ಜಿಲ್ಲೆಯಲ್ಲಿ ಈವರೆಗೆ 51 ಕೆಎಫ್‌ಡಿ ಪಾಜಿಟಿವ್ । ಕಾಯಿಲೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆ
ಕನ್ನಡಪ್ರಭವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಂಡು ಬರುವ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರ ಪ್ರಕರಣಗಳಿಗೆ ಕೆಎಫ್‌ಡಿ ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜ್ವರ ಪ್ರಕರಣಗಳಿಗೆ ಕೆಎಫ್‌ಡಿ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ವಾಡಿಕೆಯಂತೆ ಈ ವರ್ಷವೂ ಜಿಲ್ಲೆಯಲ್ಲಿ ಪ್ರಕರಣಗಳು ವರದಿಯಾಗಿವೆ. ಕೆ.ಎಫ್.ಡಿ. ಪಾಸಿಟಿವ್ ಪತ್ತೆಯಾದ ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ರೋಗ ಪ್ರಸರಣ ಸಾಮಾನ್ಯವಾಗಿ ಬೇಸಿಗೆಯಲ್ಲಿ ಇದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಬೇಕು. ಅಗತ್ಯ ಜೌಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು. ಸೋಂಕಿತರಿಗೆ ಎಬಿಎಆರ್ ಕೆ ಅಡಿ ರೆಫರ್ ಮಾಡಿ ಉಚಿತ ಚಿಕಿತ್ಸೆ ಕೊಡಿಸಬೇಕು ಜನರಲ್ಲಿ ಕಾಯಿಲೆ ಕುರಿತು ಅರಿವು ಮೂಡಿಸಲು ಮಾಹಿತಿ, ಶಿಕ್ಷಣ, ಸಂವಹನ ಚಟುವಟಿಕೆ ಕೈಗೊಳ್ಳುವಂತೆ ಸೂಚಿಸಿದರು. ಕಾಡಂಚಿನ ಜನರಿಗೆ ಡಿಇಪಿಎ ತೈಲ ವಿತರಿಸಿ,. ಕಾಡಿಗೆ ತೆರಳುವ ಸಂದರ್ಭದಲ್ಲಿ ಇದನ್ನು ಕೈಕಾಲುಗಳಿಗೆ ಲೇಪಿಸಿ ಕೊಂಡು ಹೋಗುವಂತೆ ಅವರಲ್ಲಿ ಅರಿವು ಮೂಡಿಸಿ ಎಂದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಭರತ್ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಜ. 2024 ರಿಂದ ಇಲ್ಲಿಯವರೆಗೆ ಒಟ್ಟು 387 ರಕ್ತದ ಮಾದರಿಗಳನ್ನು ಸಂಗ್ರಹಿಸಿ ಶಿವಮೊಗ್ಗ ಜಿಲ್ಲೆ ವಿಡಿಎಲ್ ಪ್ರಯೋಗ ಶಾಲೆಗೆ ಕಳುಹಿಸಲಾಗಿದೆ. ಅವುಗಳಲ್ಲಿ 51 ಕೆಎಫ್‌ಡಿ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಕೊಪ್ಪ ತಾಲೂಕಿನಲ್ಲಿ 322 ರಕ್ತ ಮಾದರಿಗಳ ಪೈಕಿ 38 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಎನ್.