ಬಡವರು ಭಾರತ್ ಅಕ್ಕಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಸಂಸದ ರಾಜಾ ಅಮರೇಶ್ವರ ನಾಯಕ

KannadaprabhaNewsNetwork | Published : Feb 14, 2024 2:23 AM

ಸಾರಾಂಶ

ರಾಯಚೂರಿನ ರಾಜೇಂದ್ರ ಗಂಜ್‌ ಎಪಿಎಂಸಿ ಯಾರ್ಡ್‌ನಲ್ಲಿ ಭಾರತ್‌ ಅಕ್ಕಿ ಯೋಜನೆಗೆ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್‌ ಜಂಟಿಯಾಗಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕೇವಲ 29 ರು. ಒಂದು ಕೆಜಿಯಂತೆ ಜನ ಸಾಮಾನ್ಯರಿಗೆ ಸೋನಾ ಮಸೂರಿ ಅಕ್ಕಿಯನ್ನು ಮಾರಾಟ ಮಾಡುವ ಸದುದ್ದೇಶವನ್ನು ಸರ್ಕಾರ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಯೋಜನೆಯನ್ನು ದೇಶಾದ್ಯಂತ ಪ್ರಾರಂಭಿಸಲಾಗುತ್ತಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ಸ್ಥಳೀಯ ರಾಜೇಂದ್ರ ಗಂಜ್‌ ಎಪಿಎಂಸಿ ಯಾರ್ಡ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮಹತ್ವದ ಭಾರತ್‌ ಅಕ್ಕಿ ಯೋಜನೆಗೆ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ಮಂಗಳವಾರ ಜಂಟಿಯಾಗಿ ಚಾಲನೆ ನೀಡಿದರು.

ಈ ವೇಳೆ ಸಂಸದರು ಮಾತನಾಡಿ, ಬೆಲೆ ಏರಿಕೆಯ ಸಮಯದಲ್ಲಿ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸರ್ಕಾರವು ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಯ ಮಳಿಗೆಗಳು ಮತ್ತು ಈ-ಕಾಮರ್ಸ್ ತಾಣಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 5 ಲಕ್ಷ ಟನ್ ಬಿಡುಗಡೆ ಮಾಡಲಾಗುತ್ತಿದೆ. ಇದು ಐದು ಕೆ.ಜಿ ಹಾಗೂ 10 ಕೆ.ಜಿ ಪ್ಯಾಕೆಟ್‌ನಲ್ಲಿ ಭಾರತ ರೈಸನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಉಪಯೋಗವನ್ನು ತೆಗೆದುಕೊಳ್ಳಬೇಕು ಎಂದರು.

ಶಾಸಕ ಡಾ.ಶಿವರಾಜ ಪಾಟೀಲ್‌ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಭಾರತ್ ಅಕ್ಕಿ ವಿತರಣೆ ಯೋಜನೆ ರೂಪಿಸಿದ್ದು, ವಿಶ್ವಮಟ್ಟದಲ್ಲಿ ಗಮನ ಸೆಳೆದ ದೇಶವಾಗಿದೆ.

ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ಇಂಥ ಜನಪರ ಯೋಜನೆ ಜಾರಿ ಆಗಿಲ್ಲ. ಮುಂದುವರಿದ ರಾಷ್ಟ್ರಗಳಲ್ಲಿ ಭಾರತ ಅಗ್ರಗಣ್ಯ ದೇಶವಾಗಿದೆ. ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಲು ಹಣದುಬ್ಬರ, ಆರ್ಥಿಕತೆ ಮುನ್ನಡೆ ಸಾಧಿಸಬೇಕು. ಸರಕು ಸೇವೆಗಳ ಬೆಲೆಗಳಲ್ಲಿ ಸ್ಥಿರತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ರವೀಂದ್ರ ಜಲ್ದಾರ್, ಮುಖಂಡರು, ವರ್ತಕರು, ಸಾರ್ವಜನಿಕರು ಇದ್ದರು.

ಬ್ಯಾನರಲ್ಲಿ ಹಿಂದಿ ಬಳಸಿದ್ದಕ್ಕೆ ಆಕ್ಷೇಪ: ಕೇಂದ್ರ ಸರ್ಕಾರದ ಭಾರತ್ ಅಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಹಿಂದೆ ಅಳವಡಿಸಿದ ಬ್ಯಾನರ್‌ನಲ್ಲಿ ಕನ್ನಡ ಭಾಷೆ ಬಳಸದಿರುವ ಕಾರಣಕ್ಕೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.

ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಏಕಾಏಕಿ ಮಧ್ಯೆ ಪ್ರವೇಶಿಸಿ

ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿ ಕರ್ನಾಟಕದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೂ ಹಿಂದಿ ಬಳಸಿರುವುದು ಯಾಕೆ ಎಂದು ಪ್ರಶ್ನಿಸಿದರು. ಇದರಿಂದ ಆಯೋಜಕರು ಗಲಿಬಿಲಿಗೊಂಡರು. ಕೊನೆಗೆ ಆಯೋಜಕರ ಪರ ಶಾಸಕ ಡಾ.ಶಿವರಾಜ ಪಾಟೀಲ್ ಕ್ಷಮೆಯಾಚಿಸಿದ ಬಳಿಕ ಕಾರ್ಯಕ್ರಮ ಮುಂದುವರಿಸಲಾಯಿತು.

Share this article