ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ನಿಯಮ ಪಾಲನೆಗೆ ಕ್ರಮವಹಿಸಿ: ಶಶಿಧರ ಕೋಸಂಬೆ

KannadaprabhaNewsNetwork |  
Published : Dec 07, 2025, 03:45 AM IST
5ಎಚ್‌ಪಿಟಿ6- ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಆರ್‌ಟಿಇ ಅನುಷ್ಠಾನದ ಕುರಿತ ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha

ಸಾರಾಂಶ

ಪಿಸಿ ಆ್ಯಂಡ್‌ ಪಿಎನ್‌ಡಿಟಿ 1994 ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ 5 ಸರ್ಕಾರಿ, 75 ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ ಕಾರ್ಯ ನಿರ್ವಹಿಸುತ್ತಿವೆ. ಪಿಸಿ ಆ್ಯಂಡ್‌ ಪಿಎನ್‌ಡಿಟಿ 1994 ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿರ್ಲಕ್ಷಿಸಿದರೆ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೆಂಟರ್ ಮುಚ್ಚಲು ಕ್ರಮ ವಹಿಸಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಆರ್‌ಟಿಇ ಅನುಷ್ಠಾನದ ಕುರಿತ ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 580 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನಗರದ ನೂರು ಹಾಸಿಗೆ ಆಸ್ಪತ್ರೆಯ ಅಪೌಷ್ಟಿಕ ಮಕ್ಕಳ ಪುನಶ್ಚೇತನ ಘಟಕದಲ್ಲಿ ಕಳೆದ ಆರು ತಿಂಗಳ ದಾಖಲೆ ವೀಕ್ಷಿಸಿದರೇ ಒಬ್ಬರು ಸಹಿತ ನೋಂದಣಿ ಆಗದಿರುವುದು ಆಶ್ಚರ್ಯ ಮೂಡಿಸಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಂಡದ ವೈದ್ಯರು, ಆರ್‌ಸಿಹೆಚ್ ಅಧಿಕಾರಿಗಳಾಗಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೇರಿ ಯಾವುದೇ ಒಂದು ಮಗುವನ್ನು ದಾಖಲಿಸಿರದಿರುವುದು ಕಂಡು ಬಂದಿದೆ. ಶೀಘ್ರವೇ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ತಂಡ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಮೀಕ್ಷೆ ನಡೆಸಿ ಪುನಶ್ಚೇತನ ಘಟಕಕ್ಕೆ ದಾಖಲಿಸಲು ಕ್ರಮ ವಹಿಸಬೇಕು ಎಂದರು.ನಗರದ ಸಹಾಯ ಮತ್ತು ರಾಘವ್ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಧೀಡಿರ್ ಭೇಟಿ ನೀಡಿ ಪರಿಶೀಲಿಸಿದಾಗ ಸಹಾಯ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಸ್ಕ್ಯಾನಿಂಗ್ ಕೊಠಡಿಯಲ್ಲಿ ಸಿಸಿ ಕ್ಯಾಮೆರಾಗಳ ಬಳಕೆ ಮಾಡಿರುವುದು ಕಾನೂನು ಬಾಹಿರ ಐಟಿ ಕಾಯ್ದೆ ಪ್ರಕಾರ ಅಪರಾಧವಾಗಲಿದೆ. ಪಿಸಿ ಆ್ಯಂಡ್‌ ಪಿಎನ್‌ಡಿಟಿ 1994 ಕಾಯ್ದೆಯಡಿ ಪ್ರತಿ ಸ್ಕ್ಯಾನಿಂಗ್ ನಲ್ಲಿ ಕಡ್ಡಾಯವಾಗಿ ವೈದ್ಯರು ಒಬ್ಬರೇ ಒಳಗಡೆ ಇದ್ದು ಸ್ಕ್ಯಾನ್ ಮಾಡಬೇಕು. ಆದರೆ ಈ ಎರಡು ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಈ ನಿಯಮ ಉಲ್ಲಂಘಿಸಿರುವುದು ಕಂಡು ಬಂದ ಹಿನ್ನಲೆಯಲ್ಲಿ ಶೋಕಾಸ್‌ ನೋಟಿಸ್ ನೀಡುವಂತೆ ಸೂಚಿಸಲಾಗಿದೆ. ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ನಿರ್ಲಕ್ಷಿಸಿದರೇ ಕಾನೂನು ಕ್ರಮ ಜರುಗಿಸಲಾಗುವುದು. 25 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಒಂದು ವಾರದಲ್ಲಿ ತಪಾಸಣೆ ಮಾಡುವ ಮೂಲಕ ವಿಸ್ಕೃತ ವರದಿಯನ್ನು ಅಧಿಕಾರಿಗಳು ಸಲ್ಲಿಸಬೇಕು ಎಂದರು.

ಕಳೆದ ವರ್ಷದಲ್ಲಿ ಜಿಲ್ಲೆಯಲ್ಲಿ 9ನೇ ತರಗತಿ ಉತ್ತೀರ್ಣವಾದ ಮಕ್ಕಳ ಸಂಖ್ಯೆ 23000 ಆದರೆ 10 ತರಗತಿಗೆ ಪರೀಕ್ಷೆ ನೋಂದಣಿಯಾದ ಮಕ್ಕಳಿಗೆ 4000 ಮಕ್ಕಳ ವ್ಯತ್ಯಾಸ ಕಂಡು ಬಂದಿದೆ. ಈ 4000 ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಮಾಹಿತಿಯಿಲ್ಲ ಇದೊಂದು ದುರಂತವೇ ಸರಿ. ನಗರದ ಅಮರಾವತಿಯಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ವೇಳೆ ಮಕ್ಕಳು ಮನೆಯಿಂದಲೇ ಊಟದ ತಟ್ಟೆಯನ್ನು ತರುತ್ತಿದ್ದಾರೆ. ಬಿಸಿಯೂಟ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಊಟದ ತಟ್ಟೆಗಳನ್ನು ನೀಡಬೇಕಿದೆ. ಹಾಗಾಗೀ ಸೋಮವಾರ ಮದ್ಯಾಹ್ನದ ಊಟಕ್ಕೆ ವಿದ್ಯಾರ್ಥಿಗಳಿಗೆ ಹೊಸ ತಟ್ಟೆಗಳನ್ನು ಖರೀದಿಸಿ ಸರಬರಾಜು ಮಾಡಬೇಕು. ಜಿಪಿಎಸ್ ಪೋಟೋ ಸಹಿತ ಮಕ್ಕಳು ಊಟ ಮಾಡುವುದನ್ನು ವರದಿ ನೀಡಬೇಕು ಇಲ್ಲದಿದ್ದರೇ ಸುಮೋಟೊ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್.ಶ್ವೇತಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ ಮತ್ತಿತರರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡವ ಮುಸ್ಲಿಮರಿಂದ ಕಾಟ್ರಕೊಲ್ಲಿ ಪುತ್ತರಿ ಆಚರಣೆ
ಪರಿಸರಕ್ಕೆ ಹಾನಿಯಾಗದಂತೆ ಬೇಡ್ತಿ –ವರದಾ ನದಿ ತಿರುವು ಆಗಲಿ: ಬೊಮ್ಮಾಯಿ