ಕೂಸಿನ ಮನೆ ಯೋಜನೆಯ ಪ್ರಯೋಜನ ಪಡೆಯಿರಿ: ಗೃಹಸಚಿವ

KannadaprabhaNewsNetwork |  
Published : Dec 31, 2023, 01:30 AM IST
ಕೂಸಿನ ಮನೆಗೆ ಚಾಲನೆ | Kannada Prabha

ಸಾರಾಂಶ

ರಾಜ್ಯದಲ್ಲೇ ಮೊದಲ ಬಾರಿಗೆ ತುಮಕೂರಿನಲ್ಲಿ ಕೂಸಿನಮನೆ ಉದ್ಘಾಟನೆ.

ಕನ್ನಡಪ್ರಭ ವಾರ್ತೆ ತುಮಕೂರು

ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳ ಪೋಷಣೆಗಾಗಿ ಕೂಸಿನ ಮನೆ ಯೋಜನೆಯನ್ನು ಸರ್ಕಾರ ರೂಪಿಸಿದ್ದು, ಕಾರ್ಮಿಕ ಮಹಿಳೆಯು ಕೆಲಸದ ವೇಳೆಯಲ್ಲಿ ತನ್ನ ಮಗುವನ್ನು ಕೂಸಿನ ಮನೆಯಲ್ಲಿ ಬಿಟ್ಟು ನೆಮ್ಮದಿಯಿಂದ ಕೆಲಸ ಮಾಡಬಹುದೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.

ತುಮಕೂರು ತಾಲೂಕು ದೇವಲಾಪುರ ಗ್ರಾಮ ಪಂಚಾಯತಿ ಕಾಡುಸಿದ್ದಯ್ಯನಪಾಳ್ಯ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕೂಸಿನ ಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲೇ ಪ್ರಪ್ರಥಮವಾಗಿ ಕೂಸಿನ ಮನೆ ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯ 175 ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆಗಳನ್ನು ಗುರುತಿಸಲಾಗಿದ್ದು, ಒಂದು ತಿಂಗಳೊಳಗಾಗಿ ಎಲ್ಲಾ 330 ಪಂಚಾಯತಿಗಳಲ್ಲಿಯೂ ಕೂಸಿನ ಮನೆ ಪ್ರಾರಂಭಿಸಲು ಸಚಿವರು ಜಿಲ್ಲಾ ಪಂಚಾಯಿತಿಗೆ ನಿರ್ದೇಶನ ನೀಡಿದರು.

