ಮಂಗನಕಾಯಿಲೆ ಉಲ್ಬಣಿಸುವ ಮುನ್ನ ಎಚ್ಚರ ವಹಿಸಿ

KannadaprabhaNewsNetwork | Published : Feb 18, 2024 1:34 AM

ಸಾರಾಂಶ

ಈ ವರ್ಷ ಲಸಿಕೆ ಕೂಡಾ ಇಲ್ಲದ ಕಾರಣ ಮಂಗನಕಾಯಿಲೆ ಯಾವುದೇ ಕ್ಷಣದಲ್ಲಿ ಉಲ್ಬಣಿಸುವ ಆತಂಕವಿದೆ. ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಮಾಹಿತಿ ಕೊರತೆಯಾಗದಂತೆ ಕೆಎಫ್‍ಡಿ ಸೋಂಕಿನ ಬಗ್ಗೆ ಆರೋಗ್ಯ ಇಲಾಖೆ ಗಂಭೀರ ಎಚ್ಚರ ವಹಿಸಬೇಕಿದೆ. ಈ ಸೋಂಕಿನ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ವ್ಯಾಕ್ಸಿನೇಶನ್ ನೀಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಆರೋಗ್ಯ ಇಲಾಖೆ ಮುಂಜಾಗರೂಕತೆಯಿಂದ ಜನರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರೋಗಿಗಳು ಶುಲ್ಕ ನೀಡಬೇಕಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಸಭೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಈ ವರ್ಷ ಲಸಿಕೆ ಕೂಡಾ ಇಲ್ಲದ ಕಾರಣ ಮಂಗನಕಾಯಿಲೆ ಯಾವುದೇ ಕ್ಷಣದಲ್ಲಿ ಉಲ್ಬಣಿಸುವ ಆತಂಕವಿದೆ. ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಮಾಹಿತಿ ಕೊರತೆಯಾಗದಂತೆ ಕೆಎಫ್‍ಡಿ ಸೋಂಕಿನ ಬಗ್ಗೆ ಆರೋಗ್ಯ ಇಲಾಖೆ ಗಂಭೀರ ಎಚ್ಚರ ವಹಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ನಡೆದ ತ್ರೈಮಾಸಿಕ ಸಭೆಯ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ, ಈ ಸೋಂಕಿನ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ವ್ಯಾಕ್ಸಿನೇಶನ್ ನೀಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಆರೋಗ್ಯ ಇಲಾಖೆ ಮುಂಜಾಗರೂಕತೆಯಿಂದ ಜನರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರೋಗಿಗಳು ಶುಲ್ಕ ನೀಡಬೇಕಿಲ್ಲ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ.ನಟರಾಜ್ ಸಭೆಗೆ ಮಾಹಿತಿ ನೀಡಿ, ತಾಲೂಕಿನಲ್ಲಿ ಈವರೆಗೆ 13 ಮಂಗನಕಾಯಿಲೆ ಪ್ರಕರಣ ದಾಖಲಾಗಿದೆ. ಇವರಲ್ಲಿ 8 ಮಂದಿ ಮಣಿಪಾಲದಲ್ಲಿ ಹಾಗೂ 5 ಜನರು ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ದೂರದ ಊರಿನಿಂದ ಬಂದಿರುವ ಕಾರ್ಮಿಕರು ನಮ್ಮ ನಿಯಂತ್ರಣಕ್ಕೆ ಬರುತ್ತಿಲ್ಲ. ಅಂಥವರಲ್ಲೇ ಹೆಚ್ಚು ಪಾಸಿಟಿವ್ ಬಂದಿದೆ. ಕೊರೋನಾದ 5 ಪ್ರಕರಣಗಳು ಡಿಸೆಂಬರ್ ತಿಂಗಳಲ್ಲಿ ದಾಖಲಾಗಿದೆ ಎಂದು ಹೇಳಿದರು.

ಗಂಭೀರ ಸಂಶೋಧನೆ ಅಗತ್ಯ:

ಪಶುವೈದ್ಯ ಇಲಾಖೆಯ ಡಾ. ಮುರುಳೀಧರ್ ಅವರು ಕೆಎಫ್‍ಡಿ ಕುರಿತಂತೆ ಮಾತನಾಡಿ, ದಶಕಗಳಿಂದ ತಾಲೂಕನ್ನು ಬಿಡದೇ ಕಾಡುತ್ತಿರುವ ಮಂಗನ ಕಾಯಿಲೆ ಬಗ್ಗೆ ಗಂಭೀರವಾಗಿ ಸಂಶೋದನೆ ನಡೆಸುವ ಅಗತ್ಯವಿದೆ. ಈ ವರೆಗೆ ಕೇವಲ ಮಂಗಗಳ ಸುತ್ತಲೇ ಈ ಬಗ್ಗೆ ಚಿಂತನೆ ನಡೆದಿದೆ. ಪಟ್ಟಣ ವ್ಯಾಪ್ತಿಯಲ್ಲಿ ಭಾರಿ ಸಂಖ್ಯೆಯ ಮಂಗಗಳಿದ್ದರೂ ಈ ಸೋಂಕು ಈ ವರೆಗೆ ಪಟ್ಟಣದಲ್ಲಿ ಕಾಣಿಸಿಕೊಂಡಿಲ್ಲ. ರೋಗಾಣು ಹರಡುತ್ತಿರುವ ಟಿಕ್ಸ್ ಬೇರೆ ರೂಪ ತಾಳುತ್ತಿರುವಂತಿದೆ. ಈ ಬಗ್ಗೆ ಬೇರೆ ಆಯಾಮಗಳಿಂದಲೂ ರೀಸರ್ಚ್ ಮಾಡುವ ಅಗತ್ಯವಿದೆ ಎಂದರು.

ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ. ಈಗಾಗಲೇ ಕೊಳವೆಬಾವಿಗಳೂ ವಿಫಲವಾಗುತ್ತಿವೆ. ಹೀಗಾಗಿ, ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ಕುಡಿಯುವ ನೀರಿನ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡಚಣೆ ಮಾಡಬಾರದು ಎಂದು ತಾಕೀತು ಮಾಡಿದರು.

ಅರಣ್ಯ ಇಲಾಖೆ ಮೇಲಿನ ಚರ್ಚೆಯಲ್ಲಿ ಹೆದ್ದೂರಿನ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರು, ಕಾಡಿನಲ್ಲಿ ಪ್ರಾಣಿಗಳಿಗೂ ಕುಡಿಯುವ ನೀರು ಸಿಗದ ಕಾರಣ ಊರಿಗೆ ದಾಳಿ ಇಡುವ ಸಾಧ್ಯತೆಯಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದೂ ಹೇಳಿದರು.

ಶಾಲಾ ಆವರಣದಲ್ಲಿ ಬೆಳೆದು ನಿಂತಿರುವ ಮರಗಳ ಕಡಿತಲೆಗೆ ಅಡಚಣೆ ಮಾಡಿದಲ್ಲಿ ಸಂಭವಿಸುವ ಅವಘಡಗಳಿಗೆ ಅರಣ್ಯಾಧಿಕಾರಿಗಳೇ ಹೊಣೆಗಾರರಾಗಬೇಕಾದೀತು. ಗಾಳಿಮಳೆಗೆ ಮನೆಗಳ ಮೇಲೆ ಮರಗಳು ಬೀಳುವಂತಿದ್ದರೂ ಕಾನೂನಿನ ನೆವದಲ್ಲಿ ನೀವುಗಳು ಕ್ರಮ ತೆಗೆದುಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂಭವಿಸಬಹುದಾದ ಘಟನೆಗಳ ಗಂಭೀರತೆಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದೂ ಹೇಳಿದರು.

₹9.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೋಣಂದೂರಿನ ಸರ್ಕಾರಿ ಆಸ್ಪತ್ರೆ ಕಟ್ಟಡದ ಕಾಮಗಾರಿ ಮಾಹಿತಿ ಪಡೆದ ಶಾಸಕರು, ಈ ಮೊದಲು ನಿರ್ಮಿಸಿದ್ದ ಜೆಸಿ ಆಸ್ಪತ್ರೆ ಕಾಮಗಾರಿ ಕಳಪೆಯಾಗಿದೆ. ಕೋಣಂದೂರಿನ ಸರ್ಕಾರಿ ಆಸ್ಪತ್ರೆ ಕಾಮಗಾರಿಯಲ್ಲಿ ಸಣ್ಣ ದೋಷ ಕಂಡು ಬಂದರೂ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದೂ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಸಭೆಗೆ ಬಾರದಿರುವ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ನೋಟಿಸ್ ನೀಡಿ ಕ್ರಮ ತಗೋಬೇಕು, ಮಹತ್ವದ ಈ ಸಭೆಯನ್ನು ಗೌಣವಾಗಿ ಕಾಣುವವರನ್ನೂ ಗೌಣವಾಗಿ ಕಾಣಬೇಕಾದೀತು ಎಂದು ಎಚ್ಚರಿಸಿದರು.

- - - -17ಟಿಟಿಎಚ್ 03:

ತೀರ್ಥಹಳ್ಳಿ ತಾಲೂಕು ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. ಇಲಾಖೆಗಳ ಅಧಿಕಾರಿಗಳು ಇದ್ದರು.

Share this article