ್ತೆ ಕುಷ್ಟಗಿಪಟ್ಟಣದ ಮೂರನೇ ವಾರ್ಡ್‌ಗೆ ತಹಸೀಲ್ದಾರರು, ಪುರಸಭೆಯ ಮುಖ್ಯಾಧಿಕಾರಿಗಳು, ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಸರ್ವೆ ಅಧಿಕಾರಿಗಳು ಭೇಟಿ ನೀಡಿ ನಿವಾಸಿಗಳ ಮನವೊಲಿಸುವ ಮೂಲಕ ರಾಜಕಾಲುವೆಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಸರ್ಕ್ಯೂಟ್ ಹೌಸಿನಲ್ಲಿ ನಡೆದ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಮೂರನೇ ವಾರ್ಡಿನ ನಿವಾಸಿಗಳು ಅನೇಕ ವರ್ಷಗಳಿಂದ ಈ ಸಮಸ್ಯೆ ಅನುಭವಿಸುತ್ತಿದ್ದು, ಶೀಘ್ರದಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದರು.ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೆಲವರು ಬೈಕುಗಳನ್ನು ಹಾಗೂ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಬಿಟ್ಟು ಹೋಗುತ್ತಿದ್ದು, ಟ್ರಾಫಿಕ್ ಜಾಮ್ ನಿಯಂತ್ರಣಕ್ಕಾಗಿ ಮುಂದಾಗಬೇಕು. ಪಟ್ಟಣದಲ್ಲಿ ಅನೇಕ ಕಳ್ಳತನದ ಪ್ರಕರಣಗಳು ಕಂಡು ಬರುತ್ತಿದ್ದು, ಪತ್ತೆಹಚ್ಚುವ ಕೆಲಸ ಮಾಡಬೇಕು ಹಾಗೂ ರಾತ್ರಿಯ ಸಮಯದಲ್ಲಿ ಪೋಲಿಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕಳ್ಳತನದ ಪ್ರಕರಣ ನಿಯಂತ್ರಣ ಮಾಡಬೇಕು ಎಂದು ಸಿಪಿಐ ಯಶವಂತ ಬಿಸನಳ್ಳಿ ಅವರಿಗೆ ತಿಳಿಸಿದರು.
ಕುಷ್ಟಗಿ ತಾಲೂಕಿನಲ್ಲಿ ಡೆಂಘೀ ಹಾಗೂ ವಾಂತಿ ಭೇದಿಯ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಬೇಕು. ಜೊತೆಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಹಾಗೂ ಆಸ್ಪತ್ರೆಗಳಿಗೆ ಬರುವಂತಹ ರೋಗಿಗಳಿಗೆ ವೈದ್ಯರು ಉತ್ತಮವಾದ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯಾಧಿಕಾರಿಗೆ ಸಲಹೆ ನೀಡಿದರು.ಪಂಚಾಯತ್ ರಾಜ್ ಇಲಾಖೆಗೆ ಸಂಬಂದಪಟ್ಟಂತಹ ಬಾಕಿ ಇರುವ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಮುಗಿಸಿಕೊಡಬೇಕು, ತಾಲೂಕಿನ ಅನೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣ ಆಗಿಲ್ಲ ನೀರು ಕೊಟ್ಟಿಲ್ಲ. ಕೇವಲ ಕಾಗದ ಪತ್ರಗಳಲ್ಲಿ ಮಾತ್ರ ಕಾಮಗಾರಿ ಮುಗಿಯಬಾರದು ಸಂಪೂರ್ಣ ನೀರು ಕೊಡುವ ಕೆಲಸ ಆಗಬೇಕು. ಎಲ್&ಟಿ ಕಂಪನಿಯವರು ಅನೇಕ ಕೆಲಸಗಳನ್ನು ಬಾಕಿ ಇಟ್ಟಿದ್ದು, ಬೇಗನೆ ಮುಗಿಸಿಕೊಡಬೇಕು, ಇಲ್ಲವಾದಲ್ಲಿ ಲೋಕಾಯುಕ್ತರ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಹಾಗೂ ಬೀಜ ವಿತರಣೆ ಮಾಡಬೇಕು, ತಾಡಪಲ್ ಸರಿಯಾಗಿ ವಿತರಣೆ ಮಾಡಬೇಕು ಎಂದು ಕೃಷಿ ಅಧಿಕಾರಿ ಅಜಮೀರಅಲಿ ಅವರಿಗೆ ತಿಳಿಸಿದರು.
ಕುಷ್ಟಗಿಯಲ್ಲಿ ಕೋಚಿಂಗ್ ಸೆಂಟರ್‌ಗಳು ನಾಯಿಕೊಡೆಯಂತೆ ಹುಟ್ಟಿಕೊಳ್ಳುತ್ತಿವೆ. ಅನಧಿಕೃತವಾಗಿ ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಿಸಬೇಕು ಎಂದು ಬಿಇಒಗೆ ಸೂಚಿಸಿದರು.ಈ ಸಂದರ್ಭ ತಹಸೀಲ್ದಾರ ಶೃತಿ ಮಳ್ಳಪ್ಪಗೌಡರ, ತಾಪಂ ಇಒ ನಿಂಗಪ್ಪ ಮಸಳಿ, ಗ್ರೇಡ್-2 ತಹಸೀಲ್ದಾರ ಮುರುಳೀಧರ ಮುಕ್ತೆದಾರ, ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರು, ಬಿಇಒ ಸುರೇಂದ್ರ ಕಾಂಬಳೆ, ಅಕ್ಷರ ದಾಸೋಹ ಅಧಿಕಾರಿ ಶರಣಪ್ಪ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳು ಇದ್ದರು.