ಆರ್. ಪುರ ತಾಲೂಕಿನಲ್ಲಿ 34 ರಕ್ತದ ಮಾದರಿಗಳಲ್ಲಿ 10 ಪಾಸಿಟಿವ್ , ಶೃಂಗೇರಿಯಲ್ಲಿ 22 ರಕ್ತದ ಮಾದರಿಗಳಲ್ಲಿ 1 ಪಾಸಿಟಿವ್ ಹಾಗೂ ಚಿಕ್ಕಮಗಳೂರು ತಾಲೂಕಿನ 9 ರಕ್ತದ ಮಾದರಿಗಳಲ್ಲಿ 2 ಪಾಸಿಟಿವ್ ಎಂದು ದೃಢಪಟ್ಟಿದೆ. ಜಿಲ್ಲೆಯ ಒಟ್ಟು 74 ಟಿಕ್‌ಪೂಲ್ (ಉಣ್ಣೆ)ಗಳನ್ನು ಸಂಗ್ರಹಿಸಿ ವಿಡಿಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಯಾವುದೇ ಪಾಸಿಟಿವ್ ಎಂದು ವರದಿಯಾಗಿಲ್ಲ ಎಂದು ಹೇಳಿದರು. ಕೊಪ್ಪ 5, ಎನ್.ಆರ್. ಪುರ 3 ಹಾಗೂ ಶೃಂಗೇರಿಯಲ್ಲಿ 1 ಮಂಗ ಸೇರಿ ಜಿಲ್ಲೆಯಲ್ಲಿ ಒಟ್ಟು 9 ಮಂಗಗಳು ಮರಣ ಹೊಂದಿವೆ. ಇವುಗಳ ಪೈಕಿ ಯಾವುದೇ ಕೆಎಫ್‌ಡಿ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ ಎಂದರು.ಜಿಲ್ಲೆಯಲ್ಲಿ ವರದಿಯಾದ ಒಟ್ಟು 51 ಕೆಎಫ್‌ಡಿ ಪ್ರಕರಣಗಳಲ್ಲಿ 36 ಪ್ರಕರಣಗಳು ಈಗಾಗಲೇ ಡಿಸ್ಚಾರ್ಜ್ ಆಗಿದ್ದು, ಉಳಿದ 13 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಉಣ್ಣೆ ಸಂಗ್ರಹಣೆ, ಜ್ವರ ಸಮೀಕ್ಷೆ ಹಾಗೂ ಮಂಗಗಳ ಸಾವಿನ ಸಮೀಕ್ಷೆಗಳನ್ನು ಸಕ್ರಿಯವಾಗಿ ಕೈಗೊಳ್ಳಲಾಗಿದೆ. ಅರಣ್ಯ ಹಾಗೂ ಎಸ್ಟೇಟ್‌ಗಳಲ್ಲಿನ ಸಾರ್ವಜನಿಕರಿಗೆ ಡಿಇಪಿಎ ತೈಲ ವಿತರಣೆ ಮಾಡಲಾಗುತ್ತಿದೆ. ಕಾಡಿನಲ್ಲಿ ವಾಸಿಸುವ ಹಾಗೂ ಕಾಡಿಗೆ ಹೋಗಿ ಬರುವ ಸಾರ್ವಜನಿಕರಿಗೆ ಅವರು ಧರಿಸುವ ಬಟ್ಟೆಯ ಬಗ್ಗೆ ಕಾಡಿಗೆ ಹೋಗುವ ಮೊದಲು ಡಿಇಪಿಎ ತೈಲವನ್ನು ಹಚ್ಚಿಕೊಳ್ಳುವಂತೆ, ಕಾಡಿನಿಂದ ಬಂದ ನಂತರ ಧರಿಸಿದ ಬಟ್ಟೆಯನ್ನು ಬಿಸಿ ನೀರಿನಲ್ಲಿ ಅದ್ದಿ ಶುಚಿಗೊಳಿಸುವಂತೆ ಹಾಗೂ ಕಾಡಿನಿಂದ ಬಂದ ತಕ್ಷಣ ಬಿಸಿ ನೀರಿನ ಸ್ನಾನ ಮಾಡಿ ಮನೆಯೊಳಗೆ ಹೋಗುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಜ್ವರ ಪರೀಕ್ಷೆಗೆ ಬೇರೆ ಜಿಲ್ಲೆಗೆ ರಕ್ತದ ಮಾದರಿ ಕಳುಹಿಸಿ ಅಲ್ಲಿಂದ ವರದಿ ಬರಲು ಸಮಯ ತೆಗೆದುಕೊಳ್ಳುವ ಕಾರಣ ಜಿಲ್ಲೆ ಯಲ್ಲಿಯೇ ಪ್ರಯೋಗಾಲಯ ತೆರೆಯುವಂತೆ ಸಚಿವರು ಸೂಚಿಸಿದರು.ಸಭೆಯಲ್ಲಿ ಶಾಸಕರಾದ ಎಚ್.ಡಿ. ತಮ್ಮಯ್ಯ, ನಯನಾ ಮೋಟಮ್ಮ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ಡಾ. ಮಂಜುನಾಥ್ ಹಾಗೂ ತಾಲೂಕು ವೈದ್ಯಾಧಿಕಾರಿ ಹಾಜರಿದ್ದರು. 4 ಕೆಸಿಕೆಎಂ 3ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಶಾಸಕರಾದ ನಯನಾ ಮೋಟಮ್ಮ, ಎಚ್.ಡಿ. ತಮ್ಮಯ್ಯ ಇದ್ದರು.