ಕೂಸಿನ ಮನೆಗೆ ದಾಖಲಾದ ಪ್ರತಿ ಮಗುವಿಗೆ ದಿನವೊಂದಕ್ಕೆ ಸ್ಥಳೀಯ ಆಹಾರ ಪದ್ಧತಿಗನುಗುಣವಾಗಿ ಪೌಷ್ಠಿಕಾಂಶಗಳನ್ನೊಳಗೊಂಡ ಸಮತೋಲನ ಆಹಾರ ನೀಡಲಾಗುವುದು. ಜಿಲ್ಲಾ ಸಮಿತಿ ನೀಡಿರುವ ಆಹಾರದ ಪಟ್ಟಿಯನ್ವಯ ಬೆಳಗಿನ ಉಪಹಾರ, ಮಧ್ಯಾಹ್ನ ಬಿಸಿಯೂಟ ಹಾಗೂ ಸಂಜೆ ಲಘು ಉಪಹಾರ ಸೇರಿದಂತೆ 3 ಬಾರಿ ಆಹಾರ ತಯಾರಿಸಿ ಮಕ್ಕಳಿಗೆ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದವರು ಅದರಲ್ಲೂ ಮಹಿಳೆಯರನ್ನು ಸಬಲರನ್ನಾಗಿ ಮಾಡುವ ದೃಷ್ಟಿಯಿಂದ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳೂ ಯಶಸ್ಸು ಕಂಡಿವೆ. ಈವರೆಗೂ ಶಕ್ತಿ ಯೋಜನೆಯಡಿ ಜಿಲ್ಲೆಯ 3.50 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 5,96,000 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲು 163 ಕೋಟಿ ರು. ಖರ್ಚು ಮಾಡಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆ ಮೂಲಕ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಪಾವತಿಸಲಾಗುತ್ತಿರುವ 2 ಸಾವಿರ ರು. ಹಣವನ್ನು ಒಡವೆ-ವಸ್ತ್ರಕ್ಕೆಂದು ದುಂದು ವೆಚ್ಚ ಮಾಡದೆ ಮನೆಯ ಖರ್ಚು, ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಿಸಬೇಕು ಎಂದು ತಿಳಿಸಿದರಲ್ಲದೆ ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ ಮಹಿಳೆಯರ ಖಾತೆಗೆ 346 ಕೋಟಿ ರು. ಹಣವನ್ನು ಜಮೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾದರೂ, ಯೋಜನೆಗೆ ಸಂಬಂಧಿಸಿದಂತೆ ಬರುವ ಟೀಕೆ ಟಿಪ್ಪಣಿಗಳಿಗೆ ಚಿಂತಿಸುವುದಿಲ್ಲ ರಾಜ್ಯದ ಜನತೆ ನೆಮ್ಮದಿಯಿಂದ ಬದುಕಬೇಕೆಂಬುದೇ ನಮ್ಮ ಸರ್ಕಾರದ ಉದ್ದೇಶವೆಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಮಹಿಳೆ ಆರ್ಥಿಕವಾಗಿ ಸಬಲರಾಗಬೇಕಾದರೆ ದುಡಿದು ಗಳಿಸಬೇಕು. ಆದರೆ ತಾಯಿಯಾದ ನಂತರ ಮಗುವಿನ ಲಾಲನೆ-ಪಾಲನೆಯೊಂದಿಗೆ ಸುಮಾರು ವರ್ಷಗಳನ್ನು ಕಳೆಯಬೇಕಾದ ಅನಿವಾರ್ಯತೆ ಅವಳಿಗಿರುತ್ತದೆ. ತಾಯಿ ತನ್ನ ಮಗುವನ್ನು ಬಿಟ್ಟು ನೆಮ್ಮದಿಯಿಂದ ದುಡಿಯಲು ಸಾಧ್ಯವಿಲ್ಲವೆಂಬುದನ್ನು ಮನಗಂಡು ಕೂಸಿನ ಮನೆ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ಕೂಲಿ ಕಾರ್ಮಿಕರ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯತಿ ಸಿಇಒ ಜಿ. ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರು ದುಡಿಮೆ ವೇಳೆಯಲ್ಲಿ ಅವರ ಹಸುಗೂಸನ್ನು ನೋಡಿಕೊಳ್ಳುವುದು ಹಾಗೂ ಮಗುವಿಗೆ ಸಮಗ್ರ ಆರೋಗ್ಯ ಭದ್ರತೆ ಒದಗಿಸುವುದು ಕೂಸಿನ ಮನೆಯ ಮೂಲ ಉದ್ದೇಶ ಎಂದು ತಿಳಿಸಿದರಲ್ಲದೆ, ಜಿಲ್ಲೆಯ ಆಯ್ದ 175 ಕೂಸಿನ ಮನೆಗಳಿಗೆ ಇಂದು ಅಧಿಕೃತವಾಗಿ ಚಾಲನೆ ದೊರೆತಿದೆ. ಕೂಸಿನ ಮನೆಯಲ್ಲಿ ಅಗತ್ಯ ಮೂಲಭೂತ ಸೌರ್ಯೆದೊಂದಿಗೆ ಅಡುಗೆ ಕೋಣೆ, ಕಲಿಕಾ ಕೊಠಡಿ, ಮಕ್ಕಳ ಆಟಿಕೆ/ಕಲಿಕಾ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ವೈಯಕ್ತಿಕ ಸ್ವಚ್ಛತೆ, ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ದೇವಲಾಪುರ ಗ್ರಾಮಪಂಚಾಯತಿ ಅಧ್ಯಕ್ಷ ಸಿದ್ಧರಾಜು ಮಾತನಾಡಿದರು. ಇದಕ್ಕೂ ಮುನ್ನ ಗೃಹ ಸಚಿವರು ಕೂಸಿನ ಮನೆಯನ್ನು ವೀಕ್ಷಿಸಿದರು. ಈ ವೇಳೆ ಕೂಸಿನ ಮನೆ ಕಾರ್ಯಕ್ರಮ ವಿಧಾನ ಕುರಿತು ಜಿಲ್ಲಾ ಪಂಚಾಯತಿ ಐಇಸಿ ಕೋರ್ಡಿಡನೇಟರ್ ಗಿರೀಶ್ ಅವರು ತಯಾರಿಸಿದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ದೇವಲಾಪುರ ಗ್ರಾಮಪಂಚಾಯತಿ ಉಪಾಧ್ಯಕ್ಷೆ ನೇತ್ರಾವತಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ವಿ. ಅಶೋಕ್, ವಿವಿಧ ಗ್ರಾಮಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕೇರ್ ಟೇಕರ್‌ಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.ಕೋಟ್‌ಆಯ-ವ್ಯಯ ಮಂಡನೆ ಸಂದರ್ಭದಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೂಸಿನ ಮನೆ ಯೋಜನೆಯ ಕನಸು ಇಂದು ನನಸಾಗಿದೆ. ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬ ಉದ್ದೇಶದಿಂದ ರೂಪಿಸಿರುವ ಕೂಸಿನ ಮನೆ ಸೌಲಭ್ಯವನ್ನು ಗ್ರಾಮೀಣ ಕೂಲಿ ಕಾರ್ಮಿಕರು ಕಾರ್ಮಿಕರು ಸದುಪಯೋಗಪಡಿಸಿಕೊಂಡಾಗ ಮಾತ್ರ ಯೋಜನೆ ಸಾರ್ಥಕ ಕಾಣುತ್ತದೆ.ಡಾ.ಜಿ. ಪರಮೇಶ್ವರ್‌ ಗೃಹ ಸಚಿವರುಬಾಕ್ಸ್‌.....ಕೇರ್‌ ಟೇಕರ್‌ಗಳ ನೇಮಕಕೂಸಿನ ಮನೆಯಲ್ಲಿ ಗೌರವಧನ ಆಧಾರದ ಮೇಲೆ ಮಕ್ಕಳ ಪೋಷಣೆಗಾಗಿ ಕೇರ್‌ ಟೇಕರ್‌ಗಳನ್ನು ನೇಮಿಸಲಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 1400 ಕೇರ್‌ ಟೇಕರ್‌ಗಳನ್ನು ಗುರುತಿಸಲಾಗಿದೆ. 700 ಕೇರ್ ಟೇಕರ್‌ಗಳಿಗೆ ತರಬೇತಿ ನೀಡಲಾಗಿದೆ. ಕೇರ್ ಟೇಕರ್‌ಗಳು ಕೂಸಿನ ಮನೆಯಲ್ಲಿ ಮಕ್ಕಳನ್ನು ಪ್ರಾಮಾಣಿಕವಾಗಿ ಮಮತೆ ವಾತ್ಸಲ್ಯದಿಂದ ಆರೈಕೆ ಮಾಡಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