ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಪೊಲೀಸ್ ಇಲಾಖೆಯಲ್ಲಿ ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕಿರುವುದರಿಂದ ಸಹಜವಾಗಿ ಕರ್ತವ್ಯದ ಒತ್ತಡ ಇರುತ್ತದೆ. ಕೆಲಸ ಒತ್ತಡದ ಮಧ್ಯೆಯೂ ಪೊಲೀಸರು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ ಹೇಳಿದರು.ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ನಿಮಿತ್ತ ಲಿಂಗಸುಗೂರು ಪೊಲೀಸ್ ಉಪ ವಿಭಾಗದ ಲಿಂಗಸುಗೂರು, ಹಟ್ಟಿ, ಮುದಗಲ್, ದೇವದುರ್ಗ, ಮಸ್ಕಿ, ಜಾಲಹಳ್ಳಿ, ಗಬ್ಬೂರು ಸೇರಿದಂತೆ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ನಾನಾ ವಯೋಮಾನದ ಪೊಲೀಸ್ ಇಲಾಖೆ ಅಧಿಕಾರಿಗಳು, ಮುಖ್ಯಪೇದೆ, ಪೇದೆ, ಮಹಿಳಾ ಪೇದೆಗಳಿಗೆ ಆಯೋಜಿಸಿದ್ದ ವಾಕತಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಪಡೆದ ಲಿಂಗಸುಗೂರು ಎಎಸ್ಐ ಚೆನ್ನಪ್ಪ ರಾಠೋಡ, ಮಹಿಳಾ ಪೇದೆ ಸುಶ್ಮಾ, ಕುಮಾರ ಮಲ್ಲಿಕಾರ್ಜುನಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಪೊಲೀಸರು ಒತ್ತಡ ಕಾರ್ಯಾಭಾರ ಇರುತ್ತದೆ. ಇದರಿಂದ ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಆದ್ದರಿಂದ ಆರೋಗ್ಯದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಸಂಜೆ, ಬೆಳಗ್ಗೆ, ರಾತ್ರಿ ಸಮಯದ ಹೊಂದಾಣಿಕೆ ಮಾಡಿಕೊಂಡು ಕನಿಷ್ಠ 45 ನಿಮಿಷ ವಾಕ್ ಮಾಡಬೇಕು ಎಂದು ಸಲಹೆ ನೀಡಿದರು.ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಮೊಬೈಲ್ ಬಳಕೆ ಬಹಳ ಅಗತ್ಯವಾಗಿರುತ್ತದೆ. ಮೊಬೈಲ್‌ನಿಂದ ದೂರ ಇರುವುದು ಅಸಾಧ್ಯದ ಮಾತು ಆಗಿದೆ. ಆಧುನಿಕ ಸಲಕರಣೆಗಳೊಂದಿಗೆ ಮೊಬೈಲ್ ಬಳಸುತ್ತಾ ವಾಕ್ ಮಾಡಲು ಅವಕಾಶ ಇದೆ. ಉತ್ತಮ ಆರೋಗ್ಯಕ್ಕೆ ದಿನನಿತ್ಯ ವಾಕಿಂಗ್ ಮಾಡಿದರೆ ರಾಜನಂತೆ ಇರಬಹುದಾಗಿದೆ ಎಂದು ಸಲಹೆ ನೀಡಿದರು.
ಈ ವೇಳೆ ಸಿಪಿಐಗಳಾದ ಪುಂಡಲೀಕ ಪಟಾತರ್, ಹೊಸಕೇರಪ್ಪ ಸೇರಿದಂತೆ ಲಿಂಗಸುಗೂರು ಉಪ ವಿಭಾಗದ ವ್ಯಾಪ್ತಿಯ ಪಿಎಸ್ಐ, ಎಎಸ್ಐ, ಮುಖ್ಯಪೇದೆ, ಪೇದೆ ಹಾಗೂ ಮಹಿಳಾ ಸಿಬ್ಬಂದಿ ಪಾಲ್ಗೊಂಡಿದ್ದರು.