ಜಿಲ್ಲೆಯಲ್ಲಿ ಒತ್ತುವರಿ ತೆರವಿಗೆ ಅಗತ್ಯ ಕ್ರಮ ವಹಿಸಿ

KannadaprabhaNewsNetwork | Published : Nov 16, 2024 12:33 AM

ಸಾರಾಂಶ

ರಾಮನಗರ: ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ, ಅನಧಿಕೃತ ಲೇಔಟ್ ಗಳ ನಿರ್ಮಾಣವನ್ನು ಗುರುತಿಸಿ ಅವುಗಳ ತೆರವಿಗೆ ಕಾನೂನು ಪ್ರಕಾರ ಅಗತ್ಯ ಕ್ರಮ ವಹಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೂ (ವಿಪತ್ತು ನಿರ್ವಹಣೆ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾಮಾಜಿಕ ಭದ್ರತೆ) ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಮನಗರ: ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ, ಅನಧಿಕೃತ ಲೇಔಟ್ ಗಳ ನಿರ್ಮಾಣವನ್ನು ಗುರುತಿಸಿ ಅವುಗಳ ತೆರವಿಗೆ ಕಾನೂನು ಪ್ರಕಾರ ಅಗತ್ಯ ಕ್ರಮ ವಹಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೂ (ವಿಪತ್ತು ನಿರ್ವಹಣೆ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾಮಾಜಿಕ ಭದ್ರತೆ) ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ಜಿಲ್ಲೆಯಲ್ಲಿ ಜೂನ್‌ನಿಂದ ನವೆಂಬರ್ ಮಾಹೆಯವರೆಗೆ ವಾಡಿಕೆಯಂತೆ 806 ಮಿಲಿ ಮೀಟರ್ ಮಳೆ ಆಗಬೇಕಾಗಿತ್ತು. ಆದರೆ 777 ಮಿಲಿ ಮೀಟರ್ ಪ್ರಮಾಣದಷ್ಟು ಮಳೆಯಾಗಿದ್ದು, ಸ್ಪಲ್ಪ ಕಡಿಮೆಯಾಗಿದೆ. ಗ್ರಾಮ ಪಂಚಾಯತ್‌ಗಳಲ್ಲಿ ಮಳೆಹಾನಿ ಪ್ರದೇಶವನ್ನು ಸಮೀಕ್ಷೆ ಮಾಡಬೇಕು, ಪೂರ್ವ ಮುಂಗಾರುವಿನಲ್ಲಿ ಟೊಮೊಟೊ, ಬಾಳೆ, ಮಾವು ಇನ್ನು ಇತರೆ ಬೆಳೆಗಳು ಸೇರಿದಂತೆ ಒಟ್ಟು 95.59 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸಂಬಂಧಪಟ್ಟವರಿಗೆ ಪರಿಹಾರ ನೀಡಲು ಕ್ರಮವಹಿಸಬೇಕು ಹಾಗೂ ಅವರ ವಿವರಗಳನ್ನು ಕಚೇರಿ ಸೂಚನಾ ಫಲಕ ಹಾಗೂ ಜಿಲ್ಲಾಧಿಕಾರಿಗಳ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವಂತೆ ಸಲಹೆ ನೀಡಿದರು.

ಬೆಳೆ ಪರಿಹಾರಕ್ಕೆ ಜಿಲ್ಲೆಯಲ್ಲಿ ಪ್ರತಿ ಎಕರೆಗೆ 38,000 - 48,000 ರುಪಾಯಿ ಪರಿಹಾರ ಲಭಿಸಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 1,496 ಕೆರೆಗಳಿದ್ದು ಇದುವರೆವಿಗೂ 1,226 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಉಳಿದ 270 ಕೆರೆಗಳು ಸರ್ವೆ ಮಾಡಬೇಕಾಗಿದೆ ಎಂದು ಭೂದಾಖಲೆಗಳ ಉಪ ನಿರ್ದೇಶಕ ಹನುಮೇಗೌಡ ಸಭೆಗೆ ಮಾಹಿತಿ ನೀಡಿದರು. ಉಳಿದ 270 ಕೆರೆಗಳ ಸರ್ವೆ ಕಾರ್ಯವನ್ನು ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು ಹನ್ನೇರಡು ಸಾವಿರ ಎಕರೆಗಳಷ್ಟು ಜಮೀನು ಒತ್ತುವರಿ ಯಾಗಿದ್ದು ಇದರಲ್ಲಿ 1400 ಎಕರೆ ಜಮೀನನ್ನು ವಶಪಡಿಸಕೊಳ್ಳಲಾಗಿದೆ ಉಳಿದ ಒತ್ತುವರಿ ಜಮೀನನ್ನು ವಶಪಡಿಸಿಕೊಳ್ಳಲು ಕ್ರಮ ವಹಿಸುವಂತೆ ತಿಳಿಸಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಇದುವರೆವಿಗೆ ಒಂದು ಕೋಟಿ ಎಂಬತ್ತೇಳು ಲಕ್ಷ ರಾಜಸ್ವ ಗುರಿ ನೀಡಲಾಗಿತ್ತು ಆದರೆ ಜಿಲ್ಲೆಯಲ್ಲಿ ನಿಗಿದಪಡಿಸಿದ ಗುರಿಗಿಂತ ಹೆಚ್ಚಾಗಿ ಇದುವರೆಗೂ ಒಂದು ಕೋಟಿ ತೊಂಬತ್ತೊಂದು ಲಕ್ಷಗಳಷ್ಟು ಗುರಿಯನ್ನು ಸಾಧಿಸಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್, ಭೂದಾಖಲೆಗಳ ಇಲಾಖೆ, ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಕ್ರಮವಹಿಸುವಂತೆ ಹಾಗೂ ಇನ್ನು ಮುಂದೆ ಎಲ್ಲಾ ಕಚೇರಿಗಳು ಇ-ಆಫೀಸ್ ತಂತ್ರಾಂಶದಲ್ಲಿ ಪತ್ರ ಮತ್ತು ಕಡತಗಳನ್ನು ಮಂಡಿಸುವಂತೆ ಮತ್ತು ಎಲ್ಲಾ ಪರಿಹಾರ ಕಾರ್ಯಗಳಲ್ಲಿ ಆಧಾರ್ ಲಿಂಕ್ ಮಾಡಿಸಿ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಮೊತ್ತ ಪಾವತಿ ಮಾಡುವಂತೆ ಸೂಚಿಸಿದರು.

ಲಿಂಕ್‌ ಡ್ಯಾಂಕ್‌ಮೆಂಟ್‌ಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದು ಎಲ್ಲಾ ಇಲಾಖೆಗಳು ಬಿಡುಗಡೆಗೊಳಿಸಿರುವ ಅನುದಾನವನ್ನು ವೆಚ್ಚ ಮಾಡಲು ಕ್ರಮವಹಿಸಬೇಕು, ಬಾಕಿ ಇರುವ ಕಾಮಕಾರಿಗಳಿಗೆ ಕೂಡಲೇ ಟೆಂಡರ್ ಆಹ್ವಾನಿಸಲು ಕ್ರಮವಹಿಸಬೇಕು ಮತ್ತು ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಮುಂದಿನ ಅಗತ್ಯ ಕ್ರಮವಹಿಸುವಂತೆ ರಶ್ಮಿ ಮಹೇಶ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಚಿಕ್ಕ ಸುಬ್ಬಯ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

15ಕೆಆರ್ ಎಂಎನ್ 13.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ರಶ್ಮಿ ಮಹೇಶ್ ರವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Share this article