ಹನೂರು: ತಾಲೂಕಿನ ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತ ಕ್ರಮ ವಹಿಸಿ ಎಂದು ತಾಪಂ ಇಒ ಉಮೇಶ್ ವಿವಿಧ ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹನೂರು ಪಟ್ಟಣದ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ತಾಲೂಕಿನ ವಿವಿಧ ಗ್ರಾಪಂ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಳೆ ಇಲ್ಲದೆ ಬೇಸಿಗೆ ಪ್ರಾರಂಭವಾಗುತ್ತಿರುವ ಹಿನ್ನಲೆ ತಾಲೂಕಿನ ಹಲವಾರು ಜಲಾಶಯಗಳು ಕೆರೆಗಳು ಸೇರಿದಂತೆ ಕುಡಿಯುವ ನೀರಿನ ಜಲ ಮೂಲಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ, ಹಲವೆಡೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದ್ದು ಕುಡಿಯುವ ನೀರಿನ ಸಮಸ್ಯೆ ತಲೆದೂರಿರುವ ಗ್ರಾಮಗಳಲ್ಲಿ ಜನ ಜಾನುವಾರುಗಳು ಕುಡಿಯುವ ನೀರು ಸಿಗದಂತೆ ಪರಿತಪಿಸಬಾರದು, ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ಅಧಿಕಾರಿಗಳಿಗೆ ಸೂಚನೆನೀಡಿದರು.ತೆರಿಗೆ ವಸೂಲಾತಿಯಲ್ಲಿ ಚಾಮರಾಜನಗರ ಜಿಲ್ಲೆಗೆ ಹನೂರು ತಾಲೂಕು ನಾಲ್ಕನೇ ಸ್ಥಾನದಲ್ಲಿದೆ. ಅದ್ದರಿಂದ ಶೀಘ್ರವೇ ತೆರಿಗೆ ವಸೂಲಾತಿ ಹೆಚ್ಚಳಕ್ಕೆ ಕ್ರಮ ಜರುಗಿಸಬೇಕೆಂದು ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಕೆಲಸವನ್ನು ಪ್ರಾರಂಭಿಸದ ಸೂಳೇರಿಪಾಳ್ಯ, ಅಜ್ಜಿಪುರ, ಮಾರ್ಟಳ್ಳಿ, ಮಹದೇಶ್ವರ ಬೆಟ್ಟ, ರಾಮಾಪುರ ಗ್ರಾಪಂ ಅಧಿಕಾರಿಗಳು ಶೀಘ್ರವೇ ಪ್ರಾರಂಭಿಸುವ ಜೊತೆಗೆ ಹಾಗೆಯೇ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ನರೇಗಾ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಪ್ರಗತಿ ಸಾಧಿಸಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಬಿರುಬಿಸಿಲಿನಿಂದ ರೋಗರುಜನೆಗಳು ಬರದಂತೆ ಎಚ್ಚರವಹಿಸಿ ಸ್ವಚ್ಚತೆಗೆ ಆದ್ಯತೆ ನೀಡಿ ಎಂದರು. ಈ ಸಂದರ್ಭದಲ್ಲಿ ಹನೂರು ತಾಪಂ ಪ್ರಭಾರ ಅಧೀಕ್ಷಿಕ ರಮೇಶ್ ಎಂ, ಸೇರಿದಂತೆ ವಿವಿಧ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.