ಕಂದಾಯ ಅದಾಲತ್‌ನ ಲಾಭ ಪಡೆದುಕೊಳ್ಳಿ: ಗೌರವಕುಮಾರ್‌

KannadaprabhaNewsNetwork | Published : Mar 8, 2024 1:45 AM

ಸಾರಾಂಶ

ಜನರು ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ, ಅಧಿಕಾರಿಗಳೆ ಜನರ ಮನೆ ಬಾಗಿಲಿಗೆ ಹೋಗಿ ಸವಲತ್ತುಗಳನ್ನು ನೀಡಲು ಅನುಕೂಲವಾಗುವಂತೆ ಕಂದಾಯ ಅದಾಲತ್‌ಗಳನ್ನು ಆಯೋಜಿಸುತ್ತಿದ್ದು, ಜನರು ಇದರ ಲಾಭ ಪಡೆದುಕೊಳ್ಳುವಂತೆ ತುಮಕೂರು ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಜನರು ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ, ಅಧಿಕಾರಿಗಳೆ ಜನರ ಮನೆ ಬಾಗಿಲಿಗೆ ಹೋಗಿ ಸವಲತ್ತುಗಳನ್ನು ನೀಡಲು ಅನುಕೂಲವಾಗುವಂತೆ ಕಂದಾಯ ಅದಾಲತ್‌ಗಳನ್ನು ಆಯೋಜಿಸುತ್ತಿದ್ದು, ಜನರು ಇದರ ಲಾಭ ಪಡೆದುಕೊಳ್ಳುವಂತೆ ತುಮಕೂರು ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ತಾಲೂಕಿನ ಉರ್ಡಿಗೆರೆ ಗ್ರಾಮದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಊರ್ಡಿಗೆರೆ ಹೋಬಳಿ ಮಟ್ಟದ ಕಂದಾಯ ಅದಾಲತ್ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಆಶಯದಂತೆ ಅಧಿಕಾರಿಗಳೇ ಜನರ ಬಳಿ ಹೋಗಿ, ಅವರ ಜಮೀನಿನ ದಾಖಲೆಗಳಲ್ಲಿ ಆಗಿರುವ ಲೋಪದೋಷ ಸರಿಪಡಿಸುವುದರ ಜೊತೆಗೆ, ವಿವಿಧ ಯೋಜನೆಗಳಡಿ ಆರ್ಹರಿಗೆ ಮಾಸಾಶನ ನೀಡುವ ಕೆಲಸ ಮಾಡುತ್ತಿದೆ. ಇದು ಒಂದು ಕ್ರಾಂತಿಕಾರಕ ಬದಲಾವಣೆ. ಈಗಾಗಲೇ ತಾಲೂಕಿನ ಕೋರ, ಹೆಬ್ಬೂರು, ಊರುಕೆರೆ ಹೋಬಳಿಗಳಲ್ಲಿ ಈ ಅದಾಲತ್ ನಡೆಸಿ ನೂರಾರು ದಾಖಲೆಗಳನ್ನು ತಿದ್ದುಪಡಿ ಮಾಡಿಕೊಡಲಾಗಿದೆ ಎಂದರು.

ಜನರಿಗೆ ತಿಳುವಳಿಕೆ ಕೊರತೆಯಿಂದ ತಾತ, ಮುತ್ತಾತ, ತಂದೆಯ ಹೆಸರಿನಲ್ಲಿರುವ ಇರುವ ಜಮೀನಿನ ದಾಖಲೆಗಳು, ಅವರ ಕಾಲಾ ನಂತರವೂ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರುವುದಿಲ್ಲ. ಇದರಿಂದ ಸರ್ಕಾರದ ಸವಲತ್ತುಗಳಾದ ಕಿಸಾನ್ ಸನ್ಮಾನ್, ಬೆಳೆವಿಮೆ, ಬೆಳೆ ಪರಿಹಾರ, ಬೆಂಬಲ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಪ್ರೂಟ್ ಐಡಿ ಮಾಡಲು ಸಹ ತೊಂದರೆಯಾಗುತ್ತಿದೆ. ಆದ್ದರಿಂದ ಜನರು ಈ ಆಂದೋಲನದ ಲಾಭ ಪಡೆದು ತಮ್ಮ ಜಮೀನಿನ ದಾಖಲೆಗಳಲ್ಲಿ ಆಗಿರುವ ತೊಂದರೆ ಸರಿಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ಸಲಹೆ ನೀಡಿದರು.

ಕಂದಾಯ ಅದಾಲತ್ತಿನ ನೋಡಲ್ ಅಧಿಕಾರಿ ಹಾಗೂ ಕೃಷಿ ಇಲಾಖೆಯ ಉಪನಿರ್ದೇಶಕ ಅಶೋಕ್ ಮಾತನಾಡಿ, ಕೃಷಿ ಮತ್ತು ಕಂದಾಯ ಇಲಾಖೆ ಎರಡ ನಡುವೆ ಅವಿನಾಭಾವ ಸಂಬಂಧವಿದೆ. ಕಂದಾಯ ದಾಖಲೆಗಳು ಸರಿಯಾಗಿದ್ದರೆ ಮಾತ್ರ ಕೃಷಿ ಇಲಾಖೆಯ ಬೆಳೆ ಪರಿಹಾರ, ಬೆಂಬಲ ಬೆಲೆ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರವೇ ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ಕಳುಹಿಸಿದೆ. ಹಾಗಾಗಿ ಲೋಪದೋಷ ವಿರುವ ಪಹಣಿ ತಿದ್ದುಪಡಿ, ಪಹಣಿ ಕಲಂ ೩-೯ ಟ್ಯಾಲಿ, ಪೌತಿ ಖಾತೆ ಸೇರಿದಂತೆ ಹಲವು ಪ್ರಕರಣಗಳು ಸ್ಥಳದಲ್ಲಿಯೇ ಇತ್ಯರ್ಥವಾಗಲಿವೆ. ಅಲ್ಲದೆ ಪಿಂಚಿಣಿ ಪಡೆಯುವಲ್ಲಿ ಆಗುತ್ತಿರುವ ತೊಂದರೆ, ಆಧಾರ್-ಪಹಣಿ ಲಿಂಕ್,ಇಕೆವೈಸಿ ಪ್ರೂಟ್ ಐಟಿ ಯಂತಹ ಸಮಸ್ಯೆಗಳಿಗೂ ಸ್ಥಳದಲ್ಲಿಯೇ ಪರಿಹಾರ ದೊರೆಯಲಿದೆ ಎಂದರು.

ಉರ್ಡಿಗೆರೆ ಉಪತಹಸೀಲ್ದಾರ್ ನರಸಿಂಹಮೂರ್ತಿ ಮಾತನಾಡಿ, ಪಿಂಚಣಿ ಅದಾಲತ್‌ನ ಪ್ರಮುಖ ಉದ್ದೇಶ ಸರ್ಕಾರದ ಸವಲುತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು. 2004ರ ನಂತರ ಕಂಪ್ಯೂಟರ್ ಪಹಣಿಯಲ್ಲಿ ಆಗಿರುವ ವ್ಯತ್ಯಾಸ ಸರಿಪಡಿಸುವ ಕೆಲಸ ಆಗುತ್ತಿದೆ. ಉರ್ಡಿಗೆರೆ ಹೋಬಳಿಯಲ್ಲಿ ಸುಮಾರು 380 ಪ್ರಕರಣಗಳಿದ್ದು, ಇವುಗಳಲ್ಲಿ ಈಗ 162 ಅರ್ಜಿಗಳು ಮಾತ್ರ ಬಾಕಿ ಇದ್ದು, ಉಳಿದವುಗಳನ್ನು ಸರಿಪಡಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಹಲವಾರು ಮಾರ್ಪಾಡಗಳಾಗುತ್ತಿದ್ದು, ಈಗ ಜಮೀನ ಮಾಲೀಕರ ಭಾವಚಿತ್ರದೊಂದಿಗೆ ಪಹಣಿ ಬರುತ್ತಿದೆ. ಇದಕ್ಕಾಗಿ ಕಂದಾಯ ಇಲಾಖೆಯ ಅಧಿಕಾರಿ ಮತ್ತು ನೌಕರರಿಗೆ ತರಬೇತಿ ನೀಡಲಾಗಿದೆ. ಇಂದು ಸುಮಾರು 93 ಜನರಿಗೆ ಸರ್ಕಾರದ ವಿವಿಧ ಯೋಜನೆಯಡಿ ಮಾಸಾಶನ ಮಂಜೂರು ಮಾಡಿದ ಪತ್ರವನ್ನು ನೀಡಲಾಗುತ್ತಿದೆ. ಕಂದಾಯ ಇಲಾಖೆ ಸದಾ ಜನರ ನಡುವೆ ಇದ್ದು ಕೆಲಸ ಮಾಡಲಿದೆ. ಜನರು ಮಧ್ಯವರ್ತಿಗಳ ಬಳಿ ಹೋಗದೆ ನೇರವಾಗಿ ಅಧಿಕಾರಿಗಳ ಬಳಿ ಹೋಗಿ ಕೆಲಸ ಮಾಡಿಸಿಕೊಳ್ಳಲು ಇಂತಹ ಅದಾಲತ್ತುಗಳು ಸಹಕಾರಿಯಾಗಿವೆ ಎಂದರು.

ಉರ್ಡಿಗೆರೆ ಹೋಬಳಿ ಕಂದಾಯ ಅದಾಲತ್ತಿನಲ್ಲಿ ಕೆಸರುಮಡು, ಸೀತಕಲ್ಲು, ಹಿರೇದೊಡ್ಡವಾಡಿ, ಮಂಚಕಲ್ಲುಕುಪ್ಪೆ, ಕ್ಯಾತ್ಸಂದ್ರ,ಮೈದಾಳ, ಉರ್ಡಿಗೆರೆ, ಅರೆಗುಜ್ಜನಹಳ್ಳಿ, ಅನೂಪನಹಳ್ಳಿ, ಹೀರೆಹಳ್ಳಿ, ಕೊಡಗಿಹಳ್ಳಿ ಕಂದಾಯ ವೃತ್ತಗಳಿಂದು ಸುಮಾರು ಐದು ನೂರಕ್ಕೂ ಹೆಚ್ಚು ಜನರು ಆಗಮಿಸಿ ಅರ್ಜಿ ಸಲ್ಲಿಸಿದರು.

ವೇದಿಕೆಯಲ್ಲಿ ಉರ್ಡಿಗೆರೆ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ, ಉಪಾಧ್ಯಕ್ಷೆ ಸುಗುಣ, ಪಿಡಿಓ ಚಂದ್ರಪ್ರಭ,ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

Share this article