ಹೆದ್ದಾರಿಯಲ್ಲಿ ಅಪಘಾತ ಹೆಚ್ಚಳ ತಡೆಗೆ ಕ್ರಮ ಕೈಗೊಳ್ಳಿ: ಕಾಗೇರಿ

KannadaprabhaNewsNetwork |  
Published : Jun 14, 2024, 01:04 AM IST
ಅಧಿಕಾರಿಗಳ ಸಭೆ ನಡೆಸಿದರು | Kannada Prabha

ಸಾರಾಂಶ

ಸೀಬರ್ಡ್ ನೌಕಾನೆಲೆ ಮತ್ತು ಕೊಂಕಣ ರೈಲ್ವೆ ಕಾಮಗಾರಿಗಳಿಂದ ತೊಂದರೆಗೊಳಗಾದ ಜಿಲ್ಲೆಯ ಸಾರ್ವಜನಿಕರಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕಾರವಾರ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಮತ್ತು ದೋಷಪೂರಿತ ಕಾಮಗಾರಿಗಳಿಂದ ಸಾರ್ವಜನಿಕರು ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದು, ಈ ಸಾವುಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲೆಯ ಕೇಂದ್ರ ಸರ್ಕಾರದ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಮಗಾರಿ ಆರಂಭಿಸಿ ಇಷ್ಟು ವರ್ಷವಾದರೂ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಿದೇ, ಈಗಾಗಲೇ ಪೊಲೀಸ್ ಇಲಾಖೆ ವತಿಯಿಂದ ಗುರುತಿಸಲಾಗಿರುವ ಅಪಘಾತ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಫಲಕಗಳ ನಿರ್ಮಾಣ ಹಾಗೂ ಕಾಮಗಾರಿಗಳನ್ನು ಮುಕ್ತಾಯಗೊಳಿಸದೇ ಸಾರ್ವಜನಿಕರ ಜೀವ ಹಾನಿಗೆ ಕಾರಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಸದರು ಸೂಚಿಸಿದರು.

ಪ್ರಕರಣ ದಾಖಲಿಸುವ ಬಗ್ಗೆ ಈಗಾಗಲೇ ಎಚ್ಚರ ನೀಡಿದ್ದು, ಇನ್ನು ಮುಂದೆ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ವಿಷ್ಣುವರ್ಧನ್ ಸಂಸದರಿಗೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಜಿಲ್ಲಾಡಳಿತದ ಯಾವುದೇ ಸೂಚನೆಗಳಿಗೂ ಸೂಕ್ತವಾಗಿ ಸ್ಪಂದಿಸದೇ ಇರುವ ಬಗ್ಗೆ ದೂರುಗಳು ಬಂದಿದ್ದು, ಈ ಅಧಿಕಾರಿಗಳ ಬಗ್ಗೆ ಕೇಂದ್ರ ಹೆದ್ದಾರಿ ಸಚಿವರಿಗೆ ನೇರವಾಗಿ ತಿಳಿಸುವುದಾಗಿ ಹೇಳಿದ ಸಂಸದರು, ಉತ್ತಮ ಕೆಲಸ ಮಾಡುವ ಅಧಿಕಾರಿಗಳಿಗೆ ಬೆಂಬಲ ನೀಡಲಾಗುವುದು. ಆದರೆ ಜಿಲ್ಲೆಯ ಸಾರ್ವಜನಿಕರ ಹಿತರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸೀಬರ್ಡ್ ನೌಕಾನೆಲೆ ಮತ್ತು ಕೊಂಕಣ ರೈಲ್ವೆ ಕಾಮಗಾರಿಗಳಿಂದ ತೊಂದರೆಗೊಳಗಾದ ಜಿಲ್ಲೆಯ ಸಾರ್ವಜನಿಕರಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸಬೇಕು. ಸೀಬರ್ಡ್ ಪರವಾಗಿ ಜಿಲ್ಲಾಡಳಿದೊಂದಿಗೆ ಸಂವಹನ ಕಾರ್ಯಕ್ಕಾಗಿ ಒಬ್ಬರು ಜವಾಬ್ದಾರಿಯುತ ನೋಡೆಲ್ ಅಧಿಕಾರಿಗಳನ್ನು ಇಂದೇ ನೇಮಕ ಮಾಡಿ, ಅವರ ವಿವರಗಳನ್ನು ಜಿಲ್ಲಾಡಳಿತಕ್ಕೆ ಮತ್ತು ನನಗೆ ನೀಡಿ, ನೋಡೆಲ್ ಅಧಿಕಾರಿಗಳ ಮೂಲಕ ಬಾಕಿ ಇರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ನೌಕಾನೆಲೆಯ ಅಧಿಕಾರಿಗಳಿಗೆ ಸೂಚಿಸಿದ ಸಂಸದರು, ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಅಗತ್ಯ ಸಹಕಾರ ನೀಡುವಂತೆ ತಿಳಿಸಿದರು.

ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಸಾರ್ವಜನಿಕರಿಗೆ ವಿಳಂಬಕ್ಕೆ ಆಸ್ಪದವಾಗದ ರೀತಿಯಲ್ಲಿ ಸಾಲಗಳನ್ನು ಮಂಜೂರು ಮಾಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ ಸಂಸದರು, ಬಿಎಸ್ಎನ್ಎಲ್ ಮೂಲಕ ಜಿಲ್ಲೆಯಲ್ಲಿ ಸಂವಹನ ವ್ಯವಸ್ಥೆಯನ್ನು ಉತ್ತಮಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ನೆಟ್ ವರ್ಕ್ ಸಮಸ್ಯೆಬಾರದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬಾಕಿ ಇರುವ ಪ್ರಸ್ತಾವನೆಗಳು ಮತ್ತು ಕೇಂದ್ರದಲ್ಲಿ ಚರ್ಚಿಸಬೇಕಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಬೇಕು. ಈ ಸಮಸ್ಯೆಗಳ ಬಗ್ಗೆ, ಕೇಂದ್ರದ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುತ್ತೇನೆ. ಜಿಲ್ಲೆಯ ಜನತೆ ಅತ್ಯಂತ ಹೆಚ್ಚಿನ ವಿಶ್ವಾಸವಿಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆ. ಈ ಕಾರ್ಯದಲ್ಲಿ ಅಧಿಕಾರಿಗಳೂ ಸ್ಪಂದಿಸಿ, ಸಾರ್ವಜನಿಕರ ನಿರೀಕ್ಷೆಗೆ ಅನುಗುಣವಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಕೇಂದ್ರದ ಯೋಜನೆಗಳ ಸಂಪೂರ್ಣ ಪ್ರಯೋಜನ ಜಿಲ್ಲೆಯ ಎಲ್ಲ ಜನತೆಗೆ ದೊರೆಯುವಂತೆ ಮಾಡಬೇಕು ಎಂದರು.

ಮಳೆಗಾಲದಲ್ಲಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ, ಜಿಲ್ಲೆಯಲ್ಲಿ ಯಾವುದೇ ಜೀವಹಾನಿಯಾಗದಂತೆ ಎಚ್ಚರಿಕೆ ವಹಿಸಿ. ಡೆಂಘೀ, ಚಿಕೂನ್ ಗುನ್ಯಾದಂತಹ ಕಾಯಿಲೆಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಿ, ಅಗತ್ಯ ಔಷಧಗಳ ದಾಸ್ತಾನು ಇಟ್ಟುಕೊಳ್ಳಿ. ಯಾವುದೇ ರೋಗಳು ಹರಡದಂತೆ ನೋಡಿಕೊಳ್ಳಿ. ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಸಂಸದರು ತಿಳಿಸಿದರು.

ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ಸೀ ಬರ್ಡ್, ಕೋಸ್ಟ್ ಗಾರ್ಡ್, ಬಿಎಸ್ಎನ್ಎಲ್, ರಾಷ್ಟ್ರೀಯ ಹೆದ್ದಾರಿ, ಅಂಚೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರಿ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