ಜಿಪಂ ಸಿಇಒ ಸೋಮಶೇಖರ್ ಸೂಚನೆ : ಗ್ರಾಪಂ ಪಿಡಿಒಗಳಿಗೆ ನೀರು ಪರೀಕ್ಷೆ ಕಾರ್ಯಾಗಾರ ಕನ್ನಡಪ್ರಭ ವಾರ್ತೆ ಚಿತ್ರದುರ್ಗಗ್ರಾಮಗಳಲ್ಲಿ ಕಲುಷಿತ ನೀರಿನ ಪ್ರಕರಣಗಳು ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಸಹಯೋಗದಲ್ಲಿ ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಫೀಲ್ಡ್ ಟೆಸ್ಟ್ ಕಿಟ್ ಮತ್ತು ಎಚ್2 ಎಸ್‌ವೈಲ್ಸ್ ಉಪಯೋಗಿಸಿ ನೀರು ಪರಿಕ್ಷೇಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯ 6 ತಾಲೂಕುಗಳ 189 ಗ್ರಾಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀರು ಪರೀಕ್ಷೆ ಕಿಟ್ ಮತ್ತು ವೈಲ್ಸ್ ಉಪಯೋಗಿಸಿ ನೀರಿನ ಪರೀಕ್ಷೆಗಳನ್ನು ಕೈಗೊಳ್ಳಲು ಪರಿಣಾಮಕಾರಿಯಾಗಿ ತರಬೇತಿ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಮತ್ತು ನೀರುಗಂಟಿಗಳಗೆ ಮಾಹಿತಿ ನೀಡಿ ಯಾವುದೇ ಗ್ರಾಮಗಳಲ್ಲಿ ಕಲುಷಿತ ನೀರಿನ ಪ್ರಕರಣಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಯೋಜನಾ ನಿರ್ದೇಶಕ ಡಾ.ಎಸ್.ರಂಗಸ್ವಾಮಿ ಮಾತನಾಡಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರಿಗೆ ಗ್ರಾ ಪಂ ಮಟ್ಟದಲ್ಲಿ ನೀರು ಪರೀಕ್ಷೆ ಕಿಟ್‍ಗಳ ಮೂಲಕ ಕುಡಿಯುವ ನೀರಿನ ಜಲಮೂಲಗಳ ನೀರು ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ಮಾಡಬೇಕು. ನೀರು ಕುಡಿಯಲು ಯೋಗ್ಯವಾಗಿ ಇಲ್ಲದಿದ್ದರೆ ಅಂತಹ ನೀರನ್ನು ತಾಲೂಕು ಮಟ್ಟದ ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ಮಾಡಿಸಿ, ನಂತರ ಅದರ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಿದರು. ಸ್ವಚ್ಛ ಭಾರತ್ ಮಿಷನ್ ಯೋಜನೆಯ ವೈಯಕ್ತಿಕ ಗೃಹ ಶೌಚಲಯಗಳು & ಬೂದು ನೀರು ನಿರ್ವಹಣೆಯ ಕಾಮಗಾರಿಗಳು ತ್ವರಿತವಾಗಿ ಪ್ರಗತಿ ಸಾಧಿಸಲು ಸೂಚಿಸಿದರು.ಉಪ ಕಾರ್ಯದರ್ಶಿ ತಿಮ್ಮಪ್ಪ ಮಾತನಾಡಿ, ಫೀಲ್ಡ್ ಟೆಸ್ಟ್ ಕಿಟ್ ಮೂಲಕ ಪ್ರತಿ ಗ್ರಾಮದಲ್ಲಿ ಕುಡಿವ ನೀರಿನ ಜಲ ಮೂಲಗಳಿಂದ ನೀರನ್ನು ಸಂಗ್ರಹಿಸಿ ಪ್ರತಿ ತಿಂಗಳು ನೀರಿನ ಮಾದರಿಯನ್ನು ಪರೀಕ್ಷಿಸಿ ವರದಿಯನ್ನು ನಿಗದಿತ ಪೋರ್ಟಲ್ ನಲ್ಲಿ ದಾಖಲಿಸಬೇಕು. ಪ್ರತಿ ಗ್ರಾಮದಲ್ಲಿ ನೀರುಗಂಟಿ ಮೂಲಕ ಪೈಪ್ ಲೈನ್ ಹೊಡೆದು ಹೋಗಿದ್ದರೆ ಕೂಡಲೇ ಗುರುತಿಸಿ ಸರಿಪಡಿಸಿ ನೀರು ಸರಬರಾಜು ಮಾಡಬೇಕು ಮತ್ತು ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್, ಆರ್‌ಒ ಪ್ಲಾಂಟ್, ಮಿನಿ ಟ್ಯಾಂಕ್ ಮತ್ತು ಜಲ ಮೂಲಗಳ ಹತ್ತಿರ ಸ್ವಚ್ಛಗೊಳಿಸಿ ಕಲುಷಿತ ವಾಗದಂತೆ ಜಾಗೃತ ವಹಿಸಬೇಕು ಎಂದರು.
ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಪುನರ್ ರಚನೆ ಮಾಡಿ ನಮೂನೆಗಳನ್ನು ಕಡ್ಡಾಯವಾಗಿ ಜಿಲ್ಲಾ ಪಂಚಾಯತ್ ಕಛೇರಿಗೆ ಸಲ್ಲಿಸಬೇಕು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರ ಸಹಕಾರದಿಂದ ಗ್ರಾಮಗಳಲ್ಲಿ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ 3 ತಿಂಗಳಿಗೊಮ್ಮೆ ಚರ್ಚಿಸಿ ಸಭಾ ನಡವಳಿಯನ್ನು ರಿಜಿಸ್ಟರ್ ಪುಸ್ತಕದಲ್ಲಿ ನಮೂದಿಸಲು ತಿಳಿಸಿದರು.ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ್ ಹೊಳಲ್ಕೆರೆ ಅವರು ಹೊಸದುರ್ಗ ತಾಲೂಕುಗಳ ಜಲ ಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಈ ವೇಳೆ ಜಿಲ್ಲಾ ಯೋಜನಾ ವ್ಯವಸ್ಥಾಪಕ, ಮಂಜುನಾಥ್ ಎಸ್.ನಾಡರ್, ಜಿಲ್ಲಾ ಎಂಐಎಸ್ ಸಮಾಲೋಚಕ ಸ್ನೇಹನ್, ಜಿಲ್ಲಾ ಸಮಾಲೋಚಕ ಬಿ.ಸಿ.ನಾಗರಾಜು, ಲ್ಯಾಬ್ ಸಿಬ್ಬಂದಿ ಉಪಸ್ಥಿತರಿದ್ದರು.